×
Ad

ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಅಗತ್ಯವಿಲ್ಲ ಎಂಬ ಮೋಹನ್ ಭಾಗ್ವತ್ ಹೇಳಿಕೆಗೆ ದನಿಗೂಡಿಸಿದ ಶಿವಸೇನೆ

Update: 2022-06-03 20:10 IST

ಮುಂಬೈ: ಪ್ರತಿ ಮಸೀದಿಯಲ್ಲೂ ಶಿವಲಿಂಗ ಕಂಡು ದಿನವೂ ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್ ಮಾತಿಗೆ ಶಿವಸೇನೆಯೂ ದನಿಗೂಡಿಸಿದೆ. ಈ ಬಗ್ಗೆ ಶಿವಸೇನೆ ವಕ್ತಾರ ಹಾಗೂ ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ʼಮೋಹನ್ ಭಾಗವತ್ ಅವರ ಮಾತುಗಳನ್ನು ನಾನು ಒಪ್ಪುತ್ತೇನೆʼ ಎಂದು ಅವರು ಮುಂಬೈನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಕಾಶ್ಮೀರದಲ್ಲಿ ನಡೆದ ಹತ್ಯೆಗಳನ್ನು ಕೂಡಾ ರಾವತ್‌ ಕಟುವಾಗಿ ಟೀಕಿಸಿದ್ದಾರೆ.

''ಮೋಹನ್ ಭಾಗವತ್ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ದೇವಾಲಯಗಳಿಗಾಗಿ ಹೋರಾಡುವುದಕ್ಕಿಂತ ಕಾಶ್ಮೀರಿ ಪಂಡಿತರ ಜೀವವನ್ನು ಹೇಗೆ ಉಳಿಸಬಹುದು ಎಂಬುದನ್ನು ನೋಡುವುದು ಮುಖ್ಯ.”ಎಂದು ಸಂಜಯ್ ರಾವುತ್ ಹೇಳಿದ್ದಾರೆ.

 “ದೇಶದ ಹಲವು ರಾಜ್ಯಗಳಲ್ಲಿ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು, ನಾಗರಿಕರು ತೀವ್ರ ಬೆದರಿಕೆಯಲ್ಲಿದ್ದಾರೆ. ಮನೆ, ಕಚೇರಿಗಳಿಗೆ ನುಗ್ಗಿ ಪ್ರತಿದಿನ ಥಳಿಸಲಾಗುತ್ತಿದೆ. ಸೆಕ್ಷನ್ 370 ರದ್ದಿನ ನಂತರವೂ ಪರಿಸ್ಥಿತಿ ಬದಲಾಗಿಲ್ಲ” ಎಂದು ರಾವತ್‌ ಹೇಳಿದ್ದಾರೆ.

"ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಪ್ರಚಾರ ಮಾಡಲಾಯಿತು. ಪ್ರಧಾನಿ, ಗೃಹ ಸಚಿವರ ಕೃಪೆಯಿಂದ ನಿರ್ಮಾಪಕ 400, 500 ಕೋಟಿ ಗಳಿಸಿದ್ದಾರೆ. ಆದರೆ ಕಾಶ್ಮೀರಿ ಪಂಡಿತರು ನಾಶವಾಗಿದ್ದಾರೆ. ಈಗ ಪ್ರಾರಂಭವಾಗಿರುವ ಕಾಶ್ಮೀರಿ ಪಂಡಿತರ ವಲಸೆ ಬಗ್ಗೆ “ಕಾಶ್ಮೀರ ಫೈಲ್ಸ್ 2” ಅನ್ನು ಹೊರತರಬೇಕು. ಪ್ರಾರಂಭವಾಗಿರುವ ಹತ್ಯೆಗಳಿಗೆ ಹೊಣೆಗಾರರು ಯಾರು ಎಂದು ಮುಂದೆ ತರಬೇಕು,” ಎಂದು ಸಂಜಯ್ ರಾವತ್ ಒತ್ತಾಯಿಸಿದ್ದಾರೆ.

‘ಇಂದು ಕೂಡ ಇಬ್ಬರು ಸಾವನ್ನಪ್ಪಿದ್ದಾರೆ. ಜನರನ್ನು ಬೇಟೆಯಾಡಲಾಗುತ್ತಿದೆ. ಯಾವುದೇ ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಜನರು ವಲಸೆ ಹೋಗುತ್ತಿದ್ದಾರೆ. ಬೇರೆ ಪಕ್ಷಗಳ ಆಡಳಿತಾವಧಿಯಲ್ಲಿ ಇದು ನಡೆದಿದ್ದರೆ ಕಾಶ್ಮೀರಿ ಪಂಡಿತ, ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ದೇಶಾದ್ಯಂತ ಗಲಾಟೆ ಮಾಡುತ್ತಿತ್ತು. ಆದರೆ ಗೃಹ ಸಚಿವರೇ, ಪ್ರಧಾನ ಮಂತ್ರಿಗಳೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ನಿಮ್ಮದಾಗಿದ್ದರೂ ಕಾಶ್ಮೀರಿ ಪಂಡಿತರು ಪ್ರಾಣ ಕಳೆದುಕೊಳ್ಳುತ್ತಿರುವುದು ಅಥವಾ ವಲಸೆ ಮಾಡುತ್ತಿರುವುದು ಭಯಾನಕವಾಗಿದೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News