ಮಹಾರಾಷ್ಟ್ರ: ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ನಲ್ಲಿದ್ದ ವ್ಯಕ್ತಿಯ ಸಾವು

Update: 2022-06-03 17:49 GMT

ಪುಣೆ,ಜೂ.3: ಉಸಿರಾಟದ ತೊಂದರೆಯ ಚಿಕಿತ್ಸೆಗಾಗಿ ತನ್ನ ಮನೆಯಲ್ಲಿಯೇ ವೆಂಟಿಲೇಟರ್ ಅಳವಡಿಸಲಾಗಿದ್ದ 38ರ ಹರೆಯದ ವ್ಯಕ್ತಿಯೋರ್ವ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಮೃತ ಪಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಉಚಗಾಂವ್ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ.

ಅಮಿತ್ ಕಾಳೆ ಕಳೆದ ಕೆಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಅವರನ್ನು ಮನೆಯಲ್ಲಿಯೇ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ವಿದ್ಯುತ್ ವಿತರಣೆ ಕಂಪನಿಯು ಬಿಲ್ ಪಾವತಿಸದ ಕಾರಣಕ್ಕೆ ಮೇ 30ರಂದು ಮನೆಗೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿತ್ತು. ಬಳಿಕ ಕಾಳೆಯ ಚಿಕಿತ್ಸೆಗೆ ವಿದ್ಯುತ್ ಪೂರೈಕೆಯ ಪುನರಾರಂಭಕ್ಕಾಗಿ ಕುಟುಂಬವು ಕೆಲ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿತ್ತು. ಗುರುವಾರ ರಾತ್ರಿ ಮಳೆಯಿಂದಾಗಿ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿತ್ತು. ಇದರಿಂದಾಗಿ ವೆಂಟಿಲೇಟರ್ ಸ್ಥಗಿತಗೊಂಡು ರೋಗಿ ಮೃತಪಟ್ಟಿದ್ದಾರೆ ಎಂದು ಉಚಗಾಂವ್ನ ಗಾಂಧಿನಗರ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ತಿಳಿಸಿದರು.

ಘಟನೆಯನ್ನು ದೃಢಪಡಿಸಿದ ಎಸ್ಪಿ ಶೈಲೇಶ ಬಲ್ಕಾವಡೆ ಅವರು,ವಿದ್ಯುತ್ ವ್ಯತ್ಯಯದ ಬಗ್ಗೆ ಪೊಲೀಸ್ ಇಲಾಖೆಯು ವಿಚಾರಣೆಯನ್ನು ನಡೆಸುತ್ತಿದೆ ಎಂದು ತಿಳಿಸಿದರು.ಕಾಳೆಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಸ್ಥಳೀಯ ಸರಕಾರಿ ಆಸ್ಪತ್ರೆಯ ಹೊರಗೆ ಸೇರಿದ್ದ ಕುಟುಂಬ ಸದಸ್ಯರು ಮತ್ತು ಬಂಧುಗಳು ವಿದ್ಯುತ್ ವಿತರಣೆ ಕಂಪನಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪೊಲೀಸರು ತನಿಖೆಯ ಭರವಸೆ ನೀಡಿದ ಬಳಿಕವಷ್ಟೇ ಅವರು ಶವವನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News