×
Ad

ಜಮ್ಮು-ಕಾಶ್ಮೀರ: ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

Update: 2022-06-02 11:57 IST
Photo:PTI

ಶ್ರೀನಗರ,ಜೂ.2: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. 72 ಗಂಟೆಗಳ ಅವಧಿಯಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ನಡೆದ ಎರಡನೇ ದಾಳಿಯಲ್ಲಿ ಕುಲ್ಗಾಮ್‌ನಲ್ಲಿ ಗುರುವಾರ ಬ್ಯಾಂಕ್ ಮ್ಯಾನೇಜರ್ ಓರ್ವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದಾರೆ.

ಇಲಾಕಾಹಿ ದೇಹಾತಿ ಬ್ಯಾಂಕಿನ ಅರೇಹ್ ಶಾಖೆಗೆ ನುಗ್ಗಿದ ಉಗ್ರ ಮ್ಯಾನೇಜರ್ ವಿಜಯ ಕುಮಾರ ಅವರತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವಿಜಯ ಕುಮಾರರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ರಾಜಸ್ಥಾನದ ಹನುಮಾನಗಡ ಜಿಲೆಯ ನಿವಾಸಿ ವಿಜಯ್ ಕುಮಾರ್ ಇತ್ತೀಚಿಗಷ್ಟೇ ಕುಲ್ಗಾಮ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಪ್ರದೇಶವನ್ನು ನಿರ್ಬಂಧಿಸಲಾಗಿದ್ದು,ದಾಳಿಯ ಹಿಂದಿನ ಉಗ್ರರ ಪತ್ತೆಗಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದರು.
ಎರಡು ದಿನಗಳ ಹಿಂದಷ್ಟೇ ಕುಲ್ಗಾಮ್‌ ಗೋಪಾಲಪುರ ಪ್ರದೇಶದಲ್ಲಿ ಪ್ರೌಢಶಾಲಾ ಶಿಕ್ಷಕಿ ರಜನಿ ಬಾಲಾ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದರು.

ನೆರೆಯ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದನೆ ಸಂಬಂಧಿತ ಎರಡು ಪ್ರಮುಖ ಘಟನೆಗಳು ವರದಿಯಾದ 24 ಗಂಟೆಗಳಲ್ಲಿ ಬ್ಯಾಂಕ್ ಮ್ಯಾನೇಜರ್ ಹತ್ಯೆ ನಡೆದಿದೆ. ಬುಧವಾರ ಸಂಜೆ ಫಾರೂಕ್ ಅಹ್ಮದ್ ಶೇಖ್ ಎನ್ನುವವರ ಮನೆಗೆ ನುಗ್ಗಿದ್ದ ಉಗ್ರರು ಗುಂಡುಗಳನ್ನು ಹಾರಿದ್ದರು. ಗಾಯಗೊಂಡಿರುವ ಶೇಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇನ್ನೊಂದು ಘಟನೆಯಲ್ಲಿ ಗುರುವಾರ ನಸುಕಿನಲ್ಲಿ ವಾಹನವೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಯೋಧನಿಗೆ ಗಂಭೀರ ಗಾಯಗಳಾಗಿವೆ. ಮೂವರು ಯೋಧರು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಾಗಿ ಖಾಸಗಿ ವಾಹನದಲ್ಲಿ ಸಾಗುತ್ತಿದ್ದಾಗ ಮಾರ್ಗಮಧ್ಯೆ ಸ್ಫೋಟ ಸಂಭವಿಸಿದೆ ಎಂದು ಸೇನೆಯು ತಿಳಿಸಿದೆ.
                       
ಎನ್ಎಸ್ಎ ಅಜಿತ್ ದೋವಲ್‌ ಜೊತೆ ಅಮಿತ್ ಶಾ ಚರ್ಚೆ

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ಇಲ್ಲಿಯ ನಾರ್ಥ್ ಬ್ಲಾಕ್ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಧೋವಲ್ರನ್ನು ಭೇಟಿಯಾಗಿ ಕಾಶ್ಮೀರದಲ್ಲಿ ಇತ್ತೀಚಿನ ಸರಣಿ ಹತ್ಯೆಗಳ ಕುರಿತು ಚರ್ಚಿಸಿದರು. ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರೂ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
                                 
ಗೆಹ್ಲೋಟ್ ಖಂಡನೆ

ವಿಜಯ್ ಕುಮಾರ್ ಹತ್ಯೆಯನ್ನು ಖಂಡಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಮೃತರ ಕುಟಂಬಕ್ಕೆ ತನ್ನ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿರುವ ಅವರು,ಸರಕಾರವು ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
                           ‌
ಪ್ರತಿಭಟನೆ ನಡುವೆ ಹತ್ಯೆ
 
ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕಾಶ್ಮೀರಿ ಪಂಡಿತರು ನಡೆಸುತ್ತಿರುವ ವ್ಯಾಪಕ ಪ್ರತಿಭಟನೆಗಳ ನಡುವೆಯೇ ಗುರುವಾರ ಬ್ಯಾಂಕ್ ಮ್ಯಾನೇಜರ್ ಹತ್ಯೆ ನಡೆದಿದೆ. ಕಳೆದ ತಿಂಗಳು ಬಡ್ಗಾಮ್ನ ತಾಲೂಕು ಕಚೇರಿಯೊಳಗೆ ಕಾಶ್ಮೀರಿ ಪಂಡಿತ ಸಮುದಾಯದ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆಗೈದಾಗಿನಿಂದ ಪಂಡಿತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News