ರೈಲು ಸೇವೆ ಆರಂಭಿಸಿ

Update: 2022-06-01 18:30 GMT

ಮಾನ್ಯರೇ,

ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ ತಿರುಪತಿಗೆ ಶಿವಮೊಗ್ಗದಿಂದ ರೈಲು ಸೇವೆಯನ್ನು ಎಪ್ರಿಲ್ ತಿಂಗಳಿನಲ್ಲಿ ಆರಂಭಿಸಲಾಗಿದೆ. ಹಾಗೆಯೇ ಮಧ್ಯ ಕರ್ನಾಟಕದ ಕೇಂದ್ರಬಿಂದು, ವಾಣಿಜ್ಯ ನಗರಿ ದಾವಣಗೆರೆಯಿಂದ ತಿರುಪತಿಗೆ ಇಲ್ಲವೇ ಹುಬ್ಬಳ್ಳಿಯಿಂದ ವಯಾ ದಾವಣಗೆರೆ ಮಾರ್ಗ ಮೂಲಕ ತಿರುಪತಿಗೆ ರೈಲು ಸೇವೆ ಆರಂಭಿಸಿದರೆ ಉತ್ತಮ. ದಾವಣಗೆರೆ ರೈಲು ನಿಲ್ದಾಣವು ಮೈಸೂರು ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ರೈಲ್ವೆ ನಿಲ್ದಾಣವಾಗಿದೆ. ಮಧ್ಯ ಕರ್ನಾಟಕ ಭಾಗವಾದ ದಾವಣಗೆರೆಯಿಂದ ಈ ರೈಲನ್ನು ಬಿಡುವುದರಿಂದ ಅಕ್ಕಪಕ್ಕದ ಎಲ್ಲಾ ಜಿಲ್ಲೆಯ ಜನರಿಗೂ ಅನುಕೂಲವಾಗುತ್ತದೆ. ಅಲ್ಲದೆ ಕಡಿಮೆ ಖರ್ಚಿನಲ್ಲಿ ತಿರುಪತಿಗೆ ಹೋಗಿ ಬರಬಹುದು. ಜೊತೆಗೆ ರೈಲ್ವೆ ಇಲಾಖೆಗೆ ಒಳ್ಳೆಯ ಆದಾಯ ಬರುವುದರಲ್ಲಿ ಅನುಮಾನವೇ ಇಲ್ಲ. ಪ್ರಸ್ತುತ ದಾವಣಗೆರೆ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಗೂಡ್ಸ್ ಸೇರಿದಂತೆ 45ಕ್ಕೂ ಹೆಚ್ಚು ರೈಲುಗಳು ಪ್ರತಿನಿತ್ಯ ಸಂಚರಿಸುತ್ತವೆ. ಅಲ್ಲದೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೂ ಇಲ್ಲಿಂದ ಸಂಚರಿಸುತ್ತಾರೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಅಷ್ಟೊಂದು ಜನಸಂದಣಿ ಇಲ್ಲದಿದ್ದರೂ ಅಲ್ಲಿಯ ಸಂಸದರ ಪ್ರಯತ್ನದಿಂದ ರೈಲು ಸೇವೆ ಆರಂಭವಾಗಿದ್ದಂತೂ ನಿಜ. ಮಾನ್ಯ ಕೇಂದ್ರ ರೈಲ್ವೆ ಸಚಿವರು ಮತ್ತು ರಾಜ್ಯ ಸರಕಾರ ಇತ್ತ ಗಮನ ಹರಿಸಿ ದಾವಣಗೆರೆಯಿಂದ ತಿರುಪತಿಗೆ ರೈಲು ಸೇವೆಯನ್ನು ಆರಂಭಿಸಿ ಸಹಸ್ರಾರು ಪ್ರಯಾಣಿರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
 

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News