ಗೋಶಾಲೆಯಲ್ಲಿ 1 ತಿಂಗಳು ಸೇವೆಯ ಶರತ್ತಿನೊಂದಿಗೆ ಗೋಹತ್ಯೆ ಆರೋಪಿಗೆ ಜಾಮೀನು
Update: 2022-06-04 23:24 IST
ಅಲಹಾಬಾದ್, ಜೂ.4: ಗೋ ಹತ್ಯೆ ಪ್ರಕರಣದ ಆರೋಪಿಯೊಬ್ಬನಿಗೆ ಒಂದು ತಿಂಗಳವರೆಗೆ ಗೋಶಾಲೆಯಲ್ಲಿ ಕೆಲಸ ಮಾಡಬೇಕೆಂಬ ಶರತ್ತಿನೊಂದಿಗೆ ಅಲಹಾಬಾದ್‌ನ ಹೈಕೋರ್ಟ್ ಜಾಮೀನು ಬಿಡುಗಡೆಗೊಳಿಸಿದೆ.
ನೋಂದಾಯಿತವಾದ ಗೋಶಾಲೆಯೊಂದರ ಹೆಸರಿನಲ್ಲಿ 1 ಲಕ್ಷ ರೂ. ಠೇವಣಿಯಿಡುವಂತೆಯೂ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಬುಧವಾರ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಜಾಮೀನು ಬಿಡುಗಡೆ ಕೋರಿ ಆರೋಪಿ ಸಲೀಂ ಯಾನೆ ಕಾಲಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.
ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಲೀಂ ವಿರುದ್ಧ ಭಾತೀಯ ದಂಡಸಂಹಿತೆಯ ಸೆಕ್ಷನ್ 379 (ಕಳವು) ಹಾಗೂ ಉತ್ತರಪ್ರದೇಶದ ಗೋಹತ್ಯೆ ತಡೆ ಕಾಯ್ದೆಯ 3/8 ಸೆಕ್ಷನ್‌ನಡಿ ಬರೇಲಿ ಜಿಲ್ಲೆಯ ಭೋಜಿಪುರ ಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು.