ಸಾಲ ಮರುಪಾವತಿಸಲು ವಿಫಲ: ದಲಿತ ವ್ಯಕ್ತಿಯನ್ನು ಸರಪಳಿಯಿಂದ ಬಿಗಿದು ಹಟ್ಟಿಯಲ್ಲಿ ಕಟ್ಟಿಹಾಕಿ ಹಲ್ಲೆ

Update: 2022-05-28 02:34 GMT

ಜೈಪುರ: ಪಡೆದ ಸಾಲವನ್ನು ಮರುಪಾವತಿ ಮಾಡಲು ವಿಫಲರಾದ 35 ವರ್ಷ ವಯಸ್ಸಿನ ದಲಿತ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಥಳಿಸಿ, ಸರಪಳಿಯಿಂದ ಬಿಗಿದು ದನದ ಕೊಟ್ಟಿಗೆಯಲ್ಲಿ 31 ಗಂಟೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಅಮಾನುಷ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಆರು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಬುಂಡಿ ಜಿಲ್ಲೆಯ ತಲೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ದಿನಗೂಲಿಯಾಗಿರುವ ದಲಿತ ಯುವಕನನ್ನು ಸ್ಥಳೀಯ ಭೂಮಾಲೀಕರು ಥಳಿಸಿ, ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು ಎಂದು ಆರೋಪಿಸಲಾಗಿದೆ.

ರಾಧೇಶ್ಯಾಂ ಮೇಘವಾಲ್ ಎಂಬುವವರು ಭೂಮಾಲೀಕ ಪರಮಜೀತ್ ಸಿಂಗ್, ಆತನ ತಮ್ಮ ಹಾಗೂ ಇತರ ನಾಲ್ಕು ಮಂದಿಯ ವಿರುದ್ಧ ದೂರು ನೀಡಿದ್ದು, ಅಪಹರಣ ಮಾಡಿ ಚಿತ್ರಹಿಂಸೆ ನೀಡಿದ್ದಾಗಿ ವಿವರಿಸಲಾಗಿದೆ ಎಂದು ಎಸ್ಪಿ ಶಂಕರ್‍ಲಾಲ್ ವಿವರಿಸಿದ್ದಾರೆ.

"ಮೂರು ವರ್ಷ ಹಿಂದೆ ವಾರ್ಷಿಕ 70 ಸಾವಿರ ರೂಪಾಯಿ ಸಂಬಳಕ್ಕೆ ನನ್ನನ್ನು ಕೂಲಿಗೆ ಸಿಂಗ್ ನಿಯೋಜಿಸಿಕೊಂಡಿದ್ದರು. ಸಹೋದರಿಯ ಮದುವೆಗಾಗಿ 30 ಸಾವಿರ ರೂಪಾಯಿ ಸಾಲವನ್ನೂ ಪಡೆದಿದ್ದೆ. 2019ರ ಮೇ ತಿಂಗಳಿನಿಂದ 2020ರ ಏಪ್ರಿಲ್‍ವರೆಗೆ 70 ಸಾವಿರ ಸಂಬಳಕ್ಕೆ ನಿಯೋಜಿಸಿಕೊಳ್ಳಲಾಗಿತ್ತು. ಆರು ತಿಂಗಳ ಕಾಲ ಹೊಲದಲ್ಲಿ ದಿನದ 24 ಗಂಟೆಯೂ ದುಡಿಸಿಕೊಳ್ಳಲಾಗಿತ್ತು. ಈ ಹಂತದಲ್ಲಿ ಅಸ್ವಸ್ಥನಾಗಿ ಕೂಲಿ ತೊರೆಯಬೇಕಾಯಿತು” ಎಂದು ಮೇಘವಾಲ್ ದೂರಿನಲ್ಲಿ ಹೇಳಿದ್ದಾರೆ.

ಕೆಲಸ ತೊರೆದ ಬಳಿಕ ಸಿಂಗ್ ಬಡ್ಡಿ ಸೇರಿ 1,10,000 ರೂಪಾಯಿ ವಾಪಾಸು ನೀಡುವಂತೆ ಸಿಂಗ್ ಒತ್ತಾಯಿಸಿದ್ದ ಎನ್ನಲಾಗಿದೆ. ಕೆಲಸ ತೊರೆದ ಬಳಿಕ 2020ರಲ್ಲಿ 25 ಸಾವಿರ ರೂಪಾಯಿ ವಾಪಾಸು ಮಾಡಿದ್ದೆ. ಆದರೆ ಸಿಂಗ್ ಹಾಗೂ ಆತನ ತಮ್ಮ 2021ರಲ್ಲಿ ನನ್ನನ್ನು ಗ್ರಾಮದಿಂದ ಬಲವಂತವಾಗಿ ಕರೆದೊಯ್ದು 10 ದಿನಗಳ ಕಾಲ ಕೊಯ್ಲು ಮಾಡಿಸಿದ್ದರು ಎಂದು ವಿವರಿಸಿದ್ದಾರೆ. ಈ ವರ್ಷದ ಮೇ 22ರಂದು ಮತ್ತೆ ಮನೆಯಿಂದ ನನ್ನನ್ನು ಕರೆದೊಯ್ದು ಕಟ್ಟಿಹಾಕಿ ಥಳಿಸಿ ಚಿತ್ರಹಿಂಸೆ ನೀಡಿದ್ದಾಗಿ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News