×
Ad

ಈ ವಿಪರೀತ ಪ್ರಾತಿನಿಧ್ಯಕ್ಕೆ ಅಸಾಮಾನ್ಯ ಪ್ರತಿಭೆ ಕಾರಣವಲ್ಲವೇ?

Update: 2022-06-03 10:22 IST

ಕೇವಲ ಜಾತಿ ನೋಡಿ ತೀರಾ ಸಣ್ಣ ಸಂಖ್ಯೆಯಲ್ಲಿರುವ ಒಂದು ಜಾತಿಯವರಿಗೆ ಇಷ್ಟೆಲ್ಲಾ ವಿಪರೀತ ಪ್ರಾತಿನಿಧ್ಯ ಏಕೆಂದು ಪ್ರಶ್ನಿಸುವವರು, ಈ ರೀತಿ ವಿಪರೀತ ಪ್ರಾತಿನಿಧ್ಯ ಪಡೆದವರು ಅಸಾಮಾನ್ಯ ಪ್ರತಿಭಾವಂತರೆಂಬುದನ್ನು ಗುರುತಿಸಿ, ಇದು ‘ಪ್ರತಿಭೆಗೆ ತಕ್ಕ ಪುರಸ್ಕಾರ’ ಎಂಬ ತರ್ಕವನ್ನು ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ ?

ನಮ್ಮ ಕರ್ನಾಟಕದಲ್ಲಿ ಸರಕಾರವು ನೇಮಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 7 ಮಂದಿ ಸದಸ್ಯರಿದ್ದು ಅವರಲ್ಲಿ 6 ಮಂದಿ ಬ್ರಾಹ್ಮಣರು ಎಂಬ ಕಾರಣಕ್ಕಾಗಿ ಹಲವರು ಭಾರೀ ರಾದ್ದಾಂತ ಮಾಡುತ್ತಿದ್ದಾರೆ. 7 ರಲ್ಲಿ 6 ಎಂಬುದು ವಿಪರೀತ ಪ್ರಾತಿನಿಧ್ಯ ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇಂತಹ ಸನ್ನಿವೇಶಗಳಲ್ಲಿ, ಕೇವಲ ಜಾತಿ ನೋಡಿ ತೀರಾ ಸಣ್ಣ ಸಂಖ್ಯೆಯಲ್ಲಿರುವ ಒಂದು ಜಾತಿಯವರಿಗೆ ಇಷ್ಟೆಲ್ಲಾ ವಿಪರೀತ ಪ್ರಾತಿನಿಧ್ಯ ಏಕೆಂದು ಪ್ರಶ್ನಿಸುವವರು, ಈ ರೀತಿ ವಿಪರೀತ ಪ್ರಾತಿನಿಧ್ಯ ಪಡೆದವರು ಅಸಾಮಾನ್ಯ ಪ್ರತಿಭಾವಂತರೆಂಬುದನ್ನು ಗುರುತಿಸಿ, ಇದು ‘ಪ್ರತಿಭೆಗೆ ತಕ್ಕ ಪುರಸ್ಕಾರ’ ಎಂಬ ತರ್ಕವನ್ನು ಯಾಕೆ ಗಂಭೀರವಾಗಿ ಪರಿಗಣಿಸುವುದಿಲ್ಲ ?

ಜನಸಂಖ್ಯೆಯಲ್ಲಿ ಕೇವಲ ಸುಮಾರು ಶೇ. 4 ಪ್ರಾತಿನಿಧ್ಯವಿರುವ ಪ್ರಸ್ತುತ ಅತ್ಯಲ್ಪಸಂಖ್ಯಾತ ಸಮುದಾಯದ ಅಸಾಮಾನ್ಯ ಪ್ರತಿಭೆಗೆ ಕೇವಲ ಪಠ್ಯ ಪುಸ್ತಕ ಸಮಿತಿಯಲ್ಲಿ ಮಾತ್ರವಲ್ಲ ಬೇರೆ ಹಲವೆಡೆಯೂ ಅಸಾಮಾನ್ಯ ಪುರಸ್ಕಾರ ಸಿಕ್ಕಿದೆ.

