ಪುರಿ ದೇಗುಲ ನಿರ್ಮಾಣದ ವಿರುದ್ಧ ಅರ್ಜಿ ಕುರಿತು ತನ್ನ ಆದೇಶವನ್ನು ಕಾಯ್ದರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜೂ.2: ಪುರಿಯ ಪ್ರಸಿದ್ಧ ಶ್ರೀಜಗನ್ನಾಥ ದೇವಸ್ಥಾನದಲ್ಲಿ ಒಡಿಶಾ ಸರಕಾರವು ಕಾನೂನುಬಾಹಿರವಾಗಿ ಉತ್ಖನನ ಮತ್ತು ನಿರ್ಮಾಣ ಕಾರ್ಯವನ್ನು ನಡೆಸುತ್ತಿದೆ ಎಂದು ಆರೋಪಿಸಿ ಅರ್ಧೇಂದು ಕುಮಾರ್ ದಾಸ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ಕುರಿತು ತನ್ನ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರದವರೆಗೆ ಕಾಯ್ದಿರಿಸಿದೆ.
ಕಕ್ಷಿಗಳ ವಕೀಲರು ತಮ್ಮ ವಾದಗಳನ್ನು ಪೂರ್ಣಗೊಳಿಸಿದ ಬಳಿಕ ತನ್ನ ಆದೇಶವನ್ನು ಹೊರಡಿಸುವುದಾಗಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಹಿಮಾ ಕೊಹ್ಲಿ ಅವರ ರಜಾಕಾಲದ ಪೀಠವು ಗುರುವಾರ ವಿಚಾರಣೆ ಸಂದರ್ಭ ತಿಳಿಸಿತು.
ನಿಷೇಧಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಸಬಾರದು ಎಂಬ ಸ್ಪಷ್ಟ ನಿರ್ಬಂಧವಿದೆ. ರಾಜ್ಯ ಸರಕಾರವು ನಿಯಂತ್ರಿತ ಪ್ರದೇಶದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಅನುಮತಿಯನ್ನೂ ಪಡೆದುಕೊಂಡಿಲ್ಲ ಎಂದು ಹೇಳಿದ ಕಕ್ಷಿದಾರರ ಪರ ಹಿರಿಯ ನ್ಯಾಯವಾದಿ ಮಹಾಲಕ್ಷ್ಮಿ ಪಾವನಿ ಅವರು,ಸರಕಾರವು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿದೆ. ಇಂತಹ ಪತ್ರವನ್ನು ನೀಡಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಮತ್ತು ಕೇಂದ್ರ ಅಥವಾ ರಾಜ್ಯದ ಪುರಾತತ್ವ ನಿರ್ದೇಶಕರು ಮಾತ್ರ ಇಂತಹ ಪ್ರಮಾಣಪತ್ರವನ್ನು ನೀಡಬಹುದಾಗಿದೆ ಎಂದರು.
ಒಡಿಶಾ ಸರಕಾರದ ಸಂಸ್ಕೃತಿ ಇಲಾಖೆಯ ನಿರ್ದೇಶಕರಿಂದ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ನಿವೇಶನಗಳು ಮತ್ತು ಪಳೆಯುಳಿಕೆಗಳ ಕಾಯ್ದೆಯಡಿ ಅವರು ಸಕ್ಷಮ ಅಧಿಕಾರಿಯಾಗಿದ್ದಾರೆ. 100 ಮೀ.ವಿಸ್ತೀರ್ಣದೊಳಗೆ ನಿರ್ಮಾಣವನ್ನು ನಿಷೇಧಿಸಲಾಗಿದೆ. ಸರಕಾರದ ಯೋಜನೆಯು ಸೌಲಭ್ಯಗಳನ್ನು ಒದಗಿಸುವ ಮತ್ತು ದೇವಸ್ಥಾನವನ್ನು ಸುಂದರಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಒಡಿಶಾ ಅಡ್ವೋಕೇಟ್ ಜನರಲ್ ಅಶೋಕ ಕುಮಾರ ಪರಿಜಾ ತಿಳಿಸಿದರು.
ಪ್ರತಿನಿತ್ಯ 60,000 ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಹೆಚ್ಚು ಟಾಯ್ಲೆಟ್ ಗಳ ಅಗತ್ಯವಿದೆ. ಪ್ರಕರಣದಲ್ಲಿಯ ಅಮಿಕಸ್ ಕ್ಯೂರೆ ಅವರು ಹೆಚ್ಚಿನ ಟಾಯ್ಲೆಟ್‌ಗಳ ಅಗತ್ಯವನ್ನು ಬೆಟ್ಟು ಮಾಡಿದ್ದಾರೆ ಮತ್ತು ನ್ಯಾಯಾಲಯವು ಈ ಸಂಬಂಧ ನಿರ್ದೇಶಗಳನ್ನು ಹೊರಡಿಸಿತ್ತು ಎಂದೂ ಅವರು ಹೇಳಿದರು.