ಹುಸಿ ದೇಶಭಕ್ತರ ಹುನ್ನಾರವನ್ನು ಸೋಲಿಸಬೇಕಾಗಿದೆ
ಪಠ್ಯಪುಸ್ತಕಗಳಲ್ಲಿ ಯಾವ ರೀತಿಯ ಬರಹಗಳನ್ನು ಸೇರಿಸಲಾಗಿದೆ ಎನ್ನುವುದಕ್ಕಿಂತ ಮುಖ್ಯವಾದ ಪ್ರಶ್ನೆ ಎಂದರೆ ಎಂತಹ ವ್ಯಕ್ತಿಗಳ ಬರಹಗಳನ್ನು ಸೇರಿಸಲಾಗಿದೆ ಎನ್ನುವುದು. ಬರಹಗಳು ಅದೆಷ್ಟೇ ಅದ್ಭುತವಾಗಿದ್ದರೂ ಅವುಗಳನ್ನು ಬರೆದವರು ಎಂತಹವರು ಎನ್ನುವ ಹಿನ್ನೆಲೆಯಲ್ಲಿ ಪಠ್ಯಗಳ ಯುಕ್ತಾಯುಕ್ತತೆ ನಿರ್ಧಾರವಾಗಬೇಕು. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಪಠ್ಯಪುಸ್ತಕಗಳ ಪರಿಷ್ಕರಣೆಯ ವಿವಾದದಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳಲ್ಲಿ ಇದೂ ಒಂದು. ಏನೇ ಆದರೂ ಇಬ್ಬರು ವ್ಯಕ್ತಿಗಳ ಬರಹಗಳು ಪರಿಷ್ಕೃತ ಪಠ್ಯಪುಸ್ತಕಗಳ ಭಾಗವಾಗಬಾರದಿತ್ತು. ಅದರಲ್ಲಿ ಒಂದು ಆರೆಸ್ಸೆಸ್ ಸ್ಥಾಪಕರ ಭಾಷಣದ ಪಠ್ಯ. ಇನ್ನೊಂದು ಪ್ರಸಿದ್ಧ ವಾಗ್ಮಿ ಎಂದು ಗುರುತಿಸಲ್ಪಡುತ್ತಿರುವ ಇನ್ನೊಬ್ಬ ವ್ಯಕ್ತಿಯ ಬರಹ. ಇವೆರಡು ಬರಹಗಳನ್ನು ಹೊರಗಿಡದ ಹೊರತು ಸದರಿ ಪಠ್ಯಪುಸ್ತಕವನ್ನು ಪಠ್ಯಪುಸ್ತಕ ಎಂದು ಕರೆಯಲೂ ಸಾಧ್ಯವಾಗದು.
ಆರೆಸ್ಸೆಸ್ ಸ್ಥಾಪಕರ ಬರಹ ಪಠ್ಯಪುಸ್ತಕದ ಭಾಗವಾಗಕೂಡದು ಎನ್ನುವುದಕ್ಕೆ ಕಾರಣ ಹೀಗಿದೆ. ಆರೆಸ್ಸೆಸ್ ಎಂದರೆ ದೇಶಭಕ್ತ ಸಂಘಟನೆ ಎಂದು ಅವರು ಹೇಳುತ್ತಿದ್ದಾರೆ. ಹೌದು ದೇಶಭಕ್ತ ಸಂಘಟನೆಯೇ ಇರಬಹುದು. ಅದರ ಭಕ್ತಿ ಇರುವುದು ಅದರ ಕಲ್ಪನೆಯ ಭಾರತಕ್ಕೆಯೇ ಹೊರತು 1950ರ ಸಂವಿಧಾನದ ಮೂಲಕ ಉದಯಿಸಿದ ಭಾರತ ದೇಶಕ್ಕಲ್ಲ. ಸಂವಿಧಾನವನ್ನು ಅದು ಎಷ್ಟರ ಮಟ್ಟಿಗೆ ಒಪ್ಪಿದೆ ಎನ್ನುವುದರ ಬಗ್ಗೆ ಇನ್ನೂ ಗೊಂದಲವಿದೆ. ಆ ಸಂಘಟನೆಯನ್ನು ಕಾಲಕಾಲಕ್ಕೆ ಮುನ್ನಡೆಸಿದವರು ಮಂಡಿಸಿದ ವಿಚಾರಧಾರೆಯಲ್ಲಿ ಅವರು ಈ ದೇಶದ ಸಂವಿಧಾನವನ್ನು ಖಂಡಿಸಿದ್ದಾರೆ, ದೇಶದ ಜನ ವಿವಿಧ ರಾಜ್ಯಗಳ ನೆಲ-ಜಲ-ಭಾಷೆಗಳಿಗೆ ಬದ್ಧರಾಗಿರುವುದನ್ನು ವಿರೋಧಿಸಿದ್ದಾರೆ (ಅರ್ಥಾತ್ ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ), ಎಲ್ಲದಕ್ಕಿಂತಲೂ ಮುಖ್ಯವಾಗಿ ಸಂವಿಧಾನ ಸಾರುವ ಸಮಾನತೆಯನ್ನು ವಿರೋಧಿಸಿದ್ದಾರೆ. ಈ ವಿಚಾರಗಳ ಬಗ್ಗೆ ಆ ಸಂಘಟನೆಯ ಈಗಿನ ನಿಲುವೇನು ಎನ್ನುವುದರ ಬಗ್ಗೆ ಅದು ಸ್ಪಷ್ಟಪಡಿಸುವುದಿಲ್ಲ. ಇನ್ನೂ ಈ ದೇಶದಲ್ಲಿ ನಮ್ಮ ಮಕ್ಕಳಿಗೆ ಸಂವಿಧಾನದ ಮೌಲ್ಯಗಳನ್ನು ಮತ್ತು ನೈತಿಕತೆಗಳನ್ನೇ ಸರಿಯಾಗಿ ತಿಳಿಹೇಳುವ ಮಟ್ಟಕ್ಕೆ ನಮ್ಮ ಪಠ್ಯಪುಸ್ತಕಗಳು ತಯಾರಾಗುತ್ತಿಲ್ಲ, ನಮ್ಮ ಶಿಕ್ಷಕವೃಂದ ಕೂಡಾ ತರಬೇತಿ ಹೊಂದಿಲ್ಲ. ಈ ಸ್ಥಿತಿಯಲ್ಲಿ ಸಂವಿಧಾನವನ್ನೇ ಗುಮಾನಿಯಿಂದ ನೋಡುವ ಸಂಘಟನೆಯೊಂದನ್ನು ಹುಟ್ಟುಹಾಕಿದ ವ್ಯಕ್ತಿ ಬರೆದ ಬರಹವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಮೂಲಕ ಈ ಸರಕಾರ ಅರಳುವ ಮನಸ್ಸುಗಳಿಗೆ, ಬೆಳೆಯುವ ಮೆದುಳುಗಳಿಗೆ ನೀಡಲು ಹೊರಟಿರುವ ಸಂದೇಶವಾದರೂ ಎಂತಹದ್ದು? ಪಠ್ಯಪುಸ್ತಕದ ಮೊದಲ ಪುಟದಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆ, ಎರಡನೇ ಪುಟದಲ್ಲಿ ‘‘ಭಾರತವು ನನ್ನ ದೇಶ ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು’’ ಎಂದು ಸಾರುವ ಸಂವಿಧಾನ ಪ್ರಣೀತ ಪ್ರತಿಜ್ಞೆ. ಅದರೊಳಗೆ ಸಂವಿಧಾನವನ್ನಿನ್ನೂ ಸಂಪೂರ್ಣ ಸ್ವೀಕರಿಸದ ಒಂದು ಸಂಘಟನೆಯ ಸ್ಥಾಪಕರು ಬರೆದ ಪಠ್ಯ! ಈಗ ವಾಗ್ಮಿಯ ವಿಚಾರಕ್ಕೆ ಬರೋಣ. ಈ ವಾಗ್ಮಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ, ವೀಡಿಯೊ ಪ್ರಸ್ತುತಿಗಳಲ್ಲಿ ಎಗ್ಗಿಲ್ಲದೆ ಸುಳ್ಳುಗಳನ್ನು, ತಿರುಚಿದ ಸತ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಆಪಾದನೆಗಳಿವೆ. ಅವರು ಯಾವುದೇ ರೀತಿಯ ವೃತ್ತಿಪರತೆಯನ್ನು ಪ್ರದರ್ಶಿಸುವುದರ ಬದಲು ಒಬ್ಬ ನಾಯಕನನ್ನು ಯದ್ವಾತದ್ವ ಹೊಗಳುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವವರು ಎಂದೇ ಸಾರ್ವಜನಿಕವಾಗಿ ಗುರುತಿಸಲ್ಪಟ್ಟವರು. ಇವು ಕೇವಲ ಆಪಾದನೆ ಗಳು ಮಾತ್ರವಲ್ಲ, ಅದಕ್ಕೆ ಪೂರಕವಾದ ಸಾಕ್ಷಾಧಾರಗಳು ಇಂಟರ್‌ನೆಟ್ ನಲ್ಲಿ ಯಥೇಚ್ಛವಾಗಿ ಲಭ್ಯ ಇವೆ. ಅವರ ಸುಳ್ಳುಗಳನ್ನೇ ಬಳಸಿಕೊಂಡು ತಮಾಷೆಯ ವೀಡಿಯೊಗಳನ್ನು ಮಾಡಿ ಹಂಚಲಾಗುತ್ತಿದೆ. ಅದಕ್ಕೆಂದೇ ಮೀಸಲಾದ ಯು-ಟ್ಯೂಬ್ ಗುಂಪುಗಳಿವೆ. ಇಂತಹ ಒಬ್ಬ ಪ್ರಶ್ನಾರ್ಹ ಚಾರಿತ್ರ್ಯ ಹೊತ್ತ ವ್ಯಕ್ತಿಯ ಬರಹದಲ್ಲಿ ಅದೆಂತಹ ಅದ್ಭುತ ವಿಚಾರಗಳೇ ಇರಲಿ ಅದು ಪಠ್ಯಪುಸ್ತಕದ ಭಾಗವಾಗಬಾರದು. ಮಾಡಿದರೆ ಅದು ಮಕ್ಕಳಿಗೆ ಎಸಗುವ ಅನ್ಯಾಯ, ಶಿಕ್ಷಕರಿಗೆ ಮಾಡುವ ಅವಮಾನ. ಸರಕಾರಕ್ಕೆ ಇವರ ಬರಹವನ್ನು ಬಳಸಬೇಕೆಂಬ ಹಠ ಇದ್ದರೆ ಇವರ ಬಗ್ಗೆ ಇರುವ ಆಪಾದನೆಗಳು ಸರಿಯಿಲ್ಲ ಎಂದಾದರೂ ಹೇಳಬೇಕು. ಒಮ್ಮೆ ಶಿಕ್ಷಣ ಸಚಿವ, ಶಿಕ್ಷಣ ಕಾರ್ಯದರ್ಶಿ ಮತ್ತು ಸಾರ್ವಜನಿಕ ಶಿಕ್ಷಣ ಆಯುಕ್ತರು ಒಟ್ಟಿಗೆ ಕುಳಿತು ಈ ವ್ಯಕ್ತಿ ಆಡಿದ್ದು, ಮಾಡಿದ್ದು, ವರ್ತಿಸಿದ್ದು ಇತ್ಯಾದಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಲಿ. ಆನಂತರವೂ ಈ ವ್ಯಕ್ತಿಯ ಬರಹಗಳನ್ನು ಬಳಸಬಹುದು ಎಂದು ಅವರ ಆತ್ಮಸಾಕ್ಷಿ ಒಪ್ಪುತ್ತದೆಯೇ? ಒಪ್ಪಿದರೆ ಆತ್ಮಸಾಕ್ಷಿ ಎನ್ನುವುದೇ ಒಂದು ಸುಳ್ಳು ಎಂದಾದರೂ ನಾವು ಭಾವಿಸಬಹುದು. ಇನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಮುಖ್ಯಸ್ಥರು ಪ್ರಾಧ್ಯಾಪಕರೋ ಅಥವಾ ಕೋಚಿಂಗ್ ಸೆಂಟರ್‌ನ ಶಿಕ್ಷಕರೋ ಎನ್ನುವ ರೀತಿಯ ಚರ್ಚೆಗಳು ನಡೆಯುತ್ತಿವೆ. ಒಬ್ಬ ಕೋಚಿಂಗ್ ಸೆಂಟರ್‌ನ ಶಿಕ್ಷಕ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಮುಖ್ಯಸ್ಥನಾಗಿರುವುದು ಸರಿಯಲ್ಲ, ಆದರೆ ಒಬ್ಬ ಪ್ರಾಧ್ಯಾಪಕನಿಗೆ ಆ ಜವಾಬ್ದಾರಿ ನೀಡಿದರೆ ಸರಿ ಎನ್ನುವ ರೀತಿಯಲ್ಲಿ ಚರ್ಚೆಗಳು ಸಾಗುತ್ತಿವೆ. ಈ ರೀತಿಯ ಯೋಚನೆಯೇ ಸರಿಯಲ್ಲ. ಯಾಕೆಂದರೆ, ಯಾರಾದರೂ ಪ್ರಾಧ್ಯಾಪಕನೇ ಆಗಿದ್ದರೂ ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆ ಮಾಡಲು ಅವರಿಗೆ ಅರ್ಹತೆ ಇದೆ ಎಂದು ಹೇಳುವ ಹಾಗಿಲ್ಲ. ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆ ಅಪಾರ ಪರಿಣತಿ ಮತ್ತು ನೈಪುಣ್ಯತೆ ಬಯಸುವ ಕಾರ್ಯ. ಶಿಕ್ಷಣವನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿ ಪಠ್ಯ ರಚನೆಯಲ್ಲೇ ವಿಶೇಷ ಪರಿಣತಿ ಪಡೆದವರು ಈ ಕಾರ್ಯಕ್ಕೆ ಇಷ್ಟು ದೊಡ್ಡ ರಾಜ್ಯದಲ್ಲಿ, ಇಷ್ಟು ದೊಡ್ಡ ದೇಶದಲ್ಲಿ ಯಾರೂ ಯಾಕೆ ಸಿಗುವುದಿಲ್ಲ ಎನ್ನುವುದೇ ಒಂದು ಚೋದ್ಯ.