ಕಳೆದ ವರ್ಷ ಪ್ರಕಟವಾದ ಒಂದು ಮಾಹಿತಿ ಪ್ರಕಾರ ಭಾರತದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇವರಿಗೆ ಸಿಕ್ಕಿರುವ ಪ್ರಾತಿನಿಧ್ಯ ಎಷ್ಟು ವಿಪರೀತವೆಂದರೆ, ಆ ಪ್ರಶಸ್ತಿಯ ಹೆಸರನ್ನೇ ಬದಲಿಸಿ ಅದನ್ನು ‘ಬ್ರಾಹ್ಮಣ ರೇಟಿನ’ ಎಂದು ಕರೆಯಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ. ಆ ಪಟ್ಟಿಯಲ್ಲಿ ಶೇ. 54ಕ್ಕೂ ಹೆಚ್ಚಿನ ಮಂದಿ ಬ್ರಾಹ್ಮಣರು. ಕಾಯಸ್ಥ ಮತ್ತು ಖತ್ರಿ ಬ್ರಾಹ್ಮಣರನ್ನೂ ಸೇರಿಸಿದರೆ ಈ ಪಟ್ಟಿಯಲ್ಲಿ ಅವರ ಪ್ರಾತಿನಿಧ್ಯ ಶೇ. 66 ಅನ್ನೂ ಮೀರುತ್ತದೆ. ಇಬ್ಬರು ವಿದೇಶಿಯರಿಗೂ ಭಾರತ ರತ್ನ ಸಿಕ್ಕಿದೆ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಯಾರಿಗೂ ಅದು ಈ ತನಕ ಎಟುಕಿಲ್ಲ.

ಭಾರತ ರತ್ನದ ಬಳಿಕ ಅತ್ಯಧಿಕ ಗೌರವದ ಪ್ರಶಸ್ತಿ ‘ಪದ್ಮ ವಿಭೂಷಣ’. ಅಲ್ಲೂ ಕಥೆ ತುಂಬಾ ಭಿನ್ನವೇನಲ್ಲ. ಶೇ. 42.67 ಪ್ರಶಸ್ತಿಗಳು ಬ್ರಾಹ್ಮಣರಿಗೆ ದಕ್ಕಿವೆ. ಕಾಯಸ್ಥ ಮತ್ತು ಖತ್ರಿ ಬ್ರಾಹ್ಮಣರನ್ನು ಸೇರಿಸಿದರೆ ಬ್ರಾಹ್ಮಣರ ಪಾಲು ಶೇ. 55.76ರಷ್ಟಾಗುತ್ತದೆ. ಶೂದ್ರರಿಗೆ (ಆಇ ) ಸಿಕ್ಕಿರುವ ಪಾಲು ಕೇವಲ ಶೇ. 4.36 ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಿಕ್ಕಿರುವುದು ಜುಜುಬಿ ಶೇ. 1.86 ಪಾಲು ಮಾತ್ರ. ಸರಕಾರ ನೀಡುವ ಇತರ ಪ್ರಶಸ್ತಿಗಳ ಬಗ್ಗೆಯೂ ಇಂತಹ ಟಿಪ್ಪಣಿಗಳು ಮುಂದೆ ಬರುತ್ತಲೇ ಇರುತ್ತವೆ. ಆದರೆ ಏನು ಮಾಡೋಣ? ಪ್ರತಿಭೆ ಇದ್ದರೆ ತಾನೇ ಪುರಸ್ಕಾರ?

ದೇಶದಲ್ಲಿ ನ್ಯಾಯದ ಸರ್ವೋಚ್ಚ ಮಂದಿರವೆಂದು ಪರಿಗಣಿಸಲಾಗುವ ಸುಪ್ರೀಮ್ ಕೋರ್ಟ್ನೊಳಗೊಮ್ಮೆ ಇಣುಕಿ ನೋಡೋಣವೇ?

 ಕೆಲವೇ ವರ್ಷಗಳ ಹಿಂದೆ 2018 ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಹಿಂದೆಂದೂ ನಡೆಯದ ವಿವಾದಾಸ್ಪದ ಘಟನೆಯೊಂದು ನಡೆಯಿತು. ಸುಪ್ರೀಮ್ ಕೋರ್ಟಿನ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರುಗಳು ಆಗಿನ ಮುಖ್ಯ ನ್ಯಾಯಾಧೀಶರ ಕೆಲವು ಹೇಳಿಕೆಗಳು, ಕೆಲವು ಕ್ರಮಗಳು ಮತ್ತು ಕೆಲವು ಸನ್ನಿವೇಶಗಳಲ್ಲಿನ ಅವರ ನಡವಳಿಕೆಯ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ಪ್ರಕಟಿಸಿ ಸ್ವತಃ ಮುಖ್ಯ ನ್ಯಾಯಾಧೀಶರಿಗೆ ಒಂದು ಪತ್ರವನ್ನು ಬರೆದು ಆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದರು. ಆಗ ಮುಖ್ಯ ನ್ಯಾಯಾಧೀಶರಾಗಿದ್ದವರು, ದೇಶದ ನಿವೃತ್ತ ಮುಖ್ಯ ನ್ಯಾಯಾಧೀಶ ರಂಗನಾಥ್ ಮಿಶ್ರಾ ಅವರ ಪುತ್ರ ದೀಪಕ್ ಮಿಶ್ರಾ. ಅವರು ತಮ್ಮ ಮುಂದೆ ಬಂದ ಹಲವು ಪ್ರಮುಖ ಪ್ರಕರಣಗಳನ್ನು ಕಿರಿಯ ಶ್ರೇಣಿಯ ನ್ಯಾಯಾಧೀಶ ಅರುಣ್ ಮಿಶ್ರಾ ಅವರಿಗೆ ವರ್ಗಾಯಿಸಿದ್ದಾರೆ ಎಂಬುದು ಅವರ ಮೇಲಿನ ಒಂದು ಪ್ರಮುಖ ಆರೋಪವಾಗಿತ್ತು. ನಾಲ್ಕು ಮಂದಿ ಹಿರಿಯ ನ್ಯಾಯಾಧೀಶರುಗಳು ತಮ್ಮ ಪ್ರತಿಭಟನಾ ಪತ್ರವನ್ನು ಸಲ್ಲಿಸಿದ ಮರುದಿನ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮಾನನ್ ಮಿಶ್ರಾ ಅವರು ಸನ್ನಿವೇಶದ ಇತ್ಯರ್ಥಕ್ಕಾಗಿ ನ್ಯಾಯಾಧೀಶರ ಒಂದು ನಿಯೋಗವನ್ನು ರಚಿಸಿರುವುದಾಗಿ ಘೋಷಿಸಿದರು. ಈ ವೇಳೆ, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು, ಮುಖ್ಯ ನ್ಯಾಯಾಧೀಶರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸುವ ಇಂಗಿತ ಪ್ರಕಟಿಸಿದರು.

ಈ ಮೇಲಿನ ಒಂದೇ ಪ್ಯಾರಾದಲ್ಲಿ ಮಿಶ್ರಾ ಎಂಬ ಪದ ಎಷ್ಟು ಬಾರಿ ಬಂದಿದೆ ಎಂದೊಮ್ಮೆ ಎಣಿಸಿ ನೋಡಿ. ಮಿಶ್ರಾ ಎಂಬುದು ಸಾಮಾನ್ಯವಾಗಿ ಬ್ರಾಹ್ಮಣರ ಒಂದು ಪಂಗಡವು ಬಳಸುವ ಕುಲನಾಮ. ಒಂದೇ ಪ್ರಕರಣದಲ್ಲಿ ಇಷ್ಟೊಂದು ಮಿಶ್ರಾಗಳು ಕಂಡು ಬರಲು ಕಾರಣವೇನೆಂದು ಹಲವರು ಅಚ್ಚರಿ ಪಡುತ್ತಾರೆ. ಆದರೆ ಅವರ ಕುತೂಹಲ ತಣಿಸುವ ಮಾಹಿತಿಯೊಂದು ಇಲ್ಲಿದೆ:

ಸುಪ್ರೀಮ್ ಕೋರ್ಟಿನಲ್ಲಿ ಕೇವಲ ಶರ್ಮಾ, ವರ್ಮಾ, ಮುಖರ್ಜಿ, ಬ್ಯಾನರ್ಜಿ, ಉಪಾಧ್ಯಾಯ್‌ಗಳು ಮಾತ್ರವಲ್ಲ ಸಮಸ್ತ ಬ್ರಾಹ್ಮಣ ಸಮಾಜವನ್ನು ಮತ್ತು ಮೇಲ್ಜಾತಿಯನ್ನು ಪ್ರತಿನಿಧಿಸುವವರ ಪ್ರಶ್ನಾತೀತ ಪ್ರಾಬಲ್ಯ ಎದ್ದುಕಾಣುತ್ತದೆ. ಕಳೆದ ವರ್ಷ ಪ್ರಕಟವಾದ, ಸುಪ್ರೀಮ್ ಕೋರ್ಟ್ ವಕೀಲ ನಮಿತ್ ಸಕ್ಸೇನಾ ಅವರ ವರದಿಯೊಂದರ ಪ್ರಕಾರ ಸ್ವತಂತ್ರ ಭಾರತದ ಸುಪ್ರೀಮ್ ಕೋರ್ಟ್‌ನಲ್ಲಿ ಸರ್ವೋಚ್ಚ ಪದವಾಗಿರುವ ‘ಮುಖ್ಯ ನ್ಯಾಯಾಧೀಶರ’ ಸ್ಥಾನವನ್ನು ಈ ತನಕ ಅಲಂಕರಿಸಿದ 47 ಮಂದಿಯ ಪೈಕಿ ಕನಿಷ್ಠ 14 ಮಂದಿ (ಸುಮಾರು ಶೇ. 30) ಬ್ರಾಹ್ಮಣರು. ಸಕ್ಸೇನಾ ಅವರ ಪ್ರಕಾರ, ಕೇಂದ್ರದಲ್ಲಿ ಸರಕಾರ ಯಾವ ಪಕ್ಷದ್ದೇ ಇರಲಿ, ಸುಪ್ರೀಮ್ ಕೋರ್ಟ್ ನ್ಯಾಯಾಧೀಶರ ಹುದ್ದೆಗಳಲ್ಲಿ ಬ್ರಾಹ್ಮಣರಿಗೆ 30ರಿಂದ 40ರಷ್ಟು ಅಘೋಷಿತ ಮೀಸಲಾತಿ ಇದ್ದೇ ಇರುತ್ತದೆ.

