ಕುಸ್ತಿ: ಚಿನ್ನದ ಸಾಧನೆ ಮಾಡಿದ ಸರಿತಾ ಮೋರ್, ಮನಿಶಾ

Update: 2022-06-05 02:04 GMT
ಸರಿತಾ ಮೋರ್  (Photo | United World Wrestling)

ಚೆನ್ನೈ: ಕಝಕ್‍ಸ್ತಾನ್‍ನ ಅಲ್ಮಟಿಯಲ್ಲಿ ನಡೆಯುತ್ತಿರುವ ರ‍್ಯಾಂಕಿಂಗ್ ಸೀರಿಸ್ (ಬೊಲಾಟ್ ಟ್ರುಲಿಖನೊವ್ ಕಪ್)ನ ಮೂರನೇ ದಿನ ಭಾರತದ ಸರಿತಾ ಮೋರ್ ಮತ್ತು ಮನಿಶಾ ಚಿನ್ನದ ಪದಕ ಗೆದ್ದರು. ಇದಲ್ಲದೇ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳೊಂದಿಗೆ ಭಾರತದ ಸ್ಪರ್ಧಿಗಳು ಒಟ್ಟು ಐದು ಪದಕಗಳನ್ನು ಜಯಿಸಿದರು.

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ಕಳೆದ ಎಂಟು ವರ್ಷಗಳ ವೃತ್ತಿಜೀವನದಲ್ಲಿ ಸರಿತಾ ಮೋರ್ ಕನಸಾಗಿತ್ತು. ಆದರೆ ಒಲಿಂಪಿಕ್ ತೂಕ ವರ್ಗದಲ್ಲಿ ಅವರು ಬಹುತೇಕ ಬಾರಿ ಸ್ಪರ್ಧಿಸದೇ ಇರುವುದರಿಂದ ಅವರ ಕನಸು ನನಸಾಗಿರಲಿಲ್ಲ. ಆದರೆ ಚೊಚ್ಚಲ ವಿಶ್ವ ಚಾಂಪಿಯನ್‍‌ ಶಿಪ್ ಪದಕ (ಒಲಿಂಪಿಕ್ ತೂಕ ವರ್ಗವಲ್ಲದ 59 ಕೆಜಿ ವಿಭಾಗದಲ್ಲಿ ಕಂಚು) ಅವರ ಕನಸು ಮತ್ತೆ ಚಿಗುರುವಂತೆ ಮಾಡಿತು.

ದುರಾದೃಷ್ಟವಶಾತ್ ಒಲಿಂಪಿಕ್ ತೂಕ ವರ್ಗ (57 ಕೆಜಿ)ದಲ್ಲಿ ಕಳೆದ ತಿಂಗಳು ನಡೆದ ಆಯ್ಕೆಯಲ್ಲಿ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿಲ್ಲ. ಆದರೆ ಟ್ರಯಲ್ಸ್ ನಲ್ಲಿ ಗೆದ್ದ ಅನ್ಷು ಮಲಿಕ್ ಗಾಯದ ಕಾರಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಈ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಸರಿತಾಗೆ ಸಿಕ್ಕಿತ್ತು. ಆದರೂ 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಮುಂದಾದರು. ಅವರ ವಿಶ್ವಾಸಕ್ಕೆ ಶನಿವಾರ ಫಲ ಸಿಕ್ಕಿದ್ದು, ಅಂತಿಮ ಪಂದ್ಯದಲ್ಲಿ ತಾಂತ್ರಿಕ ಉ‌ತ್ಕೃಷ್ಟತೆ ಆಧಾರದಲ್ಲಿ ಗೆಲುವು ಸಾಧಿಸುವ ಜತೆಗೆ ಎಲ್ಲ ಬೌಟ್‍ಗಳನ್ನೂ ಗೆದ್ದು ಚಿನ್ನದ ಸಾಧನೆ ಮಾಡಿದರು.

65 ಕೆಜಿ ವಿಭಾಗದಲ್ಲಿ ಮನಿಷಾ ಚಿನ್ನದ ಪದಕ ಗೆದ್ದರೆ, ಬಿಪಾಷ 72 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಸುಷ್ಮಾ ಶೋಕೀನ್ (55 ಕೆಜಿ) ಮತ್ತು ಮೋಹಿತ್ ಗ್ರೇವಾಲ್ (125 ಕೆಜಿ ಪುರುಷರ ಫ್ರೀಸ್ಟೈಲ್) ಕಂಚಿನ ಪದಕ ಗೆದ್ದರು. ಮೊದಲ ಎರಡು ದಿನ ಭಾರತ ಮೂರು ಚಿನ್ನ ಹಾಗೂ ಎರಡು ಕಂಚಿನ ಪದಕ ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News