ಸಂತಸ ತರಲಿ ಮುಂಗಾರು ಮಳೆ
ದೇಶದ ಶೇ. 75 ಭಾಗದಷ್ಟು ಬೇಸಾಯ ಮುಂಗಾರು ಮಳೆಯನ್ನೇ ಅವಲಂಬಿಸಿದ್ದು, ರೈತನು ಬೀಜ, ಗೊಬ್ಬರಗಳನ್ನು ಸಾಲಕ್ಕೆ ಪಡೆದು ತನ್ನ ಶ್ರಮವನ್ನು ಹಾಕಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬರದೇಹೋದರೆ ಕಂಗಾಲಾಗುತ್ತಾನೆ. ಕೆಲವೊಮ್ಮೆ ವಿಧಿಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸರಿಯಾಗಿ ಮಳೆಯಾಗದೆ ಅಣೆಕಟ್ಟುಗಳು ತುಂಬದೆ ಹೋದರೂ ನೀರಾವರಿ ಕೃಷಿ ಮಾಡುವ ರೈತನ ಸ್ಥಿತಿಯೂ ಅದೇ ಆಗಿರುತ್ತದೆ.
ಇನ್ನೇನು ಮುಂಗಾರು ಮಳೆ ಪ್ರಾರಂಭವಾಗಲಿದ್ದು ದೇಶವೆಲ್ಲ ತೊಯ್ದು ತೊಪ್ಪೆಯಾಗಲಿದೆ. ಇಡೀ ದೇಶದ ರೈತರು ಮೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಮುಂಗಾರು ಮಳೆಯನ್ನು ಎದುರು ನೋಡುತ್ತಿದ್ದರೆ, ಪವನಶಾಸ್ತ್ರಜ್ಞರು ಹಿಂದೂ ಮಹಾಸಾಗರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಾ ಮುನ್ಸೂಚನೆಗಳನ್ನು ಕೊಡುತ್ತಾರೆ. ಆದರೆ ನಿಸರ್ಗದ ಮೇಲೆ ಅವಲಂಬಿತವಾಗಿರುವ ಮುಂಗಾರು ಮಳೆ ಮಾತ್ರ ಯಾವ ರೀತಿಯಾಗಿ ವರ್ತಿಸುತ್ತದೆ ಎನ್ನುವುದು ತಿಳಿಯುವುದು ಇಂದಿಗೂ ಕಷ್ಟವಾಗಿದೆ. ನಮ್ಮ ದೇಶವನ್ನು ಒಂದು ಚಿಟ್ಟೆ ಎಂದು ಊಹಿಸಿಕೊಂಡು ಅದಕ್ಕೆ ಎರಡು ರೆಕ್ಕೆಗಳನ್ನು ಸಿಕ್ಕಿಸಿದರೆ ಒಂದು ರೆಕ್ಕೆ ಬಂಗಾಲಕೊಲ್ಲಿಯ ಮೇಲೆ, ಇನ್ನೊಂದು ರೆಕ್ಕೆ ಅರೇಬಿಯನ್ ಸಮುದ್ರದ ಮೇಲೆ ಇರುತ್ತದೆ. ಮುಂಗಾರು ಮೋಡಗಳ ವಿಮಾನ ವಾಲಾಡುತ್ತಾ ಚಲಿಸುತ್ತಾ ಸಾಗಿ ಕೊನೆಗೆ ಒಂದು ರೆಕ್ಕೆ ಬಾಂಗ್ಲಾ ದೇಶ-ಈಶಾನ್ಯ ಹಿಮಾಲಯ ಮೇಲೆ, ಇನ್ನೊಂದು ರೆಕ್ಕೆ ಪಾಕಿಸ್ತಾನ-ಹಿಮಾಲಯ ಮೇಲಕ್ಕೆ ಸಾಗಿಹೋಗುತ್ತದೆ. ಮುಂಗಾರು ಮೋಡಗಳು ಹೀಗೆ ಸಾಗುತ್ತಾಹೋಗಿ ಒಂದು ತಿಂಗಳ ಅವಧಿಯಲ್ಲಿ ಇಡೀ ದೇಶವನ್ನು ಆವರಿಸಿಕೊಳ್ಳುತ್ತವೆ. ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ಪ್ರಾರಂಭವಾದರೆ ಕೆಲವೊಮ್ಮೆ ಸೆಪ್ಟಂಬರ್‌ವರೆಗೂ ಮುಂದುವರಿಯುತ್ತದೆ. ಸಮಭಾಜಕ ವೃತ್ತದ ಕೆಳಗೆ ಮಾರ್ಚ್-ಎಪ್ರಿಲ್ ತಿಂಗಳುಗಳಲ್ಲಿ ಸೂರ್ಯನ ಪ್ರಖರವಾದ ಕಿರಣಗಳು ಹಿಂದೂ ಮಹಾಸಾಗರದ ಮೇಲೆ ನೇರವಾಗಿ ಬಿದ್ದು ಸಮುದ್ರ ಶಾಖಗೊಳ್ಳಲು ಪ್ರಾರಂಭವಾಗುತ್ತದೆ. ನಿಧಾನವಾಗಿ ಸೂರ್ಯನ ಪ್ರಖರತೆ ಹೆಚ್ಚಾಗಿ ಮೋಡಗಳು ರೂಪುಗೊಳ್ಳಲು ಪ್ರಾರಂಭವಾಗುತ್ತದೆ. ಆಗ ಗಾಳಿ ಪಶ್ಚಿಮದ ಕಡೆಗೆ ಬೀಸಲು ಪ್ರಾರಂಭವಾಗಿ ಎಪ್ರಿಲ್ ಹೊತ್ತಿಗೆ ಸಮುದ್ರದಲ್ಲಿ ಇನ್ನಷ್ಟು ತಾಪಮಾನ ಹೆಚ್ಚಿ ಮೇ ತಿಂಗಳಲ್ಲಿ ನೈಋತ್ಯ ದಿಕ್ಕಿನ ಮುಂಗಾರು ಮೋಡಗಳು ಸಮುದ್ರದಿಂದ ಎದ್ದುಬರುತ್ತವೆ. ಮುಂಗಾರು ಮೋಡಗಳ ಒಂದು ರೆಕ್ಕೆ ಶ್ರೀಲಂಕಾದ ಹತ್ತಿರ ಕಾಣಿಸಿಕೊಂಡರೆ, ಇನ್ನೊಂದು ರೆಕ್ಕೆ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸೂರ್ಯನ ಕಿರಣಗಳು ಈಗ ಇನ್ನಷ್ಟು ನೇರವಾಗಿ ಭಾರತ ಉಪಖಂಡದ ಮೇಲೆ ಬಿದ್ದು ಉಪಖಂಡ ಬಿಸಿಯಾಗಿ ಮುಂಗಾರು ಮೋಡಗಳನ್ನು ತನ್ನ ಕಡೆಗೆ ಆಯಷ್ಕಾಂತದಂತೆ ಸೆಳೆದುಕೊಳ್ಳುತ್ತದೆ. ಈ ನೈಸರ್ಗಿಕ ಪ್ರಕ್ರಿಯೆ 12 ದಶಲಕ್ಷ ವರ್ಷಗಳ ಹಿಂದಿನಿಂದಲೂ ನಡೆಯುತ್ತಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರೆ.