 ನಾವಿನ್ನು ಮನರಂಜನೆಗಾಗಿ ಅವಲಂಬಿಸುವ ಕ್ರೀಡಾರಂಗದಲ್ಲಿ ನೋಡಿದರೆ ಅಲ್ಲಿಯೂ ಪ್ರತಿಭೆಗಳದ್ದೇ ವಿಜೃಂಭಣೆ. ಈ ಬಗ್ಗೆಯೂ ಹಲವು ವಲಯಗಳಲ್ಲಿ ಅಸಮಾಧಾನವಿದೆ. ಭಾರತೀಯ ಕ್ರಿಕೆಟ್ ವ್ಯವಹಾರಗಳನ್ನು ನಿಭಾಯಿಸುವ ಆಇಇಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಹೆಸರನ್ನು ಕೆಲವರು ‘ಬ್ರಾಹ್ಮಿನ್ಸ್ ಕಂಟ್ರೋಲ್ ಕ್ರಿಕೆಟ್ ಇನ್ ಇಂಡಿಯಾ’ ಎಂದು ತಿರುಚಿ ವ್ಯಾಖ್ಯಾನಿಸಿದ್ದೂ ಇದೆ. 2016ರಲ್ಲಿ, ಅಂದಿನ ದಿಲ್ಲಿಯ ಬಿಜೆಪಿ ಸಂಸದ ಡಾ.ಉದಿತ್ ರಾಜ್ ಅವರು ರಾಷ್ಟ್ರೀಯ ಕ್ರಿಕೆಟ್ ತಂಡಗಳಲ್ಲಿ ಬ್ರಾಹ್ಮಣರ ಅಸಾಮಾನ್ಯ ಪ್ರಾಬಲ್ಯವನ್ನು ಆಕ್ಷೇಪಿಸಿ, ಈ ರಂಗದಲ್ಲಿ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದರು. ಅವರ ಪ್ರಸ್ತುತ ಆಗ್ರಹಕ್ಕೆ ಮಾಧ್ಯಮಗಲ್ಲಿ ಭಾರೀ ವಿರೋಧ ಪ್ರಕಟವಾಗಿತ್ತು.

2008ರ ಸಿಡ್ನಿ ಪಂದ್ಯದಲ್ಲಿ ಆಡಿದ ಭಾರತೀಯ ಕ್ರಿಕೆಟ್ ತಂಡದಲ್ಲಿ 11ರಲ್ಲಿ 6 ಮಂದಿ ಬ್ರಾಹ್ಮಣರು ಕಂಡು ಬಂದಾಗ ಹಲವರು ಆ ಕುರಿತು ಆಕ್ಷೇಪವೆತ್ತಿದ್ದರು. ಈ ರೀತಿ ಆಕ್ಷೇಪಿಸುವ ಜಗಳಗಂಟರು ಬಾಯಿ ಮುಚ್ಚಿದ್ದು ಯಾವಾಗ ಗೊತ್ತೇ? 1971ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಾದ ಮೊದಲ ಟೆಸ್ಟ್ ಪಂದ್ಯದಲ್ಲಿ, ಭಾರತೀಯ ತಂಡದಲ್ಲಿ 8 ಮಂದಿ ಬ್ರಾಹ್ಮಣ ಕ್ರೀಡಾಳುಗಳಿದ್ದರು, 1997ರಲ್ಲಿ ದಕ್ಷಿಣ ಆಫ್ರಿಕಾದ ಎದುರು ಆಡಿದ ಭಾರತೀಯ ಟೆಸ್ಟ್ ತಂಡದಲ್ಲಿ 8 ಮಂದಿ ಬ್ರಾಹ್ಮಣ ಕ್ರೀಡಾಪಟುಗಳಿದ್ದರು ಮತ್ತು ಇಸವಿ 2000ದಲ್ಲಿ ಆಸ್ಟ್ರೇಲಿಯದ ವಿರುದ್ಧ ಆಡಿದ ಭಾರತೀಯ ಟೆಸ್ಟ್ ತಂಡದಲ್ಲಿಯೂ ಏಕಕಾಲದಲ್ಲಿ ಎಂಟೆಂಟು ಮಂದಿ ಪ್ರತಿಭಾವಂತ ಬ್ರಾಹ್ಮಣ ಆಟಗಾರರಿದ್ದರು ಎಂಬ ಮಾಹಿತಿ ದೊರೆತಾಗ ಅವರು ದಿಗಿಲುಗೊಂಡು ತೆಪ್ಪಗೆ ಕುಳಿತರು. ಪ್ರತಿಭೆಗೆ ಪರ್ಯಾಯ ಇಲ್ಲ ಎಂಬುದು ಆಗ ಅವರಿಗೆ ಮನವರಿಕೆಯಾಯಿತು.

