×
Ad

ಚರಂಡಿಯಲ್ಲಿ ಹಾದುಹೋದ ಕುಡಿಯುವ ನೀರಿನ ಪೈಪ್‌ಲೈನ್; ಮಹಿಳೆಯ ಕಾಳಜಿಯಿಂದ ತಪ್ಪಿದ ಅನಾಹುತ

Update: 2022-06-01 21:06 IST

ಉಡುಪಿ: ಪೆರ್ಣಂಕಿಲ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ತಿರ್ಲ ಪಲ್ಕೆ ಅಂಗನವಾಡಿಯಲ್ಲಿ ನಡೆದ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಸಭೆಯಲ್ಲಿ ಮಹಿಳೆಯೊಬ್ಬರ ಆರೋಗ್ಯ ಪ್ರಜ್ಞೆಯಿಂದ ಚರಂಡಿ ಯಲ್ಲಿ ಹಾದುಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್‌ನಿಂದ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲಾಯಿತು.

ಸಭೆಯಲ್ಲಿ ಮಹಿಳೆಯರಿಗೆ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಸಭೆಗೆ ಹಾಜರಾದ ಓರ್ವ ಮಹಿಳೆ ಅಂಗನವಾಡಿಯ ಹಿಂಭಾಗದ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿರುವ ವಿಚಾರ ಗಮನಕ್ಕೆ ತಂದರು. ಇದನ್ನು ಮೂಡುಬೆಳ್ಳೆ ಉಪಕೆಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಅಶ್ವಿನಿ ಪರಿಶೀಲಿಸಿದಾಗ, ಪರಿಸರದ 10 ಮನೆಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್ ಲೈನ್ ಚರಂಡಿಯಲ್ಲಿ ಹಾದು ಹೋಗಿರುವುದು ಕಂಡುಬಂತು.

ಆ ನೀರಿನ ಪೈಪ್ ಒಡೆದು ಅಥವಾ ಹಾನಿಯಾದಲ್ಲಿ ನೀರಿನಿಂದ ಹರಡುವ ರೋಗಗಳು ಉತ್ಪತ್ತಿ ಆಗಿ, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದು ಮುನ್ನೆಚ್ಚರಿಕಾ ಕ್ರಮವಾಗಿ ಆ ಪೈಪ್‌ನ್ನು ಮೇಲಕ್ಕೆ ಎತ್ತಲಾಯಿತು. ಬಳಿಕ ಈ ವಿಚಾರವನ್ನು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳ ಗಮನಕ್ಕೆ ತಂದು ನಂತರ ಪಂಚಾಯತ್‌ಗೆ ಮನವಿ ಮಾಡಲಾಯಿತು.

ಇದಕ್ಕೆ ಪಂಚಾಯತ್ ಅಧ್ಯಕ್ಷರು ಕೂಡಲೇ ಸ್ಪಂದಿಸಿ ಕುಡಿಯುವ ನೀರಿನ ಪೈಪ್ ಮೇಲೆತ್ತುವ ಕಾರ್ಯವನ್ನು ಮಾಡಿದರು. ಜಿಲ್ಲೆಯ ಎಲ್ಲಾ ಗ್ರಾಮಸ್ಥರು ಈ ರೀತಿ ಮಾಹಿತಿ ನೀಡಿದರೆ ಮುಂದೆ ಆಗುವ ಅನಾಹುತಗಳನ್ನು  ತಡೆಗಟ್ಟಲು ಸಾಧ್ಯ ಎಂದು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬೋರ್ಕರ ಸಾರ್ವಜನಿಕರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News