ವನ್ಯಜೀವಿ ಅಭಯಾರಣ್ಯಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವಂತಿಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ,ಜೂ.3: ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಸುತ್ತಲಿನ ಒಂದು ಕಿ.ಮೀ.ವಿಸ್ತೀರ್ಣದ ಮೀಸಲು ವಲಯದಲ್ಲಿ ಯಾವುದೇ ಕಾರ್ಖಾನೆಗಳು ಅಥವಾ ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತನ್ನ ಮಹತ್ವದ ಆದೇಶದಲ್ಲಿ ತಿಳಿಸಿದೆ. ದೇಶಾದ್ಯಂತ ಪರಿಸರ-ಸೂಕ್ಷ್ಮವಲಯಗಳಲ್ಲಿ ಮತ್ತು ಸುತ್ತುಮುತ್ತ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಹಲವಾರು ನಿರ್ದೇಶಗಳನ್ನೂ ಅದು ಹೊರಡಿಸಿದೆ. ಈ ವಲಯಗಳುದ್ದಕ್ಕೂ ಪ್ರಗತಿಯಲ್ಲಿರುವ ತಯಾರಿಕೆ ಮತ್ತು ಅಂತಹುದೇ ಚಟುವಟಿಕೆಗಳು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆದುಕೊಂಡ ಬಳಿಕವೇ ಮುಂದುವರಿಯಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ಪ್ರತಿ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಸರ-ಸೂಕ್ಷ್ಮ ವಲಯಗಳ ವ್ಯಾಪ್ತಿಯಲ್ಲಿರುವ ಕಟ್ಟಡಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಮೂರು ತಿಂಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ಸರ್ವೋಚ್ಚ ನ್ಯಾಯಾಲಯವು ತಾಕೀತು ಮಾಡಿದೆ. ಅರಣ್ಯ ಸಂರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಈ ನಿರ್ದೇಶಗಳನ್ನು ಹೊರಡಿಸಿದೆ.