ಮಾಧ್ಯಮ ಅಂದಾಗ ನೆನಪಾಯಿತು. ಈ ರಂಗವಂತೂ ಬ್ರಾಹ್ಮಣ ್ರತಿಭೆಯ ಗರಿಷ್ಠ ಫಲಾನುಭವಿಯಾಗಿದೆ.

2019ರಲ್ಲಿ ಭಾರತೀಯ ಆನ್ ಲೈನ್ ಸುದ್ದಿ ಸಂಸ್ಥೆ ನ್ಯೂಸ್ ಲಾಂಡ್ರಿ ಮತ್ತು ಅಂತರ್‌ರಾಷ್ಟ್ರೀಯ ಅಧ್ಯಯನ ಸಂಸ್ಥೆ ಆಕ್ಸ್ ಫಾಮ್ (ಗಿಊಅ) ನವರು ನಡೆಸಿದ ಜಂಟಿ ಸಮೀಕ್ಷೆಯೊಂದರ ಫಲಿತಾಂಶಗಳು ಲೋಕದ ಮುಂದೆ ಬಂದಾಗ, ಹಲವರಿಗೆ ಆಘಾತವಾಗಿತ್ತು. ದೇಶದ ಕೆಲವು ಪ್ರಮುಖ ದಿನಪತ್ರಿಕೆಗಳು, ನಿಯತಕಾಲಿಕಗಳು, ಟಿವಿ ನ್ಯೂಸ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ, ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯ ನಿರ್ವಾಹ ಸಂಪಾದಕ, ಬ್ಯೂರೋ ಮುಖ್ಯಸ್ಥ ಮುಂತಾದ ಪ್ರಮುಖ ನಾಯಕತ್ವ ಸ್ಥಾನಗಳಲ್ಲಿ ಯಾರಿದ್ದಾರೆ ಎಂಬುದನ್ನು ಅರಿಯುವುದು ಸಮೀಕ್ಷೆಯ ಗುರಿಯಾಗಿತ್ತು. ಸಮೀಕ್ಷೆಯ ಭಾಗವಾಗಿ ವಿವಿಧ ಸಂಸ್ಥೆಗಳ ಈ ಮಟ್ಟದ 121 ಪದಾಧಿಕಾರಿಗಳನ್ನು ಗುರುತಿಸಿ ಅವರ ಜಾತಿ ಹಿನ್ನೆಲೆಯನ್ನು ಜಾಲಾಡಿದಾಗ ಅಲ್ಲಿ ಎಸ್ಸಿ, ಎಸ್ಟಿ ಅಥವಾ ಒಬಿಸಿ ಪಂಗಡಗಳಿಗೆ ಸೇರಿದ ಒಬ್ಬರೂ ಕಾಣಸಿಗಲಿಲ್ಲ. ಸಮೀಕ್ಷೆಯಿಂದ ಅನಾವರಣಗೊಂಡ ಇತರ ಕೆಲವು ಸತ್ಯಗಳು ಇಲ್ಲಿವೆ:

ಪ್ರಮುಖ ಟಿವಿ ಡಿಬೇಟ್‌ಗಳನ್ನು ನಿರ್ವಹಿಸುವ, ಹಿಂದಿ ಚಾನೆಲ್‌ಗಳ 40 ಆ್ಯಂಕರ್‌ಗಳು ಮತ್ತು ಇಂಗ್ಲಿಷ್ ಚಾನೆಲ್‌ಗಳ 47 ಆ್ಯಂಕರ್‌ಗಳ ಪೈಕಿ ಶೇ. 75 ಮಂದಿ ಮೇಲ್ಜಾತಿಯವರಾಗಿದ್ದರು. ಅವರಲ್ಲಿ ದಲಿತ, ಆದಿವಾಸಿ ಅಥವಾ ಒಬಿಸಿ ವರ್ಗಗಳಿಗೆ ಸೇರಿದ ಒಬ್ಬರೂ ಇರಲಿಲ್ಲ.

