×
Ad

ಬಜರಂಗ್ ಮುನಿಯನ್ನು ʼದ್ವೇಷ ಕಾರುವವʼ ಎಂದು ಸಂಬೋಧಿಸಿದ್ದಕ್ಕೆ ಆಲ್ಟ್‌ನ್ಯೂಸ್‌ ನ ಝುಬೈರ್‌ ವಿರುದ್ಧ ಎಫ್‌ಐಆರ್

Update: 2022-06-01 22:04 IST
Photo: ANI

ಖೈರಾಬಾದ್: ಮುಸ್ಲಿಂ ಮಹಿಳೆಯರನ್ನು ಬಲಾತ್ಕರಿಸುವಂತೆ ಬಹಿರಂಗವಾಗಿ ಕರೆ ನೀಡಿ ವಿವಾದ ಸೃಷ್ಟಿಸಿದ್ದ ಹಿಂದುತ್ವ ನಾಯಕ ಬಜರಂಗ ಮುನಿಯನ್ನು ʼದ್ವೇಷ ಕಾರುವವʼ ಎಂದು ಸಂಬೋದಿಸಿದ್ದಕ್ಕಾಗಿ, ಆಲ್ಟ್‌ ನ್ಯೂಸ್‌ ಪತ್ರಕರ್ತ ಮಹಮ್ಮದ್‌ ಝುಬೈರ್‌ ವಿರುದ್ಧ ಉತ್ತರ ಪ್ರದೇಶದ ಖೈರಾಬಾದ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 

ರಾಷ್ಟ್ರೀಯ ಹಿಂದೂ ಷೇರ್‌ ಸೇನಾ ಜಿಲ್ಲಾ ಮುಖ್ಯಸ್ಥ ಭಗವಾನ್‌ ಶರಣ್‌ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 295 ಎ, ಐಪಿಸಿ 67 ಕಾಯ್ದೆಯಡಿಯಲ್ಲಿ ಝುಬೈರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಪ್ರಿಲ್‌ 7 ರಂದು ಟ್ವೀಟ್‌ ಮಾಡಿದ್ದ ಝುಬೈರ್‌, ʼಮಸೀದಿ ಮುಂದೆ, ಪೊಲೀಸರ ಸಮ್ಮುಖದಲ್ಲಿ ಮಹಾಂತ್‌ ಒಬ್ಬ ಮುಸ್ಲಿಮ್‌ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರ ಮಾಡುವುದಾಗಿ ಬಹಿರಂಗವಾಗಿ ಬೆದರಿಸಿದ್ದಾರೆʼ ಎಂದು ಬಜರಂಗ ಮುನಿಯ ಭಾಷಣದ ತುಣುಕು ಹಾಕಿ ಬರೆದಿದ್ದರು. 

ಈ ಟ್ವೀಟನ್ನು ಉಲ್ಲೇಖಿಸಿ ಹಲವರು ಈಗ ಝುಬೈರ್‌ ಬೆಂಬಲಕ್ಕೆ ನಿಂತಿದ್ದು, "ನಾವು ಹಿಂದೂವಾಗಿ ಝುಬೈರ್‌ ಟ್ವೀಟ್‌ ನಮ್ಮ ಭಾವನೆಗೆ ಧಕ್ಕೆ ತಂದಿಲ್ಲ, ಬದಲಾಗಿ ಮುಸ್ಲಿಂ ಮಹಿಳೆಯರ ಅತ್ಯಾಚಾರಕ್ಕೆ ಕರೆ ಮಾಡಿದ ಖಾವಿದಾರಿಗಳು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ" ಎಂದು ಬರೆದಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಪತ್ರಕರ್ತ ಕೌಶಿಕ್‌ ರಾಜ್‌ ʼಖೈರಾಬಾದ್ ಪೊಲೀಸರು ಝುಬೈರ್ ವಿರುದ್ಧ ಸೆಕ್ಷನ್ 295 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಜರಂಗ ಮುನಿಗೆ ʼದ್ವೇಷ ಕಾರುವವʼ ಎಂದು ಬಳಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ. ಆದರೆ, ನಾನು ಹಿಂದೂ ಮತ್ತು ಮುನಿಯು ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆಗಳನ್ನು ನೀಡುವುದರಿಂದ ನನ್ನ ಭಾವನೆಗಳಿಗೆ ಧಕ್ಕೆಯಾಗಿದೆಯೇ ಹೊರತು ಜುಬೈರ್ ಅದನ್ನು ಬಹಿರಂಗಪಡಿಸುವ ಮೂಲಕ ಅಲ್ಲ.ʼ ಎಂದು ಬರೆದಿದ್ದಾರೆ. 

“ನಾನು ಹಿಂದೂವಾಗಿ ಹುಟ್ಟಿದ್ದೇನೆ ಮತ್ತು ಈ ಉಗ್ರಗಾಮಿಗಳು ತಮ್ಮನ್ನು ಮುನಿ, ಬಾಬಾ, ಯೋಗಿ ಮುಂತಾದವರು ಎಂದು ಕರೆದುಕೊಳ್ಳುವವರು ಇತರ ಧರ್ಮಗಳ ಜನರ ಮೇಲೆ ನಿರಂತರವಾಗಿ ದಾಳಿ ಮಾಡುವುದರಿಂದ, ಮಹಿಳೆಯರ ಮೇಲೆ ಅತ್ಯಾಚಾರದ ಬೆದರಿಕೆ ಮತ್ತು ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವುದರಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಇಂತಹ ದುರುಳರಿಂದ ನನ್ನ ಭಾವನೆಗಳಿಗೆ ತುಂಬಾ ನೋವಾಗಿದೆ.” ಎಂದು ಮೋನಾ ಅಂಬೆಗಾಂವ್ಕರ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News