ಇಂತಹವರು ಬರೆದದ್ದನ್ನು ಯಾಕೆ ಸೇರಿಸಿದಿರಿ ಎಂದು ಯಾರಾದರೂ ಕೇಳಿದಾಕ್ಷಣ ಅವರನ್ನು ನೀವು ಎಡಪಂಥದವರು ಎಂದು ಹೀಯಾಳಿಸಲಾಗುತ್ತದೆ. ಎಡಪಂಥದವರ ಯೋಚನೆ, ವಿಚಾರ ಏನೇ ಇರಲಿ, ಕರ್ನಾಟಕದಲ್ಲಿ ಈಗ ಪಠ್ಯಪುಸ್ತಕಗಳ ಕುರಿತಾದ ವಿವಾದ ಏನು ಎದ್ದಿದೆಯೋ ಅದು ಎಡ-ಬಲದ ಸಂಘರ್ಷವಲ್ಲ, ಇದು ಸಂವಿಧಾನ ಪರ ಮತ್ತು ಸಂವಿಧಾನ ವಿರೋಧದ ಸಂಘರ್ಷ. ಪಠ್ಯ-ಪುಸ್ತಕ ಬರೆಯುವವರ ಮತ್ತು ಪರಿಷ್ಕರಿಸುವವರ ಪರಿಣತಿ, ಚಾರಿತ್ರ್ಯ ಹೇಗಿರಬೇಕು, ಹೇಗಿರಬಾರದು ಎನ್ನುವ ವಿಚಾರದ ಕುರಿತಾಗಿ ಎದ್ದಿರುವ ವಿವಾದ. ಪ್ರಶ್ನಿಸುವವರನ್ನೆಲ್ಲಾ ಕಾಂಗ್ರೆಸಿಗರೆಂದೋ, ಎಡಪಂಥದವರೆಂದೋ ಹಂಗಿಸಿ ಬಾಯಿ ಮುಚ್ಚಿಸುವುದು, ಅದಕ್ಕೆ ಮಾಧ್ಯಮಗಳು ಧ್ವನಿಗೂಡಿಸುತ್ತಿರುವುದು ಒಂದು ವ್ಯವಸ್ಥಿತ ಸಂಚಿನ ಭಾಗ ಅಥವಾ ವಿವೇಚನಾ ದಾರಿದ್ರ್ಯ.
ಒಂದು ಜಾತಿಗೆ ಸೇರಿದವರ ನಂಬಿಕೆ-ಆಚಾರ-ವಿಚಾರಗಳನ್ನೂ ಒಂದು ಇಡೀ ಮತ-ಧರ್ಮದ ನಂಬಿಕೆ-ಆಚಾರ-ವಿಚಾರಗಳೆಂಬಂತೆ ಹೇರುವ, ಅದಕ್ಕಿಂತಾಚೆಗೆ ಅವುಗಳನ್ನು ಒಂದು ಇಡೀ ದೇಶದ ನಂಬಿಕೆ-ಆಚಾರ-ವಿಚಾರಗಳೆಂಬಂತೆ ಬಿಂಬಿಸುವ, ಅವುಗಳನ್ನು ಒಂದು ಇಡೀ ನಾಗರಿಕತೆಯ ನಂಬಿಕೆ-ಆಚಾರ-ವಿಚಾರ ಎಂಬಂತೆ ರೂಪಿಸಲು ಹೊರಟಿರುವ ವಸಾಹತುಶಾಹೀ ಮನೋಭಾವದ ಅಪರಾವತಾರವೆಂಬಂತೆ ನಮ್ಮಕಾಲದಲ್ಲಿ ಎದ್ದುನಿಂತಿರುವ ಒಂದು ರಾಜಕೀಯಕ್ಕೆ ಪಠ್ಯಪುಸ್ತಕಗಳನ್ನು ಮಕ್ಕಳನ್ನೂ ದಾಳವಾಗಿ ಬಳಸಿಕೊಳ್ಳುವ ಹುಸಿ ದೇಶಭಕ್ತರ ಹುನ್ನಾರವನ್ನು ಸೋಲಿಸಬೇಕಾಗಿರುವುದು ನಿಜವಾದ ದೇಶಭಕ್ತರ ಪರಮ ಕರ್ತವ್ಯ. ಇಲ್ಲೂ ಕರ್ತವ್ಯ ಲೋಪ ಎಸಗಿದರೆ, ಇಲ್ಲೂ ಧೈರ್ಯ ತೋರದಿದ್ದರೆ, ಇಲ್ಲೂ ಲಾಭ ನಷ್ಟದ ಲೆಕ್ಕ ಹಾಕಿದರೆ ಅದು ನಮ್ಮ ಮಕ್ಕಳನ್ನು ನಾವೇ ದುರಂತದ ಕೂಪಕ್ಕೆ ದೂಡಿದಂತೆ.