ಮಳೆಗಾಲಕ್ಕೆ ಉಡುಪಿ ಮೆಸ್ಕಾಂ ಸಜ್ಜು; ‘ಮಾನ್ಸೂನ್ ಗ್ಯಾಂಗ್’ಗೆ 138 ಮಂದಿ, ತುರ್ತು ವಾಹನ
ಉಡುಪಿ : ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಮೆಸ್ಕಾಂ ಉಡುಪಿ, ಕುಂದಾಪುರ, ಕಾರ್ಕಳ ಭಾಗದಲ್ಲಿ ಕಾರ್ಯನಿರ್ವಹಣೆಗೆ ಸಜ್ಜಾಗಿದ್ದು, ಮೂರು ವಿಭಾಗಕ್ಕೆ ಪ್ರತ್ಯೇಕವಾಗಿ ‘ಮಾನ್ಸೂನ್ ಗ್ಯಾಂಗ್’ ವಿಶೇಷ ಪಡೆಗೆ ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ವಿದ್ಯುತ್ ಪೂರೈಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮತ್ತು ಜೀವ ಹಾನಿ ಸಂಭವಿಸದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಮೆಸ್ಕಾಂ ಈ ವಿಶೇಷ ಕಾರ್ಯ ಯೋಜನೆಯನ್ನು ರೂಪಿಸಿದೆ. ಅದರಂತೆ ಈ ವಿಶೇಷ ಪಡೆಯು ಮೆಸ್ಕಾಂನ ೫೨ ಸೆಕ್ಷನ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.
ತಾಂತ್ರಿಕ ಕೆಲಸ, ಬಾಕಿ ಬಿಲ್ ವಸೂಲಿ, ಕಂಬ ಹತ್ತಿ ಪರಿಶೀಲನೆಯನ್ನು ಮೆಸ್ಕಾಂ ಲೈನ್ ಮೆನ್ಸ್ ನೋಡಿಕೊಂಡರೆ, ಕಂಬ, ಲೈನ್‌ಗಳ ಮೇಲೆ ಬೀಳುವ ಅಪಾಯಕಾರಿ ಮರ ತೆರವುಗೊಳಿಸುವ ಕೆಲಸ ಮತ್ತು ಕಂಬಗಳ ಬದಲಾವಣೆ, ಕೆಳಗೆ ಬಿದ್ದಿರುವ ತಂತಿಗಳ ನಿರ್ವಹಣೆ ಕೆಲಸವನ್ನು ಮಾನ್ಸೂನ್ ಗ್ಯಾಂಗ್ ಪಡೆ ಮಾಡಲಿದೆ. ಈಗಾಗಲೇ ಮಾನ್ಸೂನ್ ಗ್ಯಾಂಗ್ ತೆಂಗಿನ ತೋಟ, ಗಿಡಮರಗಳು ಹೆಚ್ಚಿರುವ ಪ್ರದೇಶಗಳಲ್ಲಿ ಕಾರ್ಯಾರಂಭಿಸಿದೆ.
138 ಕಾರ್ಮಿಕರ ನೇಮಕ
ಸಾರ್ವಜನಿಕ ದೂರು ಸೇರಿದಂತೆ ವಿವಿಧ ತುರ್ತು ಕೆಲಸಗಳಿಗೆ ಮೆಸ್ಕಾಂ ಮಾನ್ಸೂನ್ ಗ್ಯಾಂಗ್‌ನಲ್ಲಿ ಕಾರ್ಯ ನಿರ್ವಹಿಸಲು 138 ಮಂದಿ ತಾತ್ಕಾಲಿಕ ಕಾರ್ಮಿಕರನ್ನು ನಿಯೋಜಿಸಲಾಗಿದೆ ಮತ್ತು 11 ತುರ್ತು ವಾಹನಗಳನ್ನು ಒದಗಿಸಲಾಗಿದೆ.
ಮನ್ಸೂನ್ ಗ್ಯಾಂಗ್‌ಗೆ ಉಡುಪಿ ವಿಭಾಗದಲ್ಲಿ 52, ಕುಂದಾಪುರ 56, ಕಾರ್ಕಳದಲ್ಲಿ 30 ಮಂದಿ ನೇಮಕ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ತುರ್ತು ಕಾರ್ಯಕ್ಕೆ ತೆರಳಲು ಅನುಕೂಲ ವಾಗುವಂತೆ ಉಡುಪಿಗೆ ಐದು, ಕಾರ್ಕಳಕ್ಕೆ ನಾಲ್ಕು ಮತ್ತು ಕುಂದಾಪುರಕ್ಕೆ ಎರಡು ವಾಹನಗಳನ್ನು ಒದಗಿಸಲಾಗಿದೆ.
ಮಳೆಗಾಲದಲ್ಲಿ ಮೆಸ್ಕಾಂ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹೆಚ್ಚುವರಿ ವಾಹನಗಳನ್ನು ಪಡೆದು ಕಾರ್ಕಳ, ಉಡುಪಿ, ಕುಂದಾಪುರಕ್ಕೆ ನೀಡಲಾಗಿದೆ. ದೂರುಗಳನ್ನು ಮೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಗಂಭೀರ ಸಮಸ್ಯೆ, ದೂರುಗಳಿದ್ದಲ್ಲಿ ಆಯಾ ವ್ಯಾಪ್ತಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮೆಸ್ಕಾಂ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್ ತಿಳಿಸಿದ್ದಾರೆ.