ಮೊದಲ ಬಾರಿ ಐಪಿಎಲ್ ಕಿರೀಟ ಧರಿಸಿದ ಗುಜರಾತ್ ಟೈಟಾನ್ಸ್

Update: 2022-05-30 02:29 GMT

ಅಹಮದಾಬಾದ್: ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಮಣಿಸಿದ  ಗುಜರಾತ್ ಟೈಟಾನ್ಸ್ ಇದೇ ಮೊದಲ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ತಾನಾಡಿದ ಮೊದಲ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ತವರು ಅಂಗಣದಲ್ಲಿ ನಡೆದ ಫೈನಲ್ ಫೈಟ್ ನಲ್ಲಿ ಭರ್ಜರಿ ಜಯ ದಾಖಲಿಸಿದ ಗುಜರಾತ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಯಿತು.

ಗೆಲ್ಲಲು ಸುಲಭ ಸವಾಲು ಬೆನ್ನಟ್ಟಿದ ಗುಜರಾತ್ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ  ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್(ಔಟಾಗದೆ 45, 43 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 32, 19 ಎಸೆತ, 3 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು. ಈ ಜೋಡಿ 4ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ47  ರನ್ ಸೇರಿಸಿತು.

ಬೌಲಿಂಗ್ ನಲ್ಲಿ 17 ರನ್ ನೀಡಿ 3 ವಿಕೆಟ್ ಗಳನ್ನು ಕಬಳಿಸಿದ್ದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಲ್ಲೂ ಅಮೂಲ್ಯ ಕಾಣಿಕೆ(34 ರನ್, 30 ಎಸೆತ,3 ಬೌಂಡರಿ, 1 ಸಿಕ್ಸರ್)ನೀಡಿದರು. ತಂಡವು 4.3ನೇ ಓವರ್ ನಲ್ಲಿ ಆರಂಭಿಕ ಬ್ಯಾಟರ್ ಸಹಾ(5 ರನ್ ) ಹಾಗೂ ಮ್ಯಾಥ್ಯೂ ವೇಡ್(8 ರನ್ ) ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಾಗ ಗಿಲ್ ಅವರೊಂದಿಗೆ ಕೈಜೋಡಿಸಿದ ಹಾರ್ದಿಕ್ ಪಾಂಡ್ಯ 3ನೇ ವಿಕೆಟ್ ಗೆ 63 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಟೂರ್ನಿಯಲ್ಲಿ ಗರಿಷ್ಟ ರನ್ (ಜೋಸ್ ಬಟ್ಲರ್ ,863 ರನ್), ಹಾಗೂ ಗರಿಷ್ಠ ವಿಕೆಟ್ ಪಡೆದ ಬೌಲರ್(ಯಜುವೇಂದ್ರ ಚಹಾಲ್ 27 ವಿಕೆಟ್)ಇದ್ದರೂ  14 ವರ್ಷಗಳ ಬಳಿಕ ಎರಡನೇ ಬಾರಿ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News