×
Ad

ಕಾಶ್ಮೀರಿ ಪಂಡಿತರು ಈಗ ವಲಸೆ ಹೋಗುತ್ತಿರುವುದರ ಬಗ್ಗೆಯು ಸಿನಿಮಾ ಮಾಡಬಹುದೇ?: ಶಿವಸೇನೆಯ ಸಂಜಯ್‌ ರಾವತ್‌ ಪ್ರಶ್ನೆ

Update: 2022-06-05 12:24 IST
Photo:PTI

ಮುಂಬೈ, ಜೂ. 5: ಜಮ್ಮು ಹಾಗೂ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಮುಸ್ಲಿಂ ಭದ್ರತಾ ಸಿಬ್ಬಂದಿಯನ್ನು ‘ಗುರಿಯಾಗಿರಿಸಿ ಹತ್ಯೆ’ ನಡೆಸುತ್ತಿರುವ ನಡುವೆ ಕೇಂದ್ರದ ಆಡಳಿತಾರೂಢ ಬಿಜೆಪಿ ಕೆಲವು ಸಿನೆಮಾಗಳ ಪ್ರಚಾರದಲ್ಲಿ ತೊಡಗಿಕೊಂಡಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ರವಿವಾರ ಟೀಕಿಸಿದ್ದಾರೆ. ಇಂದಿಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾಶ್ಮೀರ ಕಣಿವೆಯ ಭದ್ರತೆಯನ್ನು ನಿರ್ಲಕ್ಷಿಸುತ್ತಿದೆ ಎಂದರು. ‌

‘‘ಸರ್ಜಿಕಲ್ ದಾಳಿಯೊಂದಿಗೆ ಕಾಶ್ಮೀರ ಪಂಡಿತರ ವಿರುದ್ಧದ ದೌರ್ಜನ್ಯ ನಿಂತಿಲ್ಲ. ಅದು ಹೆಚ್ಚಾಗಿದೆ’’ ಎಂದು ಸಂಜಯ್ ರಾವತ್ ಪ್ರತಿಪಾದಿಸಿದರು. ‘‘ಅವರು ದೇಶ ಸೇವೆ ಮಾಡುತ್ತಿರುವ ಹಿಂದೂಗಳು, ಕಾಶ್ಮೀರಿ ಪಂಡಿತರು ಹಾಗೂ ಮುಸ್ಲಿಂ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿರಿಸಿ ಹತ್ಯೆಗೈಯುತ್ತಿದ್ದಾರೆ. ಆದರೆ, ಬಿಜೆಪಿ ‘ದಿ ಕಾಶ್ಮೀರ ಫೈಲ್ಸ್’, ‘ಸಾಮ್ರಾಟ್ ಪೃಥ್ವಿರಾಜ್’ನಂತಹ ಚಲನಚಿತ್ರಗಳನ್ನು ಪ್ರಚಾರ ಮಾಡುವುದರಲ್ಲಿ ತೊಡಗಿಕೊಂಡಿದೆ ಎಂದು ಅವರು ಹೇಳಿದರು. 

ಶ್ರೀನಗರದಿಂದ ಪುಲ್ವಾಮ (ಕಾಶ್ಮೀರ)ದ ವರೆಗೆ ಕನಿಷ್ಠ 20 ಮುಸ್ಲಿಂ ಭದ್ರತಾ ಸಿಬ್ಬಂದಿ ಹತ್ಯೆಯಾಗಿದ್ದಾರೆ ಎಂದು ನಿರ್ದಿಷ್ಟ ವಿವರಗಳನ್ನು ನೀಡದೆ ಅವರು ಪ್ರತಿಪಾದಿಸಿದರು. ‘‘ಬಿಜೆಪಿ ನಾಯಕರು ಇದರ ಬಗ್ಗೆ ಮಾತನಾಡುತ್ತಿಲ್ಲ. ಅವರು ತಾಜ್ ಮಹಲ್(ಆಗ್ರಾ) ಹಾಗೂ ಜ್ಞಾನವಾಪಿ ಮಸೀದಿ (ವಾರಣಾಸಿ)ಯಲ್ಲಿ ಶಿವಲಿಂಗ ಹುಡುಕುವುದರಲ್ಲಿ ನಿರತರಾಗಿದ್ದಾರೆ’’ ಎಂದು ಅವರು ಹೇಳಿದರು. ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 8ನೇ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಬಿಜೆಪಿಯನ್ನು ಸಂಜಯ್ ರಾವತ್ ಅವರು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News