ಜನಾಂಗೀಯ ವಲಸೆಗೆ ಅವಕಾಶ ನೀಡುವುದಿಲ್ಲ: ಕಾಶ್ಮೀರ ಹತ್ಯೆಗಳ ಕುರಿತು ಸರಕಾರಿ ಮೂಲಗಳು

Update: 2022-06-03 17:56 GMT
PTI

ಹೊಸದಿಲ್ಲಿ,ಜೂ.3: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹಿಂದುಗಳು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹತ್ಯೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಸರಕಾರವು ತನ್ನ ಕೆಲಸಗಳನ್ನು ಮಾಡುವುದನ್ನು ತಡೆಯುವುದಿಲ್ಲ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು. ಶುಕ್ರವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,‘ಯೋಜಿತ ಹತ್ಯೆಗಳು ಹತಾಶೆಯ ಮಟ್ಟವನ್ನು ತೋರಿಸುತ್ತಿವೆ. ನಮ್ಮ ವ್ಯವಸ್ಥೆಯು ಇದನ್ನು ನೋಡಿಕೊಳ್ಳುತ್ತದೆ. ಸರಣಿ ಹತ್ಯೆಗಳು ನಿಲ್ಲುತ್ತವೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿಯೂ ಇದು ಸಂಭವಿಸಿತ್ತು ’ಎಂದರು.

ಅಧಿಕಾರಿಯ ಹೇಳಿಕೆಯು ಜಮ್ಮು-ಕಾಶ್ಮೀರದಲ್ಲಿ ಮುಖ್ಯವಾಗಿ ಸ್ಥಳೀಯರಲ್ಲದವರನ್ನು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ಎದುರಿಸಲು ಸರಕಾರದ ಯೋಜನೆಯ ಕೆಲ ಒಳನೋಟವನ್ನು ತೋರಿಸುತ್ತದೆ.
ಭಯೋತ್ಪಾದಕರು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡರೆ ಪ್ರವಾಸಿಗಳು ಕೊಲ್ಲಲ್ಪಡಬಹುದು. ಯಾರೂ ದಾಳಿಗೆ ಗುರಿಯಾಗಬಹುದು. ಅವರು ಮುಸ್ಲಿಮರನ್ನೂ ಗುರಿಯಾಗಿಸಿಕೊಳ್ಳುತ್ತಾರೆ ಎಂದು ಅಧಿಕಾರಿ ಹೇಳಿದರು.

 ತಮ್ಮ ವಸತಿ ಪ್ರದೇಶಗಳ ಮೇಲಿನ ಲಾಕ್ಡೌನ್ಗಳನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಕಾಶ್ಮೀರದಿಂದ ಹೊರಗೆ ತೆರಳಲು ತಮಗೆ ಅವಕಾಶ ನೀಡುವಂತೆ ಕಾಶ್ಮೀರಿ ಪಂಡಿತರ ಬೇಡಿಕೆ ಕುರಿತು ಅವರು,‘ನಾವು ಕಾಶ್ಮೀರಿ ಪಂಡಿತರನ್ನು ಜಮ್ಮುವಿಗೆ ವರ್ಗಾವಣೆ ಮಾಡುವುದಿಲ್ಲ. ನಾವು ಜನಾಂಗೀಯ ವಲಸೆಯ ಭಾಗವಾಗುವುದಿಲ್ಲ. ನಾವು ಬಹುಸಂಸ್ಕೃತಿ ಸಮಾಜದಲ್ಲಿ ನಂಬಿಕೆಯನ್ನು ಹೊಂದಿದ್ದೇವೆ. ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರನ್ನು ನಾವು ಸುರಕ್ಷಿತ ಸ್ಥಳಗಳಲ್ಲಿ ನಿಯೋಜಿಸುತ್ತೇವೆ ’ಎಂದರು.

‘ಈಗಿನ ವ್ಯವಸ್ಥೆಯು ಹಾಗೆಯೇ ಮುಂದುವರಿಯಬೇಕು ಎಂದು ಸರಕಾರವು ಬಯಸಿದೆ. ಚುನಾವಣಾ ಆಯೋಗವು ನಿರ್ಧರಿಸಿದಾಗ ಚುನಾವಣೆಗಳು ನಡೆಯುತ್ತವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಕೆಲವು ಹತ್ಯೆಗಳಾದರೆ ಅದು ನಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ಈ ದಾಳಿಗಳ ಹಿಂದೆ ತಾಲಿಬಾನ್ ಕೈವಾಡದ ಪುರಾವೆಯಿಲ್ಲ. ಇದು ಜಿಹಾದ್ ಅಲ್ಲ. ಕೆಲವು ಉಗ್ರರು ಇದನ್ನು ಮಾಡುತ್ತಿದ್ದಾರೆ. ಈ ಎಲ್ಲ ದಾಳಿಗಳ ಹಿಂದೆ ಪಾಕಿಸ್ತಾನವಿದೆ. ಗೊಂದಲವನ್ನು ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ ’ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News