ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತರ ಸಂಖ್ಯೆ ಮೂರಕ್ಕೇರಿಕೆ, 5 ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

Update: 2022-06-04 08:04 GMT
Photo:PTI

ಹೊಸದಿಲ್ಲಿ: ಕಳೆದ ವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಶಾಲಾ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲ್ಪಟ್ಟವರ ಸಂಖ್ಯೆ  ಮೂರಕ್ಕೇರಿದೆ. ಗುರುತಿಸಲಾದ ಐವರು ಆರೋಪಿಗಳಲ್ಲಿ  ಮೂವರು ಅಪ್ರಾಪ್ತರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ಹುಡುಗ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಸ್ಥಳೀಯ ಮುಖಂಡರೊಬ್ಬರ ಪುತ್ರ.

ತೆಲಂಗಾಣ ರಾಜಧಾನಿಯ ಹೃದಯಭಾಗದಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡುವ ರಾಜಕಾರಣಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಈ  ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ  ಬಿಜೆಪಿ ನಾಯಕರು ಶುಕ್ರವಾರ ಸಂಜೆ ಪೊಲೀಸ್ ಠಾಣೆಯ ಹೊರಗೆ ಭಾರೀ ಪ್ರತಿಭಟನೆ ನಡೆಸಿದ್ದು, ಗೃಹ ಸಚಿವರ ಮೊಮ್ಮಗ ಇದರಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

"ಆರೋಪಿಗಳ ಬಗ್ಗೆ ಸಂತ್ರಸ್ತೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ. ಸಂತ್ರಸ್ತೆ  ಒಬ್ಬನ ಹೆಸರನ್ನು ಮಾತ್ರ ಬಹಿರಂಗಪಡಿಸಿದ್ದು, ಆತನನ್ನು ತಕ್ಷಣ ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಹಾಗೂ  ಸಂತ್ರಸ್ತೆಯ ಹೇಳಿಕೆಯಂತೆ ನಾವು ಐವರು ಆರೋಪಿಗಳನ್ನು ಗುರುತಿಸಿದ್ದೇವೆ" ಎಂದು ಪೋಲೀಸ್ ಅಧಿಕಾರಿ ಜೋಯಲ್ ಡೇವಿಸ್ ಹೇಳಿದರು.

ಬಾಲಕಿಯು ಶಂಕಿತ ಆರೋಪಿಯೊಂದಿಗೆ  ಪಬ್‌ನ ಹೊರಗೆ ನಿಂತಿರುವುದು ಭದ್ರತಾ ದೃಶ್ಯಾವಳಿಯಲ್ಲಿ ಕಂಡುಬಂದಿದೆ.

 ಬಾಲಕಿಯನ್ನು ಪಬ್ ನಿಂದ ಮನೆಗೆ ಬಿಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದ ಆರೋಪಿಗಳು ನಂತರ ಕಾರಿನೊಳಗೆ ಆಕೆಯ ಮೇಲೆ ಅತ್ಯಾಚಾರವೆಸಗಿದರು  ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News