ಸಾಗರಗಳಿಂದ ನೀರು ಆವಿಯಾಗಿ ಮೇಲೆ ಹೋಗಿ ಮೋಡಗಳಾಗಿ ಪರಿವರ್ತನೆಯಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಬಂಗಾಳಕೊಲ್ಲಿಯ ಜೊತೆಗೆ ಹಿಂದೂ ಮಹಾಸಾಗರದಲ್ಲಿನ ಮೋಡಗಳು ಕೂಡ ನೈಋತ್ಯ ಕಡೆಯಿಂದ ಭಾರತ ಮತ್ತು ದಕ್ಷಿಣಪೂರ್ವ ದೇಶಗಳ ಮಧ್ಯೆ ಇರುವ ಬಂಗಾಳಕೊಲ್ಲಿಯ ಕಡೆಗೆ ಪ್ರಯಾಣ ಬೆಳೆಸುತ್ತವೆ. ಜೊತೆಗೆ ಬೀಸುವ ಗಾಳಿ ಈ ಮೋಡಗಳಿಗೆ ರೆಕ್ಕೆಗಳನ್ನು ಕಟ್ಟಿ ಹಾರಿಸಿಕೊಂಡು ಹೋಗಿ ಬಾಂಗ್ಲಾ ದೇಶದ ಬಯಲುಗಳ ಮೂಲಕ ಹಿಮಾಲಯ ಕಡೆಗೆ ಧಾವಿಸುತ್ತವೆ. ದೇಶದಲ್ಲಿ ವಾರ್ಷಿಕ ಸರಾಸರಿ 4,000 ಬಿಲಿಯನ್ ಘನ ಮೀಟರ್ ಮಳೆ ಬೀಳುತ್ತದೆ ಎಂದು ಅಂದಾಜಿಸಲಾಗಿದೆ. ದೇಶದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಹೆಚ್ಚು ಮಳೆ ಬಿದ್ದರೆ, ದಕ್ಷಿಣ ಮತ್ತು ಪಶ್ಚಿಮದಲ್ಲಿ (ಪಶ್ಚಿಮ ಘಟ್ಟಗಳನ್ನು ಬಿಟ್ಟರೆ) ಕಡಿಮೆ ಮಳೆ ಬೀಳುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಲೆಕ್ಕಾಚಾರ ಏರುಪೇರಾಗಿರುವುದು ಕಂಡುಬಂದಿದೆ. ಕರ್ನಾಟಕ 45 ವರ್ಷಗಳಿಂದಲೂ ಕಾಣದ ಬರಗಾಲವನ್ನು ಕಳೆದ ಮೂರು ವರ್ಷಗಳಲ್ಲಿ (2017-2020) ಅನುಭವಿಸಬೇಕಾಯಿತು. ದಕ್ಷಿಣ ಭಾರತವೂ ಇದಕ್ಕೆ ಹೊರತಾಗಿಲ್ಲ. ಮುಂಗಾರು ಮಳೆಯ ಮುನ್ಸೂಚನೆಯನ್ನು ವಿಜ್ಞಾನಿಗಳು ನಿಖರವಾಗಿ ಕೊಡಲು ಸಾಧ್ಯವಾಗದೆ ಹೋದರು. ಈ ವರ್ಷ ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ರಾಜ್ಯದ ಹಲವಾರು ಕಡೆ ಒಂದಷ್ಟು ಮಳೆ ಬೀಳುತ್ತಿರುವುದು ಆಶಾದಾಯಕವಾಗಿದೆ. ಕಳೆದ ವರ್ಷ ವಿಪರೀತ ಮಳೆ ಬಿದ್ದು ಉತ್ತರ ಕರ್ನಾಟಕದ ಜಿಲ್ಲೆಗಳು ನೆರೆಯಲ್ಲಿ ಸಿಲುಕಿಕೊಂಡು ಸಾಕಷ್ಟು ಬೆಳೆಗಳು ನಾಶವಾದವು. