ಅಕ್ರಮ ಅಕ್ಕಿ ಸಾಗಾಟ: ಟೆಂಪೋ ಚಾಲಕನ ಬಂಧನ

Update: 2022-06-02 15:40 GMT

ಹಿರಿಯಡ್ಕ, ಜೂ.2: ರಾಜ್ಯ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಟೆಂಪೊದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಾಲಕನನ್ನು ಅಧಿಕಾರಿಗಳ ತಂಡ ಜೂ.1ರಂದು ಕಣಜಾರು ಗ್ರಾಮದ ರಾಜೀವ ನಗರ ಎಂಬಲ್ಲಿ ಬಂಧಿಸಿ ಅಕ್ಕಿಯನ್ನು ವಶಪಡಿಸಿಕೊಂಡಿದೆ.

ಬಂಧಿತನನ್ನು ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯಂತೆ ಕಾರ್ಕಳ ತಾಲೂಕು ಆಹಾರ ನಿರೀಕ್ಷಕಿ ಸುಮತಿ ನೇತೃತ್ವದಲ್ಲಿ ಕಣಜಾರು ಗ್ರಾಮ ಲೆಕ್ಕಿಗ ಸುಚಿತ್ರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್, ಹಿರಿಯಡಕ ಪೊಲೀಸ್ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ, ಟೆಂಪೊದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಪತ್ತೆ ಹಚ್ಚಿದೆ.

ಟೆಂಪೋದಲ್ಲಿದ್ದ 7 ಗೋಣಿ ಚೀಲಗಳಲ್ಲಿ ಹಾಗೂ 34 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 1184.100 ಕೆಜಿ. ಕುಚ್ಚಿಗೆ ಅಕ್ಕಿ, 260.600 ಕೆ ಜಿ ಬೆಳ್ತಿಗೆ ಅಕ್ಕಿ ಸೇರಿದಂತೆ ಒಟ್ಟು 41 ಚೀಲಗಳಲ್ಲಿ 1444.700 ಕೆಜಿ ತೂಕದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ, ಟಾಟಾ ಏಸ್ ವಾಹನ, ಬ್ಯಾಟರಿ ಚಾಲಿತ ಮಾಪನ ಹಾಗೂ ವಾಹನದಲ್ಲಿದ್ದ ಖಾಲಿ 6 ಗೋಣಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಕಿಯ ಒಟ್ಟು ಮೌಲ್ಯ 31,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News