ಫಲ ನೀಡದ ಕಾಶ್ಮೀರಿ ಪಂಡಿತ ಉದ್ಯೋಗಿಗಳ ಮಾತುಕತೆ; ಮುಷ್ಕರ ತೀವ್ರಗೊಳಿಸಲು ನಿರ್ಧಾರ

Update: 2022-05-29 01:58 GMT
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಆಡಳಿತದ ಜತೆಗೆ ನಡೆದ ಮೊದಲ ಸುತ್ತಿನ ಮಾತುಕತೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಮುಷ್ಕರವನ್ನು ತೀವ್ರಗೊಳಿಸಲು ಕಾಶ್ಮೀರಿ ಪಂಡಿತ ಉದ್ಯೋಗಿಗಳು ನಿರ್ಧರಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂಬ ಪ್ರಮುಖ ಬೇಡಿಕೆ ಬಗ್ಗೆ ಅಧಿಕಾರಿಗಳ ಜತೆ ನಡೆಸಿದ ಮಾತುಕತೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಶುಕ್ರವಾರ ಕಾಶ್ಮೀರಿ ಪಂಡಿತ ಉದ್ಯೋಗಿಗಳನ್ನು ಪ್ರತಿನಿಧಿಸುವ 25 ಮಂದಿಯ ನಿಯೋಗ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿಂಹ ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳನ್ನು ರಾಜಭವನದಲ್ಲಿ ಭೇಟಿ ಮಾಡಿತ್ತು.

"ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಾತುಕತೆಯ ವೇಳೆ ಲೆಫ್ಟಿನೆಂಟ್ ಗವರ್ನರ್ ಭರವಸೆ ನೀಡಿದರು" ಎಂದು ಸಮುದಾಯದ ಪುನರ್ವಸತಿಗಾಗಿ 2008ರಲ್ಲಿ ಆರಂಭವಾದ ಪಿಎಂ ಪ್ಯಾಕೇಜ್ ಅಡಿಯಲ್ಲಿ ನಿಯೋಜಿತರಾಗಿರುವ ಕಾಶ್ಮೀರಿ ಪಂಡಿತರ ಪರ ವಕ್ತಾರರು ಹೇಳಿದ್ದಾರೆ.

"ನಾವು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ನಮ್ಮ ಪ್ರಮುಖ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಚದೂರದಲ್ಲಿ ತಹಸೀಲ್ ಕಚೇರಿಯಲ್ಲಿ ನಿಯೋಜಿತರಾಗಿದ್ದ ರಾಹುಲ್ ಭಟ್ ಎಂಬವರನ್ನು ಉಗ್ರರು ಈ ತಿಂಗಳ 12ರಂದು ಹತ್ಯೆ ಮಾಡಿದ ಬಳಿಕ, ನೂರಾರು ಮಂದಿ ಕಾಶ್ಮೀರಿ ಪಂಡಿತ ಉದ್ಯೋಗಿಗಳು ತಮ್ಮ ಕರ್ತವ್ಯವನ್ನು ಬಹಿಷ್ಕರಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸುವ ಮೂಲಕ ಸುರಕ್ಷಿತವಾಗಿ ಇರಲು ಅವಕಾಶ ಮಾಡಿಕೊಡಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News