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿದ್ದ ವಿಪರೀತ ಮಳೆಯಿಂದಾಗಿ ರಾಗಿ ಬೆಳೆಯನ್ನು ಕೊಯ್ಲು ಮಾಡಿಕೊಳ್ಳಲು ಸಹ ಅವಕಾಶ ದೊರಕದೆ ಹೋಯಿತು. ಪವನಶಾಸ್ತ್ರಜ್ಞರು ಈ ವರ್ಷ ಒಳ್ಳೆಯ ಮಳೆಯಾಗಲಿದೆ ಎಂದಿದ್ದಾರೆ. ಮುಂಗಾರು ಮಳೆಯ ಮುನ್ಸೂಚನೆಯನ್ನು ನಿಖರವಾಗಿ ಹೇಳಲಾಗದೆ ಹೋಗುವುದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ, ಜಾಗತಿಕ ತಾಪಮಾನದಿಂದ ಸಮುದ್ರಗಳ ಮೇಲೆ ಆಗಾಗ ಏಳುವ ‘ಎಲ್ ನಿನೊ-ಲಾ ನಿನಾ’ಗಳ (ಹವಾಮಾನ ಬದಲಾವಣೆಯ ಸಂಕೀರ್ಣ ಸರಣಿ) ವೈಪರೀತ್ಯ, ಮುಂಗಾರು ಮಳೆಯ ಕ್ರಮಬದ್ಧತೆಯನ್ನು ತಪ್ಪಿಸುತ್ತಿರುವುದು ಒಂದು ಕಾರಣವಾಗಿದೆ. ಇದು 4ರಿಂದ 5ವರ್ಷಗಳಿಗೆ ಒಮ್ಮೆ ಘಟಿಸುತ್ತದೆ. ಜೊತೆಗೆ ಅರಣ್ಯನಾಶ, ಅಗಾಧ ಜನಸಂಖ್ಯೆ ಏರಿಕೆ, ಸಮುದ್ರಗಳು ಮತ್ತು ನದಿಗಳು ಪ್ಲ್ಯಾಸ್ಟಿಕ್, ತೈಲ, ನಗರಗಳ ಅಗಾಧ ಕೊಳಚೆ ನೀರು, ಇ-ತ್ಯಾಜ್ಯ ಇತ್ಯಾದಿಗಳಿಂದ ಮಾಲಿನ್ಯಗೊಂಡಿವೆ. ನೆಲದ ಮೇಲ್ಮೈ ಬತ್ತಿಹೋಗಿ, ಅಂತರ್ಜಲ ಖಾಲಿಯಾಗಿದೆ. ಪರಿಸರದಲ್ಲಿನ ನೈಸರ್ಗಿಕ ಕೊಂಡಿಗಳು ಛಿದ್ರಗೊಂಡಿವೆ.
ಶೇ. 25 ಭಾಗದಷ್ಟು ಸಾಗರಗಳು ಪ್ಲ್ಯಾಸ್ಟಿಕ್‌ನಿಂದ ತುಂಬಿಹೋಗಿದ್ದು ಸಮುದ್ರಗಳ ನೀರು ನೈಸರ್ಗಿಕವಾಗಿ ಆವಿಯಾಗಿ ಮೋಡಗಳು ಸೃಷ್ಟಿಯಾಗುವ ಪ್ರಕ್ರಿಯೆಗೆ ಧಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಆಮ್ಲ ಮಳೆ ಸುರಿದರೆ ಆಶ್ಚರ್ಯಪಡಬೇಕಾಗಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಅಗಾಧ ಪರಿಸರ ಮಾಲಿನ್ಯ ಮಾಡುತ್ತಿರುವ ಚೀನಾ ದೇಶದ ನದಿಗಳೆಲ್ಲ ಕೈಗಾರಿಕೆಗಳ ರಾಸಾಯನಿಕ ವಿಷದಿಂದ ಮಾಲಿನ್ಯಗೊಂಡು, ಅಲ್ಲೆಲ್ಲ ಈಗ ಆಮ್ಲ/ವಿಷಪೂರಿತ ಮಳೆ ಸುರಿಯುತ್ತಿದೆ. ಇದು ಭಾರತಕ್ಕೂ ತಪ್ಪಿದ್ದಲ್ಲ. ಯಾಕೆಂದರೆ ಈಗ ಭಾರತವೂ ಅಭಿವೃದ್ಧಿಯ ಪೈಪೋಟಿಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರಪಂಚದೆಲ್ಲೆಡೆ ಆಮ್ಲ ಮಳೆ ಸುರಿದರೂ ಸುರಿಯಬಹುದು. ಆಗ ಕೆರೆಕುಂಟೆ ಸರೋವರಗಳು ಮತ್ತು ಅಂತರ್ಜಲವೂ ವಿಷದಿಂದ ತುಂಬಿಕೊಂಡು ಮನುಷ್ಯ-ಪ್ರಾಣಿಗಳು ಬದುಕುವುದು ಕಷ್ಟವಾಗುತ್ತದೆ. ನಾವು ಕುಡಿಯುವ ನೀರು ಮತ್ತು ನಮ್ಮ ಮನೆ ಎಷ್ಟೇ ಶುದ್ಧವಾಗಿದ್ದರೂ ಏನೂ ಪ್ರಯೋಜನವಿಲ್ಲ. ಜೊತೆಗೆ ನಮ್ಮ ಸುತ್ತಲಿನ ಪರಿಸರವೂ ಶುದ್ಧವಾಗಿರಬೇಕು. ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ನಮಗೆ ಹಾಲು ಒದಗಿಸುವ ಪಶುಗಳಿಗೂ ಶುದ್ಧ ನೀರು ದೊರಕಬೇಕು. ನಾವು ಬೆಳೆಸುವ ಫಸಲುಗಳಿಗೂ ಶುದ್ಧ ನೀರು ಉಣಿಸಬೇಕು. ಆಗ ಮಾತ್ರ ನಾವು ತಿನ್ನುವ ಹಣ್ಣು, ತರಕಾರಿ, ಕಾಳುಕಡ್ಡಿ, ದವಸ ಧಾನ್ಯಗಳಿಂದ ನಮಗೆ ಆರೋಗ್ಯ ದೊರಕುತ್ತದೆ. ನಮಗೆ ಗೊತ್ತಿಲ್ಲದೆಯೇ ಪ್ರಕೃತಿಯ ಸೇವೆಯಲ್ಲಿ ತೊಡಗಿಕೊಂಡಿರುವ ಎರೆಹುಳ, ಜೇನುನೊಣ, ಕಪ್ಪೆ, ಮೀನು, ಈ ಭೂಮಿಯ ಸಹಪಯಣಿಗರಾಗಿ ನಮ್ಮೆಂದಿಗೆ ಬದುಕುತ್ತಿರುವ ಎಲ್ಲಾ ಪಕ್ಷಿ-ಪ್ರಾಣಿಗಳಿಗೂ ಶುದ್ಧ ನೀರುಬೇಕು. ಆಗ ಪರಿಸರ ಸ್ವಚ್ಛವಾಗಿ ಎಲ್ಲಾ ಜೀವಸಂಕುಲವೂ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಇವೆಲ್ಲದರ ನಡುವೆ ಎಲ್ಲವನ್ನು ಕೊಳಕು ಮಾಡಿ ಮನುಷ್ಯ ಮಾತ್ರ ಆರೋಗ್ಯವಾಗಿರಲು ಸಾಧ್ಯವಿಲ್ಲ.
ಭಾರತದ ಬಡ, ಒಣ ಭೂಮಿಯ ರೈತ ಸಂಪೂರ್ಣವಾಗಿ ಮುಂಗಾರು ಮತ್ತು ಹಿಂಗಾರು ಮಳೆಯ ಮೇಲೆಯೇ ಅವಲಂಬಿತವಾಗಿದ್ದಾನೆ. ದೇಶದ ಶೇ. 75 ಭಾಗದಷ್ಟು ಬೇಸಾಯ ಮುಂಗಾರು ಮಳೆಯನ್ನೇ ಅವಲಂಬಿಸಿದ್ದು, ರೈತನು ಬೀಜ, ಗೊಬ್ಬರಗಳನ್ನು ಸಾಲಕ್ಕೆ ಪಡೆದು ತನ್ನ ಶ್ರಮವನ್ನು ಹಾಕಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬರದೇಹೋದರೆ ಕಂಗಾಲಾಗುತ್ತಾನೆ. ಕೆಲವೊಮ್ಮೆ ವಿಧಿಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸರಿಯಾಗಿ ಮಳೆಯಾಗದೆ ಅಣೆಕಟ್ಟುಗಳು ತುಂಬದೆ ಹೋದರೂ ನೀರಾವರಿ ಕೃಷಿ ಮಾಡುವ ರೈತನ ಸ್ಥಿತಿಯೂ ಅದೇ ಆಗಿರುತ್ತದೆ. ಕೇವಲ ಎರಡುಮೂರು ದಶಕಗಳ ಹಿಂದೆ ಎಲ್ಲಾ ರೈತರು ತಮಗೆ ಬೇಕಾದಷ್ಟು ದವಸ ಧಾನ್ಯಗಳನ್ನು ಮಾತ್ರ ಬೆಳೆದು ಮನೆ ತುಂಬಿಸಿಕೊಂಡು ಸಂತೋಷವಾಗಿದ್ದರು. ಕೊಳವೆ ಬಾವಿಗಳು ಬಂದ ಮೇಲೆ ಅಂತರ್ಜಲದ ನೀರನ್ನೆಲ್ಲ ಮೇಲಕ್ಕೆತ್ತಿ ನೆಲದ ಮೇಲಿನ ಕೆರೆ ಕುಂಟೆಗಳನ್ನೆಲ್ಲ ಒಣಗಿಸಿ ಕುಡಿಯಲೂ ನೀರಿಲ್ಲದೆಹೋಯಿತು. ಭಾರತದಲ್ಲಿ ಜನಸಂಖ್ಯೆ ನಿರಂತರವಾಗಿ ಬೆಳೆಯುತ್ತಲೇ ಇದ್ದು ಹಳ್ಳಿಗಳು ಬಡವಾಗುತ್ತಲೇ ಹೋಗುತ್ತಿವೆ. ಮಳೆಯಾಧಾರಿತ ಕೃಷಿಪ್ರಧಾನ ದೇಶದ ಒಟ್ಟಾರೆ ಪರಿಸ್ಥಿತಿ ಗಂಭೀರವಾಗಿದ್ದು ಜನರ ಸಾಮಾಜಿಕ ಸ್ಥಿರತೆ ದಿನೇದಿನೇ ಕುಸಿಯುತ್ತಿದ್ದು ಬಡವರು ಇನ್ನಷ್ಟು ಬಡವರಾಗುತ್ತಾ ಅನಾರೋಗ್ಯದಿಂದ ಬಳಲುತ್ತಿದ್ದು ಸಾಲದ್ದಕ್ಕೆ ನೆರೆ, ಬರ, ಅವರ ಮೇಲೆ ಮುಗಿಬೀಳುತ್ತಿದೆ. ಈ ವರ್ಷ ಒಳ್ಳೆಯ ಮುಂಗಾರು ಮಳೆ ಬಿದ್ದರೆ ಕೆರೆ, ಕುಂಟೆ, ಕಲ್ಯಾಣಿ ಬಾವಿಗಳನ್ನು ಜೋಪಾನ ಮಾಡಿಕೊಂಡು, ಜಾನುವಾರುಗಳಿಗೂ ಮೇವು ಮತ್ತು ನೀರನ್ನು ಬರುವ ಮುಂದಿನ ಮಳೆಗಾಲದವರೆಗೂ ಸಂರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ.