ಇತಿಹಾಸದ ಪಠ್ಯಗಳಲ್ಲಿ ದಾಳಿಕೋರರ ಮಾಹಿತಿ ತುಂಬಿದೆ, ಮರುಪರಿಷ್ಕರಣೆಯ ಅಗತ್ಯವಿದೆ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್

Update: 2022-06-01 14:17 GMT

ಮುಂಬೈ: ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರು ತಮ್ಮ ಮುಂದಿನ ಚಿತ್ರ ʼಸಾಮ್ರಾಟ್ ಪೃಥ್ವಿರಾಜ್ʼ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಭಾರತೀಯ ಮಧ್ಯಕಾಲೀನ ರಾಜ ಪೃಥ್ವಿರಾಜ್ ಚೌಹಾಣ್ ಜೀವನವನ್ನು ಆಧರಿಸಿದ ಐತಿಹಾಸಿಕ ಯುದ್ಧದ ಚಿತ್ರಣವಾಗಿದೆ. ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಅಕ್ಷಯ್‌ ಕುಮಾರ್ ತಮ್ಮ ಚಿತ್ರದ ಪ್ರಚಾರದ ಜೊತೆಗೆ ಪಠ್ಯಪುಸ್ತಕ ಬದಲಾವಣೆಯ ಹೇಳಿಕೆಯ ಮೂಲಕ ಸಾಮಾಜಿಕ ತಾಣದಲ್ಲಿ ವ್ಯಂಗ್ಯಕ್ಕೀಡಾಗಿದ್ದಾರೆ.

"ಇತಿಹಾಸದ ಪಠ್ಯಪುಸ್ತಕಗಳಲ್ಲಿ ಮೊಘಲ್ ದಾಳಿಕೋರರ ಮಾಹಿತಿ ತುಂಬಿದೆ, ಆದರೆ ಪೃಥ್ವಿರಾಜ್ ಚೌಹಾಣ್ ಮತ್ತು ಮಹಾರಾಣಾ ಪ್ರತಾಪ್ ಅವರಂತಹ ರಾಜರ ವೈಭವ ಮತ್ತು ಶೌರ್ಯದ ಬಗ್ಗೆ ಮಾತನಾಡಲಾಗುತ್ತಿಲ್ಲ" ಎಂಬ ಅಕ್ಷಯ್‌ ಕುಮಾರ್‌ ರ ಇತ್ತೀಚಿನ ಸಂದರ್ಶನದಲ್ಲಿ ನೀಡಿದ ಹೇಳಿಕೆ ಇದೀಗ ಟ್ರೋಲ್ ಆಗುತ್ತಿದೆ. "ತಮಗೆ ಮಾಹಿತಿಯಿಲ್ಲದಿದ್ದರೆ NCERT ಪಠ್ಯ ಪುಸ್ತಕವನ್ನೊಮ್ಮೆ ಓದಿ ನೋಡಿ" ಎಂದು ಸಾಮಾಜಿಕ ತಾಣ ಬಳಕೆದಾರರು ಸಲಹೆ ನೀಡಿದ್ದಾರೆ.

ANI ಜೊತೆ ಮಾತನಾಡಿದ ಅಕ್ಷಯ್‌ ಕುಮಾರ್, "ದುರದೃಷ್ಟವಶಾತ್, ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಬಗ್ಗೆ ಕೇವಲ 2-3 ಸಾಲುಗಳಿವೆ, ಆದರೆ ಆಕ್ರಮಣಕಾರರ ಬಗ್ಗೆ ಸಾಕಷ್ಟು ಪ್ರಸ್ತಾಪಿಸಲಾಗಿದೆ. ನಮ್ಮ ಸಂಸ್ಕೃತಿ ಮತ್ತು ನಮ್ಮ ಮಹಾರಾಜರ ಬಗ್ಗೆ ಏನೂ ಉಲ್ಲೇಖಿಸಲಾಗಿಲ್ಲ. ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಅದರ ಬಗ್ಗೆ ಬರೆಯಲು ನಾನು ಶಿಕ್ಷಣ ಸಚಿವರಿಗೆ ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಲು ಬಯಸುತ್ತೇನೆ. ನಾವು ಮೊಘಲರ ಬಗ್ಗೆ ತಿಳಿದಿರಬೇಕು ಆದರೆ ನಮ್ಮ ರಾಜರ ಬಗ್ಗೆಯೂ ತಿಳಿದಿರಬೇಕು, ಅವರು ಕೂಡ ಶ್ರೇಷ್ಠರಾಗಿದ್ದರು" ಎಂದು ಹೇಳಿದ್ದರು. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ನಮ್ಮ ದೇಶ ಬದಲಾಗುತ್ತಿದೆ" ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

"ಕೆನಡಾದ ಪ್ರಜೆಗೆ ಭಾರತದ ಪಾಠಪುಸ್ತಕಗಳ ಬಗ್ಗೆ ತಿಳಿದಿಲ್ಲ. ಈಗಾಗಲೇ ಏಳನೇ ತರಗತಿಯ ಪಾಠ ಪುಸ್ತಕದಲ್ಲಿ ಚೌಹಾಣ್‌ ಸೇರಿದಂತೆ ಭಾರತೀಯ ರಾಜರುಗಳ ಪಾಠವಿದೆ. ತಮ್ಮ ಚಿತ್ರ ಪ್ರಚಾರಕ್ಕೆ ವಿವಾದವನ್ನೆಳೆದು ತರುತ್ತಿದ್ದಾರೆ" ಎಂದು ಟ್ವಿಟರಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಧರ್ಮ ಮತ್ತು ರಾಜಕೀಯ ಈಗಿನ ವ್ಯಾಪಾರದ ಪ್ರಮುಖ ಕಚ್ಚಾವಸ್ತುಗಳಾಗಿವೆ" ಎಂದು ಇನ್ನೋರ್ವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News