ಚುನಾವಣೆ ದಿನಾಂಕ ಘೋಷಣೆಯಾಗದಿದ್ದರೆ ಪಾಕಿಸ್ತಾನದಲ್ಲಿ ಅಂತರ್ಯುದ್ಧ: ಇಮ್ರಾನ್ ಎಚ್ಚರಿಕೆ

Update: 2022-06-02 18:57 GMT

ಇಸ್ಲಮಾಬಾದ್, ಜೂ.2: ಹೊಸ ಚುನಾವಣೆಯ ದಿನಾಂಕವನ್ನು ಘೋಷಿಸದಿದ್ದರೆ ದೇಶದಲ್ಲಿ ಅಂತರ್ಯುದ್ಧ ಆರಂಭವಾಗಬಹುದು ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಸಿದ್ದಾರೆ.

ಪ್ರತಿಭಟನಾಕಾರರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ತೀರ್ಪಿಗೆ ಕಾಯುತ್ತಿದ್ದೇನೆ. ಆ ಬಳಿಕ ಸಾರ್ವತ್ರಿಕ ಚುನಾವಣೆ ಘೋಷಣೆ ಆಗ್ರಹಿಸಿ ನಡೆಸುವ ಜಾಥಾದ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದೇನೆ ಎಂದು ಪಾಕಿಸ್ತಾನದ ‘ಬೋಲ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ರಾಷ್ಟ್ರೀಯ ಅಸೆಂಬ್ಲಿಗೆ ಮರಳುವ ಪ್ರಶ್ನೆಯೇ ಇಲ್ಲ. ಹಾಗೆ ಮಾಡಿದರೆ ತನ್ನ ಸರಕಾರದ ವಿರುದ್ಧದ ಒಳಸಂಚನ್ನು ಒಪ್ಪಿಕೊಂಡಂತಾಗುತ್ತದೆ ಎಂದ ಅವರು, ಕಾನೂನು ಮತ್ತು ಸಂವಿಧಾನಿಕ ವಿಧಾನದ ಮೂಲಕ ಚುನಾವಣೆಗೆ ಹೋಗಲು ಅವರು ಅವಕಾಶ ನೀಡದಿದ್ದರೆ ಈ ದೇಶ ಅಂತರ್ಯುದ್ಧದತ್ತ ಹೊರಳಲಿದೆ ಎಂದು ಎಚ್ಚರಿಸಿದರು.

 ತನ್ನನ್ನು ಪದಚ್ಯುತಗೊಳಿಸಿದ ಸಂಚಿನ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಆರೋಪಿಸಿರುವ ಇಮ್ರಾನ್ಖಾನ್, ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕ್ನಲ್ಲಿ ಈಗ ಶಹಬಾರ್ ಶರೀಫ್ ನೇತೃತ್ವದ ಆಮದು ಸರಕಾರ ಆಡಳಿತದಲ್ಲಿದೆ ಎಂದು ಟೀಕಿಸಿರುವ ಅವರು, ಜನತೆ ಒಪ್ಪುವ ಸರಕಾರವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತಕ್ಷಣ ಸಾರ್ವತ್ರಿಕ ಚುನಾವಣೆ ಘೋಷಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News