ರಾಜ್ಯದಲ್ಲಿ 8 ಹೊಸ ವಿವಿ, 7 ಇಂಜಿನಿಯರಿಂಗ್ ಕಾಲೇಜು ಐಐಟಿ ದರ್ಜೆಗೆ: ಸಿಎಂ ಬೊಮ್ಮಾಯಿ

Update: 2022-06-01 16:13 GMT

ಹೆಬ್ರಿ, ಜೂ.೧: ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆಯೊಂದನ್ನು ಪ್ರಾರಂಭಿಸಲಾಗಿದ್ದು, ಎಂಟು ಹೊಸ ವಿವಿಗಳ ಸ್ಥಾಪನೆ, ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಮೇಲ್ದರ್ಜೆಗೇರಿಸ ಲಾಗುವುದು. ಅಲ್ಲದೇ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾ ಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ  ಹೆಬ್ರಿ ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ, ಹೆಬ್ರಿಯ ಸರಕಾರಿ ಪ್ರಥಮ ದರ್ಜೆಕಾಲೇಜಿನ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಮತ್ತು ಹೆಬ್ರಿಯಲ್ಲಿ ನಿರ್ಮಾಣಗೊಳ್ಳುವ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿ ಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತಿದ್ದರು.

ಗ್ರಾಮೀಣ ಭಾಗಗಳ ಜನರಿಗೆ ಅನುಕೂಲವಾಗುವಂತೆ ಸರಕಾರದ ಎಲ್ಲಾ ಸೌಲಭ್ಯಗಳು ಒಂದೇ ಕಡೆ ದೊರೆಯುವಂತೆ ಪ್ರಾರಂಭಿಸಲಾಗಿರುವ ಗ್ರಾಮ ವನ್ ಕೇಂದ್ರವನ್ನು ಶೀಘ್ರವೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸರಕಾರದ ಆಡಳಿತವನ್ನು ಜನರ ಮನೆ ಬಾಗಿಲಿಗೆ ಒಯ್ಯುವ ಕಲ್ಪನೆಯನ್ನು ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಎನ್ನುವ ಕಾರ್ಯಕ್ರಮದ ಮೂಲಕ ಸಾಕಾರಗೊಳಿಸಲಾಗಿದೆ. ಇದರಿಂದ ಕಂದಾಯ ದಾಖಲೆಗಳು, ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಮನೆ ಬಾಗಿಲಿಗೆ ಬರುತ್ತಿದೆ. ಇದು ಸ್ಪಂದನಶೀಲ ಸರಕಾರ ಗುಣಲಕ್ಷಣ. ಸುಶಾಸನ ಒಳ್ಳೆಯ ಆಡಳಿತದ ಪ್ರತೀಕ. ನಮ್ಮ ಸರ್ಕಾರ ಈ ಚಿಂತನೆಯ ಆಧಾರದ ಮೇಲೆ ಕೆಲಸ ಮಾಡುತ್ತಿದೆ ಎಂದರು.

ದುಡಿಯುವ ವರ್ಗಕ್ಕೆ ಶಕ್ತಿ: ಕರ್ನಾಟಕ ದೇಶದ ತಲಾವಾರು ಆದಾಯದಲ್ಲಿ ೪ನೇ ಸ್ಥಾನದಲ್ಲಿದೆ. ಈ ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಿ ಅವರ ತಲಾವಾರು ಆದಾಯ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಆರ್ಥಿಕತೆ ಎಂದರೆ ಜನರ ದುಡಿಮೆ. ಸಶಕ್ತ ದುಡಿಯುವ ವರ್ಗವಿರುವ ದೇಶಕ್ಕೆ ಬಡತನವಿ ರುವುದಿಲ್ಲ. ದುಡಿಯುವ ವರ್ಗದ ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸಲು ಎಲ್ಲ ಸಹಕಾರ ನೀಡಲಾಗುವುದು ಎಂದರು.

ತಳಹಂತದ ದುಡಿಯುವ ವರ್ಗದಿಂದ ದೇಶದ ಆರ್ಥಿಕತೆ ಬದಲಾವಣೆ ಯಾಗುತ್ತದೆ. ಅವರ ಆರೋಗ್ಯ, ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿದೆ. ಕಾರ್ಮಿಕರ ಶ್ರಮಕ್ಕೆ, ರೈತನ ಬೆವರಿಗೆ ಈ ಸರಕಾರ ಬೆಲೆಕೊಡುತ್ತದೆ. ಆದ್ದರಿಂದ ರೈತಮಕ್ಕಳಿಗೆ ವಿದ್ಯಾನಿಧಿ ಜಾರಿಮಾಡಿ, ಉಡುಪಿ ಜಿಲ್ಲೆಯಲ್ಲಿ ೧೮ ಸಾವಿರ ಮಕ್ಕಳಿಗೆ ರೈತವಿದ್ಯಾನಿಧಿಯನ್ನು ನೀಡಲಾಗಿದೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವ ನಮ್ಮ ಸರ್ಕಾರ ೩೦೦೦ ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿಗಳ ನಿರ್ಮಾಣ, ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, 5ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ, 8 ರೈಲ್ವೆ ಯೋಜನೆಗಳನ್ನು ಕೈಗೊಂಡು ನವಕರ್ನಾಟಕದಿಂದ ನವಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಸಾಕಾರ ಗೊಳಿಸುತ್ತಿದೆ ಎಂದರು.

ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿ, ಗ್ರೀನ್ ಪವರ್, ಹಸಿರು ಇಂಧನ ಅಭಿವೃದ್ಧಿ, ಬೀಚ್ ಟೂರಿಸಂ, ಟೆಂಪಲ್ ಟೂರಿಸಂಗೆ ಪ್ರಾಶಸ್ತ್ಯ ನೀಡಿ ಟೂರಿಸಂ ಸರ್ಕೀಟ್ ಮಾಡಲಾಗುವುದು. ಹೆಬ್ರಿಯಲ್ಲಿ ಇಎಸ್‌ಐ ಆಸ್ಪತ್ರೆ ಪ್ರಾರಂಭಕ್ಕೆ ಸುನಿಲ್ ಕುಮಾರ್ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕೂಡಲೇ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.

ಪ್ರತಿ ಮಂಗಳವಾರ ಡಿಸಿ ತಾಲೂಕು ಕಚೇರಿಯಲ್ಲಿ: ತಾಲೂಕು ಆಡಳಿತ ಸೌಧವನ್ನು ಉದ್ಘಾಟಿಸಿದ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ,  ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ತಮ್ಮ ಸರಕಾರದ ನಿರ್ಧಾರದಂತೆ ಇನ್ನು ಮುಂದೆ ಪ್ರತಿ ಮಂಗಳವಾರ ಜಿಲ್ಲಾಧಿಕಾರಿಯವರು ಬೆಳಗ್ಗೆ ೧೦ರಿಂದ ಅಪರಾಹ್ನ ೨ಗಂಟೆಯವರೆಗೆ ಜಿಲ್ಲೆಯ ಒಂದು ತಾಲೂಕು ಕಚೇರಿಯಲ್ಲಿ ಇರಲಿದ್ದು, ಅಲ್ಲಿ ಜನರ ಅಹವಾಲುಗಳನ್ನು ಕೇಳಿ ಪರಿಹರಿಸಲಿದ್ದಾರೆ. ಈ ಮೂಲಕ ಆಡಳಿತದಲ್ಲಿ ಅರಮನೆ ಸಂಸ್ಕೃತಿಯನ್ನು ತೊಡೆದು ಹಾಕಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಹಾಗೂ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಜಿಲ್ಲೆಯ ಜನರ ಪ್ರಮುಖ ಸಮಸ್ಯೆಯಾದ ಡೀಮ್ಡ್ ಫಾರೆಸ್ಟ್   ಸಮಸ್ಯೆ ಈಗ ಬಗೆಹರಿದಿದ್ದು, ಜನರಿಗೆ ಅವರ ಹಕ್ಕುಪತ್ರಗಳನ್ನು ಶೀಘ್ರದಲ್ಲೇ ಒದಗಿಸಲು ಕ್ರಮ ಜರಗಿಸಲಾಗುತ್ತಿದೆ ಎಂದರು.

ಹೆಬ್ರಿಯಲ್ಲಿ ಗೇರುಬೀಜ ಕಾರ್ಖಾನೆ  ಹಾಗೂ ಅಕ್ಕಿ ಗಿರಣಿಗಳು ಅಧಿಕ ಪ್ರಮಾಣದಲಿದ್ದು, ಇದರಲ್ಲಿ ಮಹಿಳೆಯರು ಅಧಿಕ ಪ್ರಮಾಣದಲ್ಲಿ ದುಡಿಯುತಿದ್ದಾರೆ. ಇವರಿಗಾಗಿ ಹೆಬ್ರಿಯಲ್ಲಿ ಇಎಸ್‌ಐ ಆಸ್ಪತ್ರೆಯೊಂದನ್ನು ನಿರ್ಮಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜನಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಹಿಂದುಳಿದ ಆಯೋಗದ ಅದ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ್ ಶೆಟ್ಟಿ, ಗೇರುನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ ಹಾಗೂ ಇತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅತಿಥಿಗಳನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News