ಆಮಿಷದ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಗುರಿಯಾಗಿಸುವುದು
►► ಭಾಗ -2
ಅಸಮಾನ ಕಾನೂನುಗಳು; ಅನ್ಯಾಯದ ಕಾನೂನುಗಳು
ಕಾನೂನಾತ್ಮಕವಾಗಿ ಕಾನೂನು ಎಂಬುದು ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ. ಆದರೆ ಪ್ರಸ್ತುತ ದ್ವೇಷ ರಾಜಕೀಯದ ವಾತಾವರಣದಲ್ಲಿ, ಕಾನೂನುಗಳನ್ನು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಮತಾಂತರ ನಿಷೇಧ ಕಾಯ್ದೆ ಎನ್ನುವುದು ಮೇಲ್ನೋಟಕ್ಕೆ ಎಲ್ಲಾ ವಿಧವಾದ ಬಲವಂತದ ಮತಾಂತರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ಬಂದಿದೆಯಾದರೂ ಇದು ಈಗಾಗಲೇ ಗುರಿಯಾಗಿಸಿಕೊಂಡಿರುವ ಹಲವು ಕುಟುಂಬಗಳನ್ನು ‘ಘರ್ ವಾಪ್ಸಿ’ (ಮತ್ತೆ ಹಿಂದುತ್ವಕ್ಕೆ) ತರಲು ಉಪಯೋಗಿಸಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಈ ಮೂಲಕ ಸರಕಾರವು ‘ಹಿಂದೂ’ ಆಗಿದ್ದರೆ ಮಾತ್ರ ಅದು ಕಾನೂನಾತ್ಮಕ ಅಥವಾ ಸಮರ್ಪಕ, ಇಲ್ಲವಾದ್ದಲ್ಲಿ ಅದು ಅಸಮರ್ಪಕವಾಗುತ್ತದೆ, ಆದ್ದರಿಂದ ಸರಕಾರವು ಮಧ್ಯ ಪ್ರವೇಶಿಸಬೇಕಾಗುತ್ತದೆ ಎನ್ನುವ ಸಂದೇಶವನ್ನು ನೀಡುತ್ತಿದೆ. ಈ ಆಧ್ಯಾದೇಶವು ಮರುಮತಾಂತರ (ಅಥವಾ ಘರ್ ವಾಪ್ಸಿ)ಕ್ಕೆ ಅಂದರೆ ಮತ್ತೆ ತನ್ನ ಮೂಲ ಧರ್ಮಕ್ಕೆ ಮತಾಂತರವಾಗುವುದಕ್ಕೆ ವಿನಾಯಿತಿಯನ್ನು ನೀಡಿದೆ. ಆದ್ದರಿಂದ, ಈ ಕಾನೂನಿನ ಅನ್ವಯಿಸುವಿಕೆ ಎಂಬುದು ಒಂದು ಸಮುದಾಯಕ್ಕೆ ವರವಾಗಿ ಪರಿಣಮಿಸಿದರೆ, ಇನ್ನುಳಿದ ಸಮುದಾಯಗಳು ಇದರಿಂದ ಹಿಂಸೆಯನ್ನು ಅನುಭವಿಸುತ್ತವೆ.
ಹೀಗೆ ಈ ಕಾನೂನುಗಳು ಶೈಕ್ಷಣಿಕ ಸಂಸ್ಥೆಗಳೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಾಜಕೀಕರಣಗೊಂಡು, ಕೋಮುವಾದವನ್ನು ಸೃಷ್ಟಿಸುವ ಉಪಕರಣಗಳಾಗಿ ಪರಿಣಮಿಸುತ್ತವೆ. ಶೈಕ್ಷಣಿಕ ರಂಗವು ದ್ವೇಷ ರಾಜಕಾರಣದ ಪ್ರಯೋಗಶಾಲೆಗಳಾಗಿ ಮಾರ್ಪಟ್ಟಿವೆ. ಕಾನೂನನ್ನು ನಿರ್ದಿಷ್ಟವಾಗಿ, ಪೂರ್ವ ಯೋಜನೆಗಳೊಂದಿಗೆ ಸೀಮಿತವಾಗಿ ಅನ್ವಯಿಸುವುದು ಜನರು ಕಾನೂನು ಹಾಗೂ ನ್ಯಾಯಾಂಗದ ಮೇಲೆ ಇಟ್ಟಿರುವ ಭರವಸೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಕಾನೂನುಗಳು ಗುರಿಯಾಗಿಸಿದ ದೌರ್ಜನ್ಯಕ್ಕೆ ನೆಪಗಳಾದಾಗ
