ರಾಜ್ಯದ ಅಗರಬತ್ತಿ ಉದ್ಯಮದ ನೆರವಿಗೆ ಬಂದ ಸಚಿವೆ ಶೋಭಾ; 10 ಲಕ್ಷಕ್ಕೂ ಅಧಿಕ ಮಂದಿಗೆ ಸಹಾಯ

Update: 2022-05-27 15:53 GMT
ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : ಕೇಂದ್ರ ಸರಕಾರದ ಆಮದು ನಿಯಮಗಳ ಪ್ರಕಾರ ಬಿದಿರು ಕಡ್ಡಿಗಳು ‘ಪ್ಲಾಂಟ್ ಕ್ಲಾರಂಟೇನ್’ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆಯಿಂದ ಅಗರಬತ್ತಿ ಉದ್ಯಮಕ್ಕೆ ಎದುರಾದ ಕಂಟಕವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರಿಹರಿಸಿ ಉದ್ಯಮಕ್ಕೆ ರಿಯಾಯಿತಿ ದೊರಕಿಸಿ ಕೊಟ್ಟಿದ್ದಾರೆ.

ಕಾರ್ಮಿಕ ಆಧಾರಿತ ಉದ್ಯಮವಾದ ಅಗರಬತ್ತಿ ತಯಾರಿಕೆಗೆ ಅಗತ್ಯದ ಕಚ್ಛಾ ವಸ್ತುವಾದ ಬಿದಿರು ಕಡ್ಡಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕೇಂದ್ರ ಸರಕಾರದ ಆಮದು ನಿಯಮದಿಂದ ಈ ಬಿದಿರು ಕಡ್ಡಿಗಳು ಪ್ಲಾಂಟ್ ಕ್ವಾರಟೇನ್ ಪರೀಕ್ಷೆಗೊಳಪಡಬೇಕಾಗಿತ್ತು.

ಇದರಿಂದಾಗಿ ಅಗರಬತ್ತಿ ಉದ್ಯಮಕ್ಕೆ ಅಗತ್ಯವಾದ ಬಿದಿರು ಕಡ್ಡಿಗಳು ಸಮಯಕ್ಕೆ ಸರಿಯಾಗಿ ಕಾರ್ಖಾನೆ/ಕಂಪೆನಿಗಳಿಗೆ ತಲುಪುತ್ತಿರಲಿಲ್ಲ. ಈ ಕಾರಣದಿಂದ 10 ಲಕ್ಷಕ್ಕೂ ಅಧಿಕ ಮಂದಿ ಅವಲಂಬಿತವಾಗಿರುವ ಅಗರಬತ್ತಿ ಉದ್ಯಮ ಕಚ್ಚಾವಸ್ತುವಿನ ಕೊರತೆಯನ್ನು ಅನುಭವಿಸಿತ್ತು. 

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಅಗರಬತ್ತಿ ಉತ್ಪಾದಕರ ಸಂಘ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಉದ್ಯಮದ ಸಮಸ್ಯೆಯನ್ನು ತೋಡಿಕೊಂಡಿದ್ದರು. ಅಗರಬತ್ತಿ ಉದ್ಯಮದ ಸಮಸ್ಯೆಯನ್ನು ಮನಗಂಡ ಕೇಂದ್ರ ಸಚಿವೆ ತಕ್ಷಣ ಕೇಂದ್ರ ಕೃಷಿ ಇಲಾಖೆಯ ಪ್ಲಾಂಟ್ ಕ್ವಾರಂಟೈನ್ ವಿಭಾಗಕ್ಕೆ ಸೂಚನೆ ನೀಡಿ, ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿಯನ್ನು ನೀಡುವಂತೆ ಆದೇಶಿಸಿದ್ದರು.

ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರ ಸೂಚನೆಯಂತೆ ಕೃಷಿ ಇಲಾಖೆಯು 6ಮಿ.ಮೀ.ಗಿಂತ ಕೆಳಗಿನ ಬಿದಿರು ಕಡ್ಡಿಗಳಿಗೆ ಪ್ಲಾಂಟ್ ಕ್ವಾರಂಟೈನ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಿ ಮೇ 24ರಂದು ಆದೇಶ ಹೊರಡಿಸಿದೆ.

ಸಚಿವೆ ಶೋಭಾ ಕರಂದ್ಲಾಜೆ ಅವರ ಮಧ್ಯಪ್ರವೇಶದಿಂದ 10 ಲಕ್ಷಕ್ಕೂ ಹೆಚ್ಚಿನ ಜನರ ಜೀವನಾಧಾರವಾಗಿದ್ದ ಅಗರಬತ್ತಿ ಉದ್ಯಮಕ್ಕೆ ಬಹು ದೊಡ್ಡ ಸಹಾಯವಾಗಿದ್ದು, ಅಖಿಲ ಭಾರತೀಯ ಅಗರಬತ್ತಿ ಉದ್ಯಮಿಗಳ ಸಂಘಟನೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೃತಜ್ಞತೆಯನ್ನು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News