ಚರ್ಚೆಯ ದಿಕ್ಕನ್ನು ಬದಲಿಸಿ ಬಿಡುವ ಸಂಚು
ಕುವೆಂಪು ಮುಸ್ಲಿಮ್ ವಿರೋಧಿಯಾಗಿದ್ದರೆಂದು ಬೊಳುವಾರು ಮುಹಮ್ಮದ್ ಕುಂಞಿ ಎಂಬವರು ಹೇಳಿದ್ದಾರೆಂದು ಆರೋಪಿಸಿ ಅನೇಕರು ಬೊಳುವಾರರನ್ನು ಖಂಡಿಸುತ್ತಿದ್ದಾರೆ. ಅಂಥವರು ಬೊಳುವಾರರ ವಯಸ್ಸನ್ನು (71) ಪರಿಗಣಿಸಿ ಅವರ ಇತ್ತೀಚಿನ ಗೊಣಗಾಟಗಳನ್ನು ಕಡೆಗಣಿಸಬಹುದು. ನಿಜವಾಗಿ ಸದ್ಯ ನಡೆಯುತ್ತಿರುವ ಪಠ್ಯಪುಸ್ತಕ ಮಾಲಿನ್ಯ ವಿರೋಧಿ ಅಭಿಯಾನದ ಹಿನ್ನೆಲೆಯಲ್ಲಂತೂ ಅವರು ಹಾಗೆ ಹೇಳಿರುವ ಸಾಧ್ಯತೆ ಕಡಿಮೆ. ಶಸ್ತ್ರ ಸಿಗದವರು ಅದರ ನೆರಳನ್ನೇ ಬಳಸಿಕೊಳ್ಳಲು ಶ್ರಮಿಸುವಂತೆ ಕುವೆಂಪು ವಿರೋಧಿಗಳು ಇಂದಿನ ಸನ್ನಿವೇಶದಲ್ಲಿ ನಿಜವಾದ ಸಂವಾದದ ದಿಕ್ಕು ತಪ್ಪಿಸಲು ಬೊಳುವಾರರ ಯಾವುದೋ ಹಳೆಯ ಹೇಳಿಕೆಯನ್ನು ಬಳಸಿಕೊಂಡು ಈ ಕುಹಕ ನಡೆಸಿರುವ ಎಲ್ಲ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಅಂಬೇಡ್ಕರ್, ಪೆರಿಯಾರ್, ಕುವೆಂಪು ಮುಂತಾದವರ ಮನುವಿರೋಧಿ, ಪೌರೋಹಿತ್ಯ ವಿರೋಧಿ ಮತ್ತು ಬ್ರಾಹ್ಮಣ್ಯ ವಿರೋಧಿ ಹೇಳಿಕೆಗಳು, ನಿರ್ಧಾರಗಳು ಅಥವಾ ಬರಹಗಳು ಸಮಾಜದಲ್ಲಿ ಚರ್ಚೆಗೆ ಬಂದಾಗಲೆಲ್ಲ, ಮನುವಾದಿಗಳು ಒಂದು ತಂತ್ರ ಹೂಡುತ್ತಾರೆ. ಪ್ರಸ್ತುತ ಮಹಾನ್ ವ್ಯಕ್ತಿಗಳ ಕುರಿತು ಅವರು ಮುಸ್ಲಿಮ್ ವಿರೋಧಿಯಾಗಿದ್ದರು ಎಂಬ ಆರೋಪ ಹೊರಿಸಿ ಒಟ್ಟು ಚರ್ಚೆಯ ದಿಕ್ಕನ್ನು ಬದಲಿಸಿ ಬಿಡಲು ಶ್ರಮಿಸುತ್ತಾರೆ. ಕುತಂತ್ರಗಳನ್ನು ಅರ್ಥಮಾಡಲಾಗದ ಮುಗ್ಧ ಜನತೆ ಇಂತಹ ಸಂಚುಗಳಿಗೆ ಸುಲಭವಾಗಿ ಬಲಿಬೀಳುವುದರಿಂದ, ಪ್ರಸ್ತುತ ಚಾಣಾಕ್ಷ ಸಂಚುಕೋರರಿಗೆ ಹಲವು ಬಾರಿ ಯಶಸ್ಸು ಕೂಡಾ ಪ್ರಾಪ್ತವಾಗಿದೆ. ಈ ಬಾರಿ ಮಾತ್ರ ಹಾಗಾಗಲೇ ಬಾರದು.
