ಜೊಕೊವಿಕ್‍ಗೆ ಆಘಾತ ನೀಡಿದ ನಡಾಲ್ ಫ್ರೆಂಚ್ ಓಪನ್ ಸೆಮಿಫೈನಲ್ ಗೆ

Update: 2022-06-01 01:59 GMT
ರಫೇಲ್ ನಡಾಲ್ (Photo by Julian Finney/Getty Images)

ಪ್ಯಾರೀಸ್: ಟೆನಿಸ್ ದಿಗ್ಗಜರ ನಡುವೆ ನಡೆದ ನಾಲ್ಕು ಸೆಟ್‍ಗಳ ಸುದೀರ್ಘ ಹೋರಾಟದಲ್ಲಿ ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ ರಫೇಲ್ ನಡಾಲ್, 15ನೇ ಬಾರಿಗೆ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದರು.

13 ಬಾರಿಯ ರೊನಾಲ್ಡ್ ಗೆರ್ರೋಸ್ ಚಾಂಪಿಯನ್, ವೃತ್ತಿಜೀವನದಲ್ಲಿ ಜೊಕೊವಿಕ್ ಅವರ ಜತೆಗಿನ 59ನೇ ಹೋರಾಟವನ್ನು ನಡಾಲ್ ನಾಲ್ಕು ಗಂಟೆ ಹನ್ನೆರಡು ನಿಮಿಷಗಳಲ್ಲಿ 6-2, 4-6, 6-2, 7-6 (7/4) ಅಂತರದಿಂದ ಗೆದ್ದರು.

ಕಳೆದ 10 ಫ್ರೆಂಚ್ ಓಪನ್ ಪಂದ್ಯಗಳಲ್ಲಿ ಎಂಟನೇ ಜಯ ಸಾಧಿಸಿದ ನಡಾಲ್ ಸೆಮಿಫೈನಲ್‍ನಲ್ಲಿ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಶುಕ್ರವಾರ ಎದುರಿಸಲಿದ್ದಾರೆ. "ನಾನು ತೀರಾ ಭಾವಪರವಶವಾಗಿದ್ದೇನೆ. ಇಲ್ಲಿ ಆಡುವುದು ನನಗೆ ನಂಬಲಸಾಧ್ಯ. ಈ ಭಾವನೆಯೂ ನನಗೆ ನಂಬಲಸಾಧ್ಯ" ಎಂದು ನಡಾಲ್ ಬಣ್ಣಿಸಿದರು.

"ಅವರೊಂದಿಗೆ ಆಡುವುದು ಸದಾ ದೊಡ್ಡ ಸವಾಲು.. ನೊವಾಕ್ ವಿರುದ್ಧ ಗೆಲ್ಲಲು ಇರುವುದು ಒಂದೇ ದಾರಿ. ಮೊದಲ ಪಾಯಿಂಟ್‍ನಿಂದ ಕೊನೆಯ ಪಾಯಿಂಟ್‍ವರೆಗೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುವುದು" ಎಂದು ಹೇಳಿದರು.

ಪ್ಯಾರೀಸ್‍ನ ಆವೆ ಅಂಕಣದಲ್ಲಿ 35 ವರ್ಷ ವಯಸ್ಸಿನ ನಡಾಲ್ ಆಡಿದ 113  ಪಂದ್ಯಗಳ ಪೈಕಿ ಕೇವಲ ಮೂರು ಪಂದ್ಯಗಳಲ್ಲಷ್ಟೇ ಸೋಲು ಅನುಭವಿಸಿದ್ದಾರೆ. ವೃತ್ತಿಜೀವನದ ಉಭಯ ದಿಗ್ಗಜರ ನಡುವಿನ ಹೋರಾಟದಲ್ಲಿ ಜೊಕೊವಿಕ್ ವಿರುದ್ಧ 29-30 ಹಿನ್ನಡೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News