ಪತ್ನಿಯ ಕಂಪೆನಿಗೆ ಪಿಪಿಇ ಕಿಟ್‌ ಗುತ್ತಿಗೆ ನೀಡಿ, ಅಧಿಕ ಪಾವತಿ: ಅಸ್ಸಾಂ ಸಿಎಂ ವಿರುದ್ಧ ಎಎಪಿ ಗಂಭೀರ ಆರೋಪ

Update: 2022-06-04 13:16 GMT
ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Photo: Twitter/@ANI)

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕೋವಿಡ್ ಪಿಪಿಇ ಕಿಟ್‌ಗಳ ಗುತ್ತಿಗೆಯನ್ನು ತಮ್ಮ ಪತ್ನಿಗೆ ಸಂಬಂಧಿಸಿದ ಕಂಪನಿಗೆ ನೀಡಿದ್ದಾರೆ ಮತ್ತು ಹೆಚ್ಚು ಪಾವತಿಸಿದ್ದಾರೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಆರೋಪಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಬಂಧನದ ಬೆಳವಣಿಗೆ ಬೆನ್ನಲ್ಲೇ ಎಎಪಿಯ ಈ ಗಂಭೀರ ಆರೋಪ ಹೊರಬಂದಿದೆ.   

"ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಪತ್ನಿಯ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಅವರು ಪಿಪಿಇ ಕಿಟ್‌ಗಳಿಗಾಗಿ ₹ 990 ಪಾವತಿಸಿದರು. ಅದೇ ವೇಳೆ ಇತರರು ಮತ್ತೊಂದು ಕಂಪನಿಯಿಂದ ₹ 600 ಕ್ಕೆ ಪಿಪಿಇ ಕಿಟ್ ಖರೀದಿಸಿದ್ದಾರೆ. ಇದು ದೊಡ್ಡ ಅಕ್ರಮವಾಗಿದೆ," ಎಂದು ಸಿಸೋಡಿಯಾ ಅವರು ಹೇಳಿದ್ದಾರೆ.  

"ಬಿಜೆಪಿಗೆ ತನ್ನದೇ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ಅಥವಾ ಮೇಕಪ್ ಪ್ರಕರಣಗಳ ಮೂಲಕ ನಮ್ಮನ್ನು ಬೇಟೆಯಾಡುತ್ತದೆಯೇ?" ಅವರು ಬಿಜೆಪಿಯನ್ನು ಕುಟುಕಿದ್ದಾರೆ. 

ಎರಡು ದಿನಗಳ ಹಿಂದೆ 'ದಿ ವೈರ್‌'ನಲ್ಲಿ ಪ್ರಕಟವಾದ ತನಿಖಾ ವರದಿಯನ್ನು ಆಧರಿಸಿ ಆರೋಪಗಳನ್ನು ಮಾಡಲಾಗಿದೆ. ಈ ಆರೋಪವನ್ನು ಹಿಮಂತ್‌ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು "ಆಧಾರರಹಿತ" ಎಂದು ನಿರಾಕರಿಸಿದ್ದಾರೆ. ಅಲ್ಲದೆ ಸಿಸೋಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ದಂಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News