ತೆಲಂಗಾಣ: ಅನ್ಯಧರ್ಮೀಯ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯನ್ನು ಹತ್ಯೆಗೈದ ಸಂಬಂಧಿಕರು

Update: 2022-05-27 17:57 GMT

ಆದಿಲಾಬಾದ್,ಮೇ 27: ಮುಸ್ಲಿಮ್ ಯುವಕನನ್ನು ಮದುವೆಯಾಗಿದ್ದ 20ರ ಹರೆಯದ ಹಿಂದು ಯುವತಿಯನ್ನು ಆಕೆಯ ಸಂಬಂಧಿಗಳೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆದಿಲಾಬಾದ್ ಜಿಲ್ಲೆಯ ನರ್ನೂರಿನಲ್ಲಿ ನಡೆದಿರುವುದು ವರದಿಯಾಗಿದೆ.

ನರ್ನೂರು ನಿವಾಸಿಗಳಾದ ಮೃತ ಯುವತಿ ಮತ್ತು ಮುಸ್ಲಿಮ್ ಯುವಕ ದೀರ್ಘ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದು,ಒಂದು ತಿಂಗಳ ಹಿಂದೆ ತಮ್ಮ ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು.

ಕೆಲವು ದಿನಗಳ ಹಿಂದೆ ಎರಡೂ ಕುಟುಂಬಗಳು ಉಭಯ ಕಡೆಗಳ ಹಿರಿಯರ ಉಪಸ್ಥಿತಿಯಲ್ಲಿ ಪಂಚಾಯತಿಯನ್ನು ನಡೆಸಿದ್ದವು. ಬಳಿಕ ಯುವತಿಯನ್ನು ಆಕೆಯ ಕುಟುಂಬ ಸದಸ್ಯರೊಂದಿಗೆ ಮನೆಗೆ ಕಳುಹಿಸಲಾಗಿತ್ತು. ಶುಕ್ರವಾರ ಯುವತಿ ತನ್ನ ಮನೆಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದು,ಕುಟುಂಬದ ಸದಸ್ಯರು ಕೊಲೆಯ ಹಿಂದೆ ಇರುವುದನ್ನು ಪೊಲೀಸರು ವಿಚಾರಣೆಯಿಂದ ದೃಢಪಡಿಸಿಕೊಂಡಿದ್ದಾರೆ. 

ಕುಟುಂಬದ ಸದಸ್ಯರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿದ್ದ ಕುಟುಂಬ ಸದಸ್ಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ರಾಜೇಶ್ವರಿಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದು,ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಎಂದು ವರದಿಗಳು ತಿಳಿಸಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News