ಬದಿಯಡ್ಕ ! ರಿಯಲ್ ಎಸ್ಟೇಟ್ ಏಜೆಂಟ್ ನ ಅಪಹರಣ: ಗಂಟೆಗಳ ಅವಧಿಯಲ್ಲಿ ಆರೋಪಿಗಳ ಬಂಧನ

Update: 2022-05-28 06:18 GMT
ಬಂಧಿತ ಆರೋಪಿಗಳು

ಕಾಸರಗೋಡು, ಮೇ 28: ರಿಯಲ್ ಎಸ್ಟೇಟ್ ಏಜೆಂಟ್ ಓರ್ವರನ್ನು ತಂಡವೊಂದು ಅಪಹರಿಸಿದ ಘಟನೆ ಶುಕ್ರವಾರ ಸಂಜೆ ಬದಿಯಡ್ಕ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಂಟೆಗಳ ಅವಧಿಯಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಮೂವರು ಆರೋಪಿಗಳನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೀರ್ಚಾಲು ಗೋಳಿಯಡ್ಕದ ಮೊಯ್ದಿನ್ (49) ಅಪಹರಣಕ್ಕೀಡಾದ ರಿಯಲ್ ಎಸ್ಟೇಟ್ ಏಜೆಂಟ್. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಚೆಂಗಳ 4ನೇ‌ ಮೈಲು ನಿವಾಸಿ ಶರೀಫ್(37), ಪಾದೂರಿನ  ಜಮಾಲುದ್ದೀನ್(27) ಮತ್ತು ಚೆಂಗಳ ಪಾಣಾರಕುಲಂನ ಹಕೀಂ(36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಹರಣಕ್ಕೆ ಹಣಕಾಸಿನ ವ್ಯವಹಾರ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಮೊಯ್ದಿನ್ ಅವರನ್ನು ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಿಂದ ಮೂವರ ತಂಡ ಬಲವಂತವಾಗಿ ಕಾರಿಗೆ ಹತ್ತಿಸಿ ಅಪಹರಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ನೀರ್ಚಾಲು ಮಾನ್ಯ ಎಂಬಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

 ಮೊಯ್ದಿನ್ ಕಾಸರಗೋಡು ನಿವಾಸಿಯೋರ್ವರಿಗೆ ನೀಡಲೆಂದು 60 ಲಕ್ಷ ರೂ. ಸಹಿತ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ. ಮೊಯ್ದಿನ್ ರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News