ಸರಕಾರದ ಹೊಸ ನಿಯಮಗಳಿಗೆ ಆಕ್ಷೇಪ: ಭಾರತೀಯ ಮೂಲದ ಸರ್ವರ್ ಗಳನ್ನು ತೆರವುಗೊಳಿಸಿದ ಎಕ್ಸ್‌ಪ್ರೆಸ್ ವಿಪಿಎನ್

Update: 2022-06-02 10:00 GMT

ಹೊಸದಿಲ್ಲಿ: ವಿಪಿಎನ್ ಅಥವಾ ವರ್ಚುವಲ್ ಪ್ರೈವೇಟ್ ನೆಟ್‍ ವರ್ಕ್ ಪೂರೈಕೆದಾರರಿಗೆ ಭಾರತ ಸರಕಾರದ ಹೊಸ ನಿಯಮಗಳು ತನ್ನ ಮೊದಲ ಬಲಿ ಪಡೆದುಕೊಂಡಿದೆ.

ಖ್ಯಾತ ವಿಪಿಎನ್ ಸೇವಾ ಪೂರೈಕೆದಾರ ಸಂಸ್ಥೆಯಾಗಿರುವ ಎಕ್ಸ್‌ ಪ್ರೆಸ್ ವಿಪಿಎನ್  ತನ್ನ ಎಲ್ಲಾ ಭಾರತ-ಮೂಲದ ವಿಪಿಎನ್ ಸರ್ವರ್‍ಗಳನ್ನು ತೆರವುಗೊಳಿಸುವುದಾಗಿ ಹೇಳಿದೆ. ಹೊಸ  ನಿಯಮಾವಳಿಗಳು ಅದೆಷ್ಟು ವ್ಯಾಪಕವಾಗಿವೆಯೆಂದರೆ ಸಂಭಾವ್ಯ ದುರುಪಯೋಗಕ್ಕೆ  ದಾರಿ ಮಾಡಿಕೊಡಬಹುದು ಎಂದು ಸಂಸ್ಥೆ ಹೇಳಿದೆ.

ಭಾರತ ಸರಕಾರದ ಹೊಸ ದತ್ತಾಂಶ ಕಾನೂನಿನಂತೆ ಎಲ್ಲಾ ವಿಪಿಎನ್ ಪೂರೈಕೆದಾರರು ತಮ್ಮ ಬಳಕೆದಾರ ಮಾಹಿತಿಯನ್ನು ಕನಿಷ್ಠ ಐದು ವರ್ಷಗಳ ಕಾಲ ಸಂಗ್ರಹಿಸಿಡಬೇಕಿದೆ.

ತಾನು ಭಾರತ-ಮೂಲದ ವಿಪಿಎನ್ ಸರ್ವರ್‍ಗಳನ್ನು ತೆರವುಗೊಳಿಸಿದರೂ ಭಾರತೀಯ ಬಳಕೆದಾರರು ಇನ್ನೂ ವಿಪಿಎನ್  ಸರ್ವರ್‍ಗಳನ್ನು ಬಳಸಬಹುದಾಗಿದ್ದು ಆದರೆ ಅವುಗಳಿಗೆ ಭಾರತೀಯ ಐಪಿ ವಿಳಾಸಗಳಿರಲಿದೆ ಎಂದು ಸಂಸ್ಥೆ ಹೇಳಿದೆ. ಆದರೆ ಈ ವರ್ಚುವಲ್ ಭಾರತೀಯ ಸರ್ವರ್‍ಗಳು  ಭೌತಿಕವಾಗಿ ಸಿಂಗಾಪುರ ಮತ್ತು ಇಂಗ್ಲೆಂಡ್‍ನಲ್ಲಿರಲಿವೆ ಎಂದು ಸಂಸ್ಥೆ ಹೇಳಿದೆ.

ಸರಕಾರದ ನಿಯಮಗಳು ಪ್ರಯೋಜನಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡಲಿದೆ ಎಂದೂ ಅದು ಹೇಳಿದೆ.

ಎಪ್ರಿಲ್ 2022ರಲ್ಲಿ ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ಹೇಳಿಕೆ ನೀಡಿ ವಿಪಿಎನ್ ಪೂರೈಕೆದಾರರು ಗ್ರಾಹಕರ/ಚಂದಾದಾರರ ಹೆಸರು, ವಿಪಿಎನ್ ಪಡೆದ ದಿನಾಂಕ ಹಾಗೂ ಅವಧಿ, ಅವರಿಗೆ ನೀಡಿದ, ಅವರು ಬಳಸುತ್ತಿರುವ ಐಪಿ ವಿಳಾಸಗಳು, ಇಮೇಲ್ ವಿಳಾಸ ಹಾಗೂ ನೋಂದಣಿ ಸಂದರ್ಭ ಬಳಕೆಯಾದ ಸಮಯ ಮುದ್ರೆ, ವಿಪಿಎನ್ ಸೇವೆ ಪಡೆದ ಉದ್ದೇಶ, ಮಾನ್ಯವಾದ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳು ಹಾಗೂ ಮಾಲೀಕತ್ವದ ಕುರಿತಾದ ಮಾಹಿತಿಗಳನ್ನು ಐದು ವರ್ಷ ಸಂಗ್ರಹಿಸಿಡಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News