ತೆರಿಗೆದಾರರ ಹಣವನ್ನು ಪೋಲು ಮಾಡುವಂತಿಲ್ಲ: ಉ.ಪ್ರ. ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿರುದ್ಧ ಹೈಕೋರ್ಟ್ ಕಿಡಿ

Update: 2022-06-03 16:16 GMT

ಪ್ರಯಾಗರಾಜ್: ಹೆಚ್ಚುವರಿ ಅಡ್ವೊಕೇಟ್ ಜನರಲ್ ಪರವಾಗಿ ಒಂದೇ ಪ್ರಕರಣದಲ್ಲಿ ಎರಡು ಬಿಲ್‌ ಪಡೆದಿರುವ ವಿಚಾರವನ್ನು ಅಲಹಾಬಾದ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವಂತಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಬಿಲ್ ಮಾಡಿ, ರಾಜ್ಯ ಸರ್ಕಾರದ ಹೆಸರಿಗೆ ಎರಡನೇ ಬಿಲ್ ಮಾಡಿ ಹಣ ಪಡೆದಿದ್ದಾರೆ. ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯಲ್ಲಿ, ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಂಸಿ ಚತುರ್ವೇದಿ ಅವರು ರಾಜ್ಯವನ್ನು ಪ್ರತಿನಿಧಿಸಲು ಒಂದು ಬಿಲ್‌, ಗಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ ಪ್ರತಿನಿಧಿಸಲು ಒಂದು ಬಿಲ್ ತಯಾರಿಸಿದ್ದರು‌ ಎಂದು scroll.in ವರದಿ ಮಾಡಿದೆ.   

ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರು ಎರಡು ಬಿಲ್‌ ಗಳನ್ನು ಹೇಗೆ ಮಾಡಬಹುದು ಎಂದು ನ್ಯಾಯಾಲಯ ಕೇಳಿದೆ.  ಅಂತಹ ಸಂದರ್ಭಗಳಲ್ಲಿ, ಹೆಚ್ಚುವರಿ ಮೊತ್ತವನ್ನು ವಕೀಲರಿಂದ ವಸೂಲಿ ಮಾಡಬೇಕು ಏಕೆಂದರೆ ಅದು ʼತೆರಿಗೆದಾರರ ಹಣವಾಗಿದ್ದು ಅದನ್ನು ದುರುಪಯೋಗಪಡಿಸಲಾಗುವುದಿಲ್ಲʼ ಎಂದು ನ್ಯಾಯಾಲಯವು ಹೇಳಿದೆ.

ಈ ನಿರ್ದೇಶನಗಳನ್ನು ಅಂಗೀಕರಿಸಿದ ನ್ಯಾಯಾಲಯವು, ಅಲಹಾಬಾದ್ ಹೈಕೋರ್ಟ್‌ನಲ್ಲಿ ರಾಜ್ಯ ಕಾನೂನು ಇಲಾಖೆಯ ಕಾರ್ಯನಿರ್ವಹಣೆಯ ನ್ಯಾಯಾಲಯಕ್ಕೆ ತಿಳಿಸಲು ಮತ್ತು ಈ ವಿಷಯದ ಬಗ್ಗೆ ಸೂಕ್ತ ಕ್ರಮಕ್ಕಾಗಿ ಕ್ಯಾಬಿನೆಟ್ ಮುಂದೆ ಇರಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಇದಲ್ಲದೆ, ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಕ್ನೋ ಪೀಠದಲ್ಲಿ ಈಗಾಗಲೇ 400 ಕ್ಕೂ ಹೆಚ್ಚು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಇರುವಾಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಸ್ಟ್ಯಾಂಡಿಂಗ್ ಕೌನ್ಸೆಲ್‌ಗಳ ಅಗತ್ಯವಿದೆಯೇ ಎಂದು ಕ್ಯಾಬಿನೆಟ್‌ ಗೆ ತಿಳಿಸಲು ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News