ʼಅಪರಿಚಿತʼ ವ್ಯಕ್ತಿಗಳೊಂದಿಗೆ ಸೇರಿಕೊಂಡು ಯುವಕನಿಗೆ ಚಿತ್ರಹಿಂಸೆ ನೀಡಿದ ಉತ್ತರಪ್ರದೇಶ ಪೊಲೀಸರು: ಪ್ರಕರಣ ದಾಖಲು
ಲಕ್ನೋ, ಜೂ. 5: ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ಬದೌನ್ ಪೊಲೀಸರಿಂದ ಕ್ರೂರ ಚಿತ್ರಹಿಂಸೆಗೆ ಗುರಿಯಾದ 20 ವರ್ಷದ ಯುವಕನೋರ್ವನನ್ನು ಉತ್ತರಪ್ರದೇಶದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಪೊಲೀಸರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಆತ ತೀವ್ರ ಗಾಯಗೊಂಡಿದ್ದಾನೆ. ಆತನಿಗೆ ನಡೆಯಲು ಹಾಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ದೊಣ್ಣೆ ಬಳಸಿ ಹಲ್ಲೆ ನಡೆಸಿರುವುದರಿಂದ ಹಾಗೂ ವಿದ್ಯುತ್ ಶಾಕ್ ನೀಡಿರುವುದರಿಂದ ಆತನ ಗುಪ್ತಾಂಗಗಳಿಗೆ ಗಾಯಗಳಾಗಿವೆ. ಅಲ್ಲದೆ, ಆತನಿಗೆ ತೀವ್ರವಾಗಿ ಥಳಿಸಲಾಗಿದೆ’’ ಎಂದು ಸಂತ್ರಸ್ತ ರೆಹಾನ್ ನ ಕುಟುಂಬ ಆರೋಪಿಸಿದೆ. 5 ಸಾವಿರ ರೂಪಾಯಿ ಲಂಚ ನೀಡಿದ ಬಳಿಕ ಪೊಲೀಸರು ಆತನನ್ನು ಬಿಡುಗಡೆ ಮಾಡಿದರು.
ಅನಂತರ ಆತನ ಚಿಕಿತ್ಸೆಗೆ 100 ರೂಪಾಯಿ ನೀಡಿದ್ದಾರೆ ಎಂದು ರೆಹಾನ್ನ ಕುಟುಂಬ ಆರೋಪಿಸಿದೆ.
ದಿನಗೂಲಿ ನೌಕರನಾಗಿರುವ ರೆಹಾನ್ ಮೇ 2ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿರುವ ಸಂದರ್ಭ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜಾನುವಾರು ಕಳ್ಳ ಸಾಗಾಟಗಾರರಿಗೆ ನೆರವು ನೀಡುತ್ತಿದ್ದ ಎಂದು ಪೊಲೀಸರು ಪ್ರತಿಪಾದಿಸಿದ್ದರು. ‘‘ಆತ ಹಲವು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇದ್ದ. ಪೊಲೀಸರಿಗೆ ಲಂಚ ನೀಡಿದ ಬಳಿಕ ಬಿಡುಗಡೆ ಮಾಡಿದರು’’ ಎಂದು ಕುಟುಂಬ ಆರೋಪಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಪ್ರಥಮ ಮಾಹಿತಿ ವರದಿ ಪ್ರಕಾರ ರೆಹಾನ್ನನ್ನು ಪ್ರಸ್ತುತ ಬುಲಂದ್ಶಹರ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 7 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿದ್ದ 5 ಮಂದಿ ಪೊಲೀಸರನ್ನು ವಜಾಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Extreme torture. https://t.co/uvq0I52D7s
— Alishan Jafri (@alishan_jafri) June 5, 2022