ಸಿಂಗಾಪುರ: ಮಾದಕವಸ್ತು ಕಳ್ಳಸಾಗಣೆ ಪ್ರಕರಣ; ಭಾರತೀಯ ಮೂಲದ ಇಬ್ಬರ ಖುಲಾಸೆ

Update: 2022-05-27 17:09 GMT

ಸಿಂಗಾಪುರ, ಮೇ 27: ಕಳೆದ ವರ್ಷ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳನ್ನು ಸಿಂಗಾಪುರದ ಉಚ್ಛನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಇದರಲ್ಲಿ ಓರ್ವ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

ಭಾರತೀಯ ಮೂಲದವರಾದ ರಾಜ್ಕುಮಾರ್ ಅಯಿಚಾಮಿ ಹಾಗೂ ರಾಮದಾಸ್ ಪುನ್ನುಸಾಮಿ ಶಿಕ್ಷೆ ರದ್ದತಿಗೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ನೇತೃತ್ವದ 3 ಸದಸ್ಯರ ನ್ಯಾಯಪೀಠ ಕೈಗೆತ್ತಿಕೊಂಡಿತ್ತು. ರಾಜ್ಕುಮಾರ್ಗೆ ಮರಣದಂಡನೆ, ರಾಮದಾಸ್‌ಗೆ ಜೀವಾವಧಿ ಶಿಕ್ಷೆ ಮತ್ತು 15 ಛಡಿಯೇಟಿನ ಶಿಕ್ಷೆ ಪ್ರಕಟಿಸಲಾಗಿತ್ತು.

 2015ರ ಸೆಪ್ಟಂಬರ್ 21ರಂದು ರಾಮದಾಸ್ 1.875 ಕಿ.ಗ್ರಾಂನಷ್ಟು ಗಾಂಜಾ ಇದ್ದ ಬ್ಯಾಗನ್ನು ರಾಜ್‌ಕುಮಾರ್‌ಗೆ ಹಸ್ತಾಂತರಿಸುತ್ತಿದ್ದ ಸಂದರ್ಭ ಅವರನ್ನು ಸಿಂಗಾಪುರದ ಮಾದಕವಸ್ತು ನಿಗ್ರಹ ದಳದವರು ಬಂಧಿಸಿದ್ದರು. ತಾನು ಬಟರ್‌ಫ್ಲೈ ಎಂದು ಕರೆಯಲಾಗುವ ಸಿಂಥೆಟಿಕ್ ರಾಸಾಯನಿಕ ಲೇಪಿಸಿದ ತಂಬಾಕಿಗೆ ಆರ್ಡರ್ ಸಲ್ಲಿಸಿದ್ದೆ. ಬ್ಯಾಗ್‌ನಲ್ಲಿ ಇದ್ದದ್ದು ಗಾಂಜಾ ಎಂದು ತನಗೆ ತಿಳಿದಿರಲಿಲ್ಲ ಎಂದು ರಾಜ್‌ಕುಮಾರ್‌ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದ. ತಾನು ಸರಬರಾಜು ಮಾಡಿರುವುದು ಗಾಂಜಾ ಎಂದು ತಿಳಿದಿರಲಿಲ್ಲ. ತನ್ನ ಲಾರಿಯಲ್ಲಿದ್ದ 4 ಬ್ಯಾಗ್‌ಗಳನ್ನು ರಾಜ್‌ಕುಮಾರ್‌ ಎಂಬವರಿಗೆ ತಲುಪಿಸಲು ತನಗೆ ಸೂಚಿಸಲಾಗಿತ್ತು ಎಂದು ಲಾರಿಯ ಚಾಲಕನಾಗಿದ್ದ ರಾಮದಾಸ್ ಉಲ್ಲೇಖಿಸಿದ್ದ. ಇಬ್ಬರ ಹೇಳಿಕೆಯನ್ನು ಆಲಿಸಿದ ಅಪೀಲು ಹಾಗೂ ಮೇಲ್ಮನವಿ ನ್ಯಾಯಾಲಯದ ತ್ರಿಸದಸ್ಯ ಪೀಠ, ಅವರ ವಾದವನ್ನು ಎತ್ತಿಹಿಡಿದು ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News