ಅಂಬೇಡ್ಕರ್, ಕುವೆಂಪು ಅಥವಾ ಪೆರಿಯಾರ್‌ರ ವಿಚಾರಧಾರೆಯಲ್ಲಿ ಅವರು ಯಾರ ಪರವಾಗಿದ್ದರು ಅಥವಾ ಯಾರ ವಿರುದ್ಧವಾಗಿದ್ದರು ಎಂಬ ಬಗ್ಗೆ ಯಾರೂ ಎಂದೂ ಸಂಶಯ ಪಡಲು ಆಸ್ಪದವೇ ಇಲ್ಲದಷ್ಟು ಸ್ಪಷ್ಟತೆ ಇದೆ. ಒಂದು ವೇಳೆ ಅವರು ಯಾವುದಾದರೂ ವಿಷಯದಲ್ಲಿ ಇಸ್ಲಾಮ್ ಧರ್ಮ ಅಥವಾ ಮುಸ್ಲಿಮ್ ಸಮಾಜವನ್ನು ವಿಮರ್ಶಿಸಿದ್ದರೆ ಆ ವಿಮರ್ಶೆ ಕೂಡ ಗೌರವಸಹಿತ ಗಂಭೀರ ಪರಿಗಣನೆಗೆ ಅರ್ಹವಾಗಿರುತ್ತದೆ. ನಿಜವಾಗಿ ಕುವೆಂಪು ಇಸ್ಲಾಮ್ ಧರ್ಮ ಅಥವಾ ಮುಸ್ಲಿಮರ ಬಗ್ಗೆ ಎಲ್ಲೂ ಜಿಗುಪ್ಸೆ ಪ್ರಕಟಿಸಿಲ್ಲ. ಅವರು ಟಿಪ್ಪುಮತ್ತು ಹೈದರಾಲಿಯ ಅಭಿಮಾನಿಯಾಗಿದ್ದವರು.
ಹೆಚ್ಚೆಂದರೆ, ಅವರ ಕೃತಿಗಳಲ್ಲಿ ಮುಸ್ಲಿಮ್ ಪಾತ್ರಗಳ ಕೊರತೆ ಎದ್ದುಕಾಣುತ್ತದೆ ಎಂದು ಯಾರಾದರೂ ಆಕ್ಷೇಪಿಸಬಹುದು. ಆದರೆ ಅದು ವಿರೋಧ ಅಥವಾ ಪೂರ್ವಗ್ರಹಕ್ಕೆ ಪುರಾವೆಯೇನಲ್ಲ. ಅದನ್ನು ವಿವೇಕವಂತರು ಯಾರೂ ಇಸ್ಲಾಮ್ ವಿರೋಧ ಅಥವಾ ಮುಸ್ಲಿಮ್ ವಿರೋಧ ಎಂದು ಕರೆಯುವುದಿಲ್ಲ. ಕೇವಲ ಇಷ್ಟನ್ನೇ ವಿರೋಧ ಎಂದು ಪರಿಗಣಿಸುವುದಾದರೆ, ಸ್ವತಃ ಬೊಳುವಾರು ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮಾಜವನ್ನೇನು ಕಡಿಮೆ ಟೀಕಿಸಿದ್ದಾರೆಯೇ? ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರಿಗೆ ಮಾರ್ಕೆಟ್ ವ್ಯಾಲ್ಯೂ ಬಂದಿದ್ದೇ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮಾಜವನ್ನು ಲೇವಡಿ ಮಾಡಿದ್ದರಿಂದ. ಅವರು ಬ್ರಾಹ್ಮಣ್ಯದ ಬಗ್ಗೆ ಅಥವಾ ಅಂತಹ ಇತರ ವಿಷಯಗಳ ಬಗ್ಗೆ ಬರೆದ ಯಾವುದೇ ವಿಚಾರವನ್ನು ಸ್ವತಃ ಅವರ ಹೊರತು ಬೇರಾರೂ ಚರ್ಚಿಸಿದ್ದಿಲ್ಲ.