×
Ad

ಉತ್ತರ ಪ್ರದೇಶ: ಕಾರ್ಖಾನೆಯಲ್ಲಿ ಭೀಕರ ಸ್ಪೋಟ; 8 ಮೃತ್ಯು, 15 ಮಂದಿಗೆ ಗಾಯ

Update: 2022-06-04 18:47 IST
Photo: Twitter/@hapurpolice

ಲಖ್ನೋ: ಶನಿವಾರ ಮಧ್ಯಾಹ್ನ  ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಪಿಎಸ್‌ಐಡಿಸಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದ್ದು, ಘಟನೆ ಸಂಭವಿಸಿದಾಗ  ಆ ಪ್ರದೇಶದಲ್ಲಿ 25 ಜನರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ, ಸುತ್ತಮುತ್ತಲಿನ ಕೆಲವು ಕಾರ್ಖಾನೆಗಳ ಮೇಲ್ಛಾವಣಿಗಳಿಗೆ ಹಾನಿಯಾಗಿದೆ. ಕಾರ್ಖಾನೆಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳಕ್ಕೆ ಕನಿಷ್ಟ ಮೂರು ಗಂಟೆ ಬೇಕಾಯಿತು ಎಂದು ವರದಿಯಾಗಿದೆ.

ಘಟನೆಯಲ್ಲಿ, ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಉಳಿದ 17 ಜನರಲ್ಲಿ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

"ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ" ಎಂದು ಸಿಎಂ ಆದಿತ್ಯನಾಥ್ ಕಛೇರಿ ಟ್ವೀಟ್ ಮಾಡಿದೆ.

‌ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News