×
Ad

ಹೋಟೆಲ್ ನಲ್ಲಿ ಠಿಕಾಣಿ ಹೂಡಿರುವ ರಾಜಸ್ಥಾನದ 70 ಕಾಂಗ್ರೆಸ್ ಶಾಸಕರು

Update: 2022-06-03 20:52 IST
PHOTO:TWITTER/@ANI_MP_CG_RJ

ಜೈಪುರ,ಜೂ.6: ರಾಜ್ಯಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷ ಬಿಜೆಪಿಯಿಂದ ‘ಕುದುರೆ ವ್ಯಾಪಾರ’ದ ಭೀತಿಯಿಂದಾಗಿ ಹಲವಾರು ಸಚಿವರು ಸೇರಿದಂತೆ ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸುಮಾರು 70 ಶಾಸಕರು ಉದಯಪುರದ ಹೋಟೆಲ್ವೊಂದರಲ್ಲಿ ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ಕಳೆದ ತಿಂಗಳು ತನ್ನ ಚಿಂತನ ಶಿಬಿರವನ್ನು ಇದೇ ಹೋಟೆಲ್ ನಲ್ಲಿ ನಡೆಸಿತ್ತು.

ರಾಜಸ್ಥಾನದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ಜೂ.10ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳನ್ನು ಮತ್ತು ಬಿಜೆಪಿ ತನ್ನ ಒಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿರುವ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರನ್ನು ಬಿಜೆಪಿ ಬೆಂಬಲಿಸಿದೆ.

ಸುಭಾಷ್ ಚಂದ್ರ ಸ್ಪರ್ಧಿಸಿರುವ ಸ್ಥಾನಕ್ಕಾಗಿ ‘ಕುದುರೆ ವ್ಯಾಪಾರ ’ ನಡೆಯುವ ಭೀತಿಯಲ್ಲಿರುವ ಕಾಂಗ್ರೆಸ್ ತನ್ನ ಮತ್ತು ಇತರ ಬೆಂಬಲಿಗ ಶಾಸಕರನ್ನು ಒಟ್ಟಾಗಿರಿಸಲು ನಿರ್ಧರಿಸಿದೆ.

ವಿಧಾನಸಭೆಯಲ್ಲಿ 108 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲಲಿದೆ. ಈ ಎರಡು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿದ ಬಳಿಕ ಅದರ ಬಳಿ 26 ಹೆಚ್ಚುವರಿ ಮತಗಳು ಉಳಿಯುತ್ತವೆ. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ 41 ಮತಗಳಿಗೆ 15 ಮತಗಳು ಅದಕ್ಕೆ ಕಡಿಮೆಯಾಗುತ್ತವೆ.

ಅತ್ತ 71 ಶಾಸಕರನ್ನು ಹೊಂದಿರುವ ಬಿಜೆಪಿ ಒಂದು ಸ್ಥಾನವನ್ನು ಗೆದ್ದ ಬಳಿಕ ಅದರ ಬಳಿ 30 ಹೆಚ್ಚುವರಿ ಮತಗಳು ಉಳಿಯಲಿವೆ. ಸುಭಾಷ್ಚಂದ್ರರನ್ನು ಗೆಲ್ಲಿಸಲು ಅದಕ್ಕೆ ಇನ್ನೂ 11 ಮತಗಳು ಅಗತ್ಯವಾಗುತ್ತವೆ. ಪಕ್ಷವು ತನ್ನ 108 ಸೇರಿದಂತೆ 126 ಶಾಸಕರ ಬೆಂಬಲವನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ. ಮೂರು ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ 123 ಶಾಸಕರ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News