ಕೆಲವು ಕಾನೂನುಗಳು ಅನಿರೀಕ್ಷಿತ ಫಲಿತಾಂಶಗಳನ್ನು ಉಂಟುಮಾಡಿದರೆ, ಪ್ರಸ್ತುತ ಈ ಆಧ್ಯಾದೇಶವು ಗುರಿಯಾಗಿಸುವ ದೌರ್ಜನ್ಯವನ್ನೇ ಪ್ರಾಥಮಿಕ ಉದ್ದೇಶವನ್ನಾಗಿ ಹೊಂದಿದಂತಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಈ ಕಾಯ್ದೆಯನ್ನು ಜಾರಿಗೆ ತರುವ ಮುನ್ನವೇ ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ಹಾಗೂ ಕ್ರೈಸ್ತ ಸಂಸ್ಥೆಗಳ ಮೇಲೆ ಸವಿಸ್ತಾರ ದಾಳಿಗಳು ನಡೆದವು. ಈ ದಾಳಿಗಳು ನಡೆಯುತ್ತಿದ್ದರೆ ಸರಕಾರವು ಮಾತ್ರ ಜಾಣ ಮೌನವನ್ನು ತಾಳಿತ್ತು. ಹಲವು ಕಡೆಗಳಲ್ಲಿ ಕ್ರೈಸ್ತರ ಮೇಲೆಯೇ ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುವ ಭಾರತೀಯ ದಂಡ ಸಂಹಿತೆಯ ಕಲಂಗಳನ್ನು ಹಾಕಿ ಪ್ರಕರಣವನ್ನು ದಾಖಲಿಸಲಾಗಿದೆ.
ಇಂತಹ ಪ್ರಕರಣಗಳಲ್ಲಿ ಬಹುತೇಕ ಸಜೆ ಆಗಿರುವ ಉದಾಹರಣೆಗಳೇ ಇಲ್ಲ. ಯಾವುದೇ ರೀತಿಯ ದಂಡವನ್ನು ಕಟ್ಟುವ ಗೈರಿನಲ್ಲಿ ಅಥವಾ ಸುಳ್ಳು ಹಾಗೂ ನಕಲಿ ದೂರುಗಳ ಸಂದರ್ಭದಲ್ಲಿ ಮತ್ತು ಯಾವುದೇ ಮೂರನೇ ವ್ಯಕ್ತಿಯೂ ಪ್ರಕರಣವನ್ನು ದಾಖಲಿಸಬಹುದಾದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯವು ಅನುಭವಿಸುವಂತಹ ದೌರ್ಜನ್ಯ ಮತ್ತು ತಾರತಮ್ಯವನ್ನು ಯಾರಾದರೂ ಊಹಿಸಬಹುದು. ಈ ಕಾನೂನಿನಲ್ಲಿನ ಸಾಮಾನ್ಯೀಕರಿಸಲಾಗಿರುವ ಅನೇಕ ಅಂಶಗಳನ್ನು ತಪ್ಪಾಗಿ ಅರ್ಥೈಸಿ, ಅವುಗಳನ್ನು ಕ್ರೈಸ್ತ ಸಮುದಾಯವನ್ನು ಗುರಿಪಡಿಸುವ ಉಪಕರಣಗಳಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಇದು ವಯಸ್ಕರ ವಿವೇಚನಾ ಶಕ್ತಿಯನ್ನು ತೆಗೆದುಹಾಕಿ, ನಡೆದೇ ಇರದ ಸನ್ನಿವೇಶಗಳಿಗೂ ಪ್ರತಿಕ್ರಿಯೆಯನ್ನು ನೀಡುವಲ್ಲಿ ಕಾರ್ಯೋನ್ಮುಖವಾಗುತ್ತದೆ. ಕರ್ನಾಟಕದಲ್ಲಿ, ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಪಡಿಸಲು ವಿವಿಧ ಉಪಕರಣಗಳನ್ನು ಬಳಸಿದ ಇತಿಹಾಸವೇ ಇಲ್ಲ. ವ್ಯಕ್ತಿ ಮತ್ತು ಸಮುದಾಯಗಳನ್ನು ಸ್ವಘೋಷಿತ ‘‘ಕಾನೂನು ಜಾರಿಗೊಳಿಸುವವರಿಂದ’’ ಕಾಪಾಡುವ ತಂತ್ರಜ್ಞಾನದ ಕೊರತೆಯೇ ಇದಕ್ಕೆಲ್ಲ ಕಾರಣವಾಗಿದೆ ಎಂತಲೇ ಅಭಿಪ್ರಾಯಪಡಬಹುದು. ದೌರ್ಜನ್ಯವನ್ನು ತಡೆಗಟ್ಟಲು ಕಾನೂನುಗಳ ಒಳಗೆಯೇ ರಕ್ಷಣಾತ್ಮಕ ತಂತ್ರಜ್ಞಾನವಿಲ್ಲದಿದ್ದರೆ, ಕಾನೂನುಗಳು ಅಪಾಯಕಾರಿಯಾಗಿ ಪರಿಣಮಿಸಬಹುದು.
