ಇಸ್ರೇಲ್ ರಕ್ಷಣಾ ಸಚಿವರ ಜೊತೆ ರಾಜ್ ನಾಥ್‌ ಸಿಂಗ್ ಮಾತುಕತೆ: ದ್ವಿಪಕ್ಷೀಯ ಬಲವರ್ಧನೆಗೆ ದೃಢಸಂಕಲ್ಪ

Update: 2022-06-02 18:26 GMT

ಹೊಸದಿಲ್ಲಿ, ಜೂ.2: ಭಾರತ ಪ್ರವಾಸದಲ್ಲಿರುವ ಇಸ್ರೇಲ್ನ ರಕ್ಷಣಾ ಸಚಿವ ಬೆಂಜಮಿನ್ ಗಾಂಟ್ಝ್ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ವಿಸ್ತೃತವಾದ ಮಾತುಕತೆಗಳನ್ನು ನಡೆಸಿದರು. ಪ್ರಾದೇಶಿಕ ಭದ್ರತಾ ಪರಿಸ್ಥಿತಿಯಲ್ಲಿನ ನೂತನ ಬೆಳವಣಿಗೆಗಳು ಹಾಗೂ ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಪಡಿಸುವ ಮಾರ್ಗೋಪಾಯಗಳ ಕುರಿತು ಉಭಯ ನಾಯಕರ ಮಾತುಕತೆಯ ವೇಳೆ ಚರ್ಚಿಸಿದರು.

ಉಭಯದೇಶಗಳ ನಡುವೆ ರಕ್ಷಣೆ ಹಾಗೂ ಸೇನಾ ಸಹಕಾರವನ್ನು ವಿಸ್ತರಿಸುವ ತಮ್ಮ ದೃಢನಿಶ್ಚಯವನ್ನು ಪುನರುಚ್ಚರಿಸುವ ‘ದೂರದೃಷ್ಟಿಯ ಹೇಳಿಕೆ’ಯನ್ನು ಇತ್ತಂಡಗಳು ಈ ಸಂದರ್ಭದಲ್ಲಿ ಪುನರುಚ್ಚರಿಸಿದವು.
 
ಭಾರತ ಹಾಗೂ ಇಸ್ರೇಲ್ ನಡುವೆ ಹೆಚ್ಚುತ್ತಿರುವ ವ್ಯೆಹಾತ್ಮಕ ಬಾಂಧವ್ಯಕ್ಕೆ ಅನುಗುಣವಾಗಿ ಸೇನಾ ಸಲಕರಣೆಗಳ ಸಹ ಅಭಿವೃದ್ಧಿ ಹಾಗೂ ಸಹ ಉತ್ಪಾದನೆಯ ಕುರಿತು ಉಭಯ ರಕ್ಷಣಾ ಸಚಿವರುಗಳು ಸಮಾಲೋಚನೆ ನಡೆಸಿದರೆಂದು ಅಧಿಕಾರಿಗಳು ತಿಳಿಸಿದರು. ಉಕ್ರೇನ್ ಸಂಘರ್ಷ ಸೇರಿದಂತೆ ಭೌಗೋಳಿಕ ರಾಜಕೀಯ ಪ್ರಕ್ಷುಬ್ದತೆಯ ಬಗೆಗೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಟ್ಝ್ ಜೊತೆಗಿನ ಮಾತುಕತೆಯು ಸೌಹಾರ್ದಪೂರ್ಣವಾಗಿತ್ತು ಹಾಗೂ ಫಲದಾಯಕವಾಗಿತ್ತು ಎಂದು ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.

‘‘ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ರಕ್ಷಣಾ ಸಹಕಾರ ಹಾಗೂ ಜಾಗತಿಕ ಮತ್ತು ಪ್ರಾದೇಶಿಕ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಇಸ್ರೇಲ್ ಜೊತೆಗಿನ ನಮ್ಮ ವ್ಯೆಹಾತ್ಮಕ ಪಾಲುದಾರಿಕೆಗೆ ನಾವು ಹೆಚ್ಚಿನ ಮೌಲ್ಯವನ್ನು ನೀಡುತ್ತಿದ್ದೇವೆ’’ ಎಂದು ಸಿಂಗ್ ಟ್ವೀಟಿಸಿದ್ದಾರೆ.

ಭವಿಷ್ಯದಲ್ಲಿ ರಕ್ಷಣಾ ಸಹಕಾರಕ್ಕೆ ದಾರಿ ಮಾಡಿಕೊಡಬಲ್ಲಂತಹ ‘ದೂರದೃಷ್ಟಿಯ ಹೇಳಿಕೆಯನ್ನು ಉಭಯದೇಶಗಳು ಅಂಗೀಕರಿಸಿರುವುದು ಸಂತಸಕರವಾಗಿದೆ. ದ್ವಿಪಕ್ಷೀಯ ವ್ಯೆಹಾತ್ಮಕ ಹಾಗೂ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಭಯದೇಶಗಳ ನಡುವೆ ವಿಶಾಲವಾದ ಸಹಮತವೇರ್ಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಗಲ್ಫ್ ಪ್ರಾಂತದ ಒಟ್ಟಾರೆ ಪರಿಸ್ಥಿತಿಯ ಬಗೆಗೂ ಮಾತುಕತೆಯ ವೇಳೆ ಚರ್ಚಿಸಲಾಯಿತೆಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ ನಾಥ್ ಸಿಂಗ್ ಜೊತೆ ಮಾತುಕತೆ ನಡೆಸುವ ಮುನ್ನ ಗಾಂಟ್ಝ್ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News