ವಿಶಾಖಪಟ್ಟಣಂ: ಸೆಝ್ನಲ್ಲಿ ಅಮೋನಿಯಾ ಅನಿಲ ಸೋರಿಕೆ ಶಂಕೆ ; 150ಕ್ಕೂ ಅಧಿಕ ಮಹಿಳೆಯರು ಅಸ್ವಸ್ಥ

Update: 2022-06-03 18:21 GMT
Photo : ANI 

ವಿಶಾಖಪಟ್ಟಣಂ, ಜೂ.3: ಸಮೀಪದ ರಾಸಾಯನಿಕ ಕಾರ್ಖಾನೆಯಲ್ಲಿ ಶುಕ್ರವಾರ ಶಂಕಿತ ಅಮೋನಿಯಾ ಅನಿಲ ಸೋರಿಕೆಯಾದ ಬಳಿಕ ಇಲ್ಲಿನ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯ (ಎಸ್ಇಝಡ್)ದಲ್ಲಿ ರುವ ಉಡುಪು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಅಧಿಕ ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿರುವುದಾಗಿ ವರದಿಯಾಗಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.

ಅಚ್ಯುತಪುರಂನಲ್ಲಿರುವ ವಿಶೇಷ ಆರ್ಥಿಕವಲಯದಲ್ಲಿರುವ ಪೋರಸ್ ಲ್ಯಾಬೋರೇಟರಿಸ್ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿರುವುದಾಗಿ ಶಂಕಿಸಲಾಗಿದೆ. ಆದರೆ ಇದರ ದುಷ್ಪರಿಣಾಮ ಸಮೀಪದ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗುಂಟಾಗಿದೆ. ಕೆಲವು ಮಹಿಳಾಕಾರ್ಮಿಕರಿಗೆ ಕಣ್ಣು ತುರಿಕೆಯಾದರೆ, ಇನ್ನು ಕೆಲವರಿಗೆ ವಾಂತಿ ಹಾಗೂ ತಲೆಸುತ್ತಿದ ಅನುಭವವಾಗಿದೆ.

ಘಟನೆಗೆ ಸಂಬಂಧಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ವಿಶೇಷ ಆರ್ಥಿಕ ವಲಯದಲ್ಲಿರುವ ಉಡುಪು ತಯಾರಿಕಾ ಘಟಕಗಳನ್ನು ಮುಚ್ಚಲಾಗಿದೆ ಹಾಗೂ ಇತರ ಘಟಕಗಳ ಕಾರ್ಮಿಕರನ್ನು ಕೂಡಾ ಸುರಕ್ಷಿತವಾಗಿ ತೆರವುಗಳಿಸಲಾಗಿದೆ.
ಅಸ್ವಸ್ಥಗೊಂಡ ಕಾರ್ಮಿಕರ ಪರಿಸ್ಥಿತಿ ಸ್ಥಿರವಾಗಿದೆ ಹಾಗೂ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯೆಂದು ಆಂಧ್ರ ಕೈಗಾರಿಕಾ ಸಚಿವ ಗುಡಿವಾಡ ಅಮರನಾಥ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News