ಏಕೆ ಈಗ ಆಧ್ಯಾದೇಶವಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಬೇಕು?
ಮೊದಲಿಗೆ, ಈ ಆಧ್ಯಾದೇಶ ಎನ್ನುವುದು ಅಸಾಂವಿಧಾನಿಕ ಮಾತ್ರವಲ್ಲದೆ, ಅನವಶ್ಯಕವೂ ಹೌದು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಸ್ವತಃ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು. ಹಾಗೆ ಅವರು ಮತಾಂತರವಾಗಲು, ಯಾವುದೇ ಸರಕಾರದ ಅಪ್ಪಣೆಯನ್ನು ಕೇಳಲಿಲ್ಲ. ಅವರು 1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗುವುದಕ್ಕೂ ಬಹಳ ಹಿಂದಿನಿಂದಲೇ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು.
ಆಧ್ಯಾದೇಶ ಎನ್ನುವುದು ಗಂಭೀರ (ಎಮರ್ಜೆನ್ಸಿ) ಸನ್ನಿವೇಶಗಳಲ್ಲಿ ಮಾತ್ರ ರೂಪಿತವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವ ರೀತಿಯ ಎಮರ್ಜೆನ್ಸಿಯೂ ಇರುವುದಿಲ್ಲ. ಹಾಗಾಗಿ ಈ ಕಾಯ್ದೆಯ ಉದ್ದೇಶ ಕೇವಲ ರಾಜಕೀಯ ಪ್ರೇರಿತವೇ ಹೊರತು ಯಾವುದೇ ಗಂಭೀರ ಅವಶ್ಯಕತೆಯ ಹಿನ್ನೆಲೆ ರೂಪಿಸಿರುವುದಲ್ಲ. ಬಹಳ ಮುಖ್ಯವಾಗಿ, ಇದು ಸಂವಿಧಾನದ ಅನುಚ್ಛೇದ 25ರ ಆಶಯಗಳಿಗೆ ತದ್ವಿರುದ್ಧವಾಗಿದೆ.
ಇದು ಅಪರಾಧಿಕ ನ್ಯಾಯವ್ಯವಸ್ಥೆಯ ನೇರ ಉಲ್ಲಂಘನೆಯಾಗಿದ್ದು, ಇಲ್ಲಿ ‘ಆಮಿಷ’ ಎಂಬ ಪದದ ತಪ್ಪು ನಿರೂಪಣೆಗೆ ಹೆಚ್ಚು ಅವಕಾಶಗಳಿವೆ. ಸುಳ್ಳು ದೂರು ಹಾಗೂ ಆರೋಪಗಳಿಗೆ ಯಾವುದೇ ತನಿಖೆಯನ್ನು ನಿಗದಿಪಡಿಸದ ಈ ಕಾನೂನು ಬಳಕೆಗಿಂತ ದುರ್ಬಳಕೆಯಾಗುವುದೇ ಹೆಚ್ಚು.
ಯಾವುದೇ ಒಂದು ಕಾನೂನಿನ ಮೂಲ ಆಶಯ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಭ್ರಾತೃತ್ವವನ್ನು ಪ್ರೋತ್ಸಾಹಿಸುವುದು, ಶೋಷಿತ ಹಾಗೂ ತಳ ಸಮುದಾಯಗಳನ್ನು ಮೇಲಕ್ಕೆತ್ತುವುದು ಹಾಗೂ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ತರುವುದೇ ಆಗಿದೆ. ಆದರೆ, ಈ ಆಧ್ಯಾದೇಶವು ಇವೆಲ್ಲಕ್ಕಿಂತ ತದ್ವಿರುದ್ಧ ಆಶಯಗಳನ್ನು ಪ್ರತಿಪಾದಿಸುವ ಅಂಶಗಳನ್ನೇ ಒಳಗೊಂಡಿದೆ. ಆದ್ದರಿಂದ, ಇದನ್ನು ಬೇಷರತ್ ರದ್ದುಪಡಿಸುವ ಮೂಲಕ, ಸಾಂವಿಧಾನಿಕ ಮೌಲ್ಯಗಳನ್ನು ಮರುಸ್ಥಾಪಿಸಬೇಕಾಗಿದೆ.
- ಲೇಖಕರು ನಿರ್ದೇಶಕರು, ಸಂತ ಜೋಸೆಫರ ಕಾನೂನು ಕಾಲೇಜು, ಬೆಂಗಳೂರು