ನ್ಯೂಸ್ ಚಾನೆಲ್‌ಗಳಲ್ಲಿ ನಡೆಯುವ ಶೇ. 70 ಡಿಬೇಟ್‌ಗಳಲ್ಲಿ ಭಾಗವಹಿಸಿದ ಪಾನೆಲಿಸ್ಟ್‌ಗಳಲ್ಲಿ ಹೆಚ್ಚಿನವರು ಮೇಲ್ಜಾತಿಗಳಿಗೆ ಸೇರಿದ್ದರು.

 ಅಧ್ಯಯನಕ್ಕೆ ಆರಿಸಿಕೊಳ್ಳಲಾದ 12 ನಿಯತಕಾಲಿಕಗಳ ಮುಖಪುಟಗಳಲ್ಲಿ ಪ್ರಕಟವಾದ 972 ಲೇಖನಗಳ ಪೈಕಿ ಕೇವಲ 10 ಲೇಖನಗಳು ಮಾತ್ರ ಜಾತಿ ಸಂಬಂಧಿ ಸಮಸ್ಯೆಗಳ ಕುರಿತಾಗಿದ್ದವು. ಸ್ವಾರಸ್ಯವೆಂದರೆ ಈ ವಿಷಯದಲ್ಲೂ ಬರೆಯಲು ಆರಿಸಿಕೊಳ್ಳಲಾದ ಲೇಖಕರಲ್ಲಿ ಹೆಚ್ಚಿನವರು ಮೇಲ್ಜಾತಿಯವರಾಗಿದ್ದರು. ಇದಕ್ಕಿಂತಲೂ ಗಮ್ಮತ್ತಿನ ಸಂಗತಿಯೇನೆಂದರೆ ಯಾವ ನ್ಯೂಸ್ ಲಾಂಡ್ರಿಯ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ನಡೆದಿತ್ತೋ, ಜಾತಿಯ ವಿಷಯದಲ್ಲಿ ಅದರ ಸ್ಥಿತಿಯೂ ಸಮಾಧಾನಕಾರವಾಗಿರಲಿಲ್ಲ. ನ್ಯೂಸ್ ಲಾಂಡ್ರಿ ಇಂಗ್ಲಿಷ್ ಆವೃತ್ತಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಲ್ಲದ ಜನರಲ್ ಕೆಟಗರಿಯವರ ಪ್ರಾಬಲ್ಯ ಶೇ. 49ರಷ್ಟಿದ್ದರೆ ಆ ಸಂಸ್ಥೆಯ ಹಿಂದಿ ಆವೃತ್ತಿಯಲ್ಲಿ ಅವರ ಪ್ರಾತಿನಿಧ್ಯ ಶೇ. 60ರಷ್ಟಿತ್ತು.

ಇತರ ರಂಗಗಳ ಸ್ಥಿತಿಗತಿಯನ್ನು ನೋಡಲು ಹೊರಟರೆ ಅಸಮರ್ಥರು ಇನ್ನಷ್ಟು ಹತಾಶರಾಗಬಹುದು. ಆದ್ದರಿಂದ ಸದ್ಯ ಇಷ್ಟು ಸಾಕು. ಪ್ರತಿಭೆ ಇಲ್ಲದ ದಡ್ಡರು ಎಷ್ಟೇ ತಲೆ ಬಡಿದುಕೊಳ್ಳಲಿ, ಎಲ್ಲೆಲ್ಲೂ ಪ್ರತಿಭೆ ವಿಜೃಂಭಿಸುವುದನ್ನು ತಡೆಯಲು ಅವರಿಂದ ಖಂಡಿತ ಸಾಧ್ಯವಿಲ್ಲ.

Writer - ಏಕಲವ್ಯ, ಮಂಗಳೂರು

contributor

Editor - ಏಕಲವ್ಯ, ಮಂಗಳೂರು

contributor

Similar News