ಕರ್ಜೆ ಪಿಡಿಓ ಕರ್ತವ್ಯಕ್ಕೆ ಅಡ್ಡಿ; ಪೊಲೀಸ್ ಸಿಬ್ಬಂದಿಯ ಕೈಗೆ ಕಚ್ಚಿದ ಆರೋಪಿಗಳು!

Update: 2022-06-01 16:01 GMT

ಬ್ರಹ್ಮಾವರ : ರಸ್ತೆಯ ತಡೆಯನ್ನು ತೆರವುಗೊಳಿಸಲು ಹೋದ ಕರ್ಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳು, ಪೊಲೀಸ್ ಸಿಬ್ಬಂದಿಯ ಕೈಯನ್ನು ಕಚ್ಚಿರುವ ಘಟನೆ ಮೇ 31ರಂದು ನಡೆದಿದೆ.

ಹೊಸೂರು ಗ್ರಾಮದ ಕಡಂಗೋಡು ಶ್ರೀಭಸ್ಮೇಶ್ವರ ಹಾಗೂ ಮಹಮ್ಮಾಯಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಆರೋಪಿಗಳಾದ ಹರೀಶ್ ನಾಯ್ಕ ಹಾಗೂ ಅವರ ಮಗ ಪ್ರದೀಪ ನಾಯ್ಕ ಸೇರಿ ಕಲ್ಲು ಕಂಬ ಹಾಗೂ ಮರದ ತುಂಡುಗಳನ್ನು ಕಟ್ಟಿ ತಡೆಯೊಡ್ಡಿದ್ದರು. ಅದನ್ನು ತೆರವುಗೊಳಿಸುವ ಬಗ್ಗೆ ಮೇ 30ರಂದು ನಡೆದ ಗ್ರಾಪಂ ತುರ್ತು ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಅದರಂತೆ ಮೇ 31ರಂದು ಗ್ರಾಪಂ ಅಧ್ಯಕ್ಷ, ಪಿಡಿಓ ಪ್ರಮೀತಾ, ಕಾರ್ಯ ದರ್ಶಿ, ಸಿಬ್ಬಂದಿ ಹಾಗೂ ಕೆಲಸದವರೊಂದಿಗೆ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಕಂಬ, ಮರದ ತುಂಡು ಗಳನ್ನು ತೆರವುಗೊಳಿಸಲು ಮುಂದಾದಾಗ ಆರೋಪಿಗಳಾದ ಹರೀಶ್ ನಾಯ್ಕ, ಪ್ರದೀಪ ನಾಯ್ಕ, ಪೃಥ್ವಿ ಹಾಗೂ ಲಕ್ಷ್ಮೀ ಕತ್ತಿ ಹಾಗೂ ಮರದ ದೊಣ್ಣೆಗಳನ್ನು ಹಿಡಿದು ಕೊಂಡು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದರು ಎಂದು ದೂರಲಾಗಿದೆ.

ಬಳಿಕ ಪಿಡಿಓ ಅವರನ್ನು ದೂಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ರಕ್ಷಣೆಗೆ ಇದ್ದ ಪೊಲೀಸ್ ಸಿಬ್ಬಂದಿ ಸೌಮ್ಯ ಎಂಬವರ ಕೈಯನ್ನು ಆರೋಪಿ ಪೃಥ್ವಿ  ಕಚ್ಚಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News