×
Ad

ಪ್ರವಾದಿ ಕುರಿತ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಭಾರತದ ಉತ್ಪನ್ನಗಳನ್ನು ತೆರವುಗೊಳಿಸಿದ ಕುವೈಟ್ ಸೂಪರ್‌ ಮಾರ್ಕೆಟ್‌

Update: 2022-06-06 22:56 IST
PHOTO: AFP

ಕುವೈಟ್ ಸಿಟಿ, ಜೂ.6: ಭಾರತದಲ್ಲಿ ಬಿಜೆಪಿ ಮುಖಂಡರು ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿರುವ ಕುವೈಟ್‌ನ ಸೂಪರ್ಮಾರ್ಕೆಟ್ ,ತನ್ನ ಶೆಲ್ಫ್‌ನಿಂದ ಭಾರತದ ಉತ್ಪನ್ನಗಳನ್ನು ತೆರವುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಇಸ್ಲಮೊಫೋಬಿಕ್’  ಎಂದು ಖಂಡಿಸಲಾಗಿರುವ ಹೇಳಿಕೆಯನ್ನು ಪ್ರತಿಭಟಿಸಿ ಕುವೈಟ್‌ನ ಅಲ್ ಅರ್ದಿಯಾ ಕೋ ಆಪರೇಟಿವ್ ಸೊಸೈಟಿಯ ಕೆಲಸಗಾರರು ಭಾರತದ ಚಹಾಪುಡಿ ಹಾಗೂ ಇತರ ಉತ್ಪನ್ನಗಳನ್ನು ತೆರವುಗೊಳಿಸಿ ಪ್ರತ್ಯೇಕ ಟ್ರಾಲಿಗಳಲ್ಲಿ ತುಂಬಿಸಿಟ್ಟರು . ಅಕ್ಕಿಗಳ ಚೀಲ, ಶೆಲ್ಫ್‌ಗಳಲ್ಲಿದ್ದ ಮಸಾಲೆ , ಮೆಣಸಿನ ಕಾಯಿಗಳನ್ನು ಪ್ಲಾಸ್ಟಿಕ್ ಕವರ್ನಿಂದ ಮುಚ್ಚಿದರು. ಬಳಿಕ ಅದರ ಮೇಲೆ ‘ನಾವು ಭಾರತದ ಉತ್ಪನ್ನಗಳನ್ನು ತೆರವುಗೊಳಿಸಿದ್ದೇವೆ’ ಎಂಬ ಲೇಬಲ್ ಅಂಟಿಸಿದರು ಎಂದು ವರದಿಯಾಗಿದೆ. 

ಕುವೈತ್ ಮುಸ್ಲಿಮ್ ಜನರಾದ ನಾವು ಪ್ರವಾದಿಗಳ ಅವಮಾನವನ್ನು ಒಪ್ಪಿಕೊಳ್ಳುವುದಿಲ್ಲ ಸೂಪರ್‌ಮಾರ್ಕೆಟ್‌ನ ಸಿಇಒ ನಾಸಿರ್ ಅಲ್ ಮುತೈರಿ ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಸಂಸ್ಥೆಯ ಸರಣಿ ಸೂಪರ್‌ಮಾರ್ಕೆಟ್‌ಗಳಲ್ಲಿ  ಬಹಿಷ್ಕಾರವನ್ನು ಪರಿಗಣಿಸಲಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ. ಈ ಮಧ್ಯೆ, ಭಾರತದ ರಾಯಭಾರಿಯನ್ನು ಕರೆಸಿಕೊಂಡ ಇರಾನ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಸೌದಿ ಅರೆಬಿಯಾ, ಖತರ್ ಸೇರಿದಂತೆ ಈ ಪ್ರದೇಶದ ಹಲವು ದೇಶಗಳು ಹಾಗೂ ಕೈರೊದ ಅಲ್ಅಝರ್ ವಿವಿ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಹೇಳಿಕೆಯನ್ನು ಖಂಡಿಸಿವೆ. ನೂಪುರ್ ಶರ್ಮರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಈ ಮಧ್ಯೆ, ಹಿಂದುಗಳ ದೇವರು ಶಿವನಿಗೆ ಮಾಡಿರುವ ಅವಮಾನಕ್ಕೆ ಪ್ರತಿಕ್ರಿಯಿಸುವ ಸಂದರ್ಭ ತಾನು ಈ ಹೇಳಿಕೆ ನೀಡಿದ್ದೆ. ತನ್ನ ಮಾತುಗಳು ಯಾರಿಗಾದರೂ ಅಹಿತಕರ ಅಥವಾ ಧಾರ್ಮಿಕ ಭಾವನೆಗಳನ್ನು ನೋಯಿಸಿದರೆ ಈ ಮೂಲಕ ತನ್ನ ಮಾತುಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ ಎಂದು ನೂಪುರ್ ಶರ್ಮ ಟ್ವೀಟ್ ಮಾಡಿದ್ದಾರೆ.
    
ಇಸ್ಲಾಮೊಫೊಬಿಕ್ ಹೇಳಿಕೆಗಾಗಿ ಭಾರತ ಕ್ಷಮೆ ಯಾಚಿಸಬೇಕು ಎಂದು ರವಿವಾರ ಖತರ್ ಆಗ್ರಹಿಸಿತ್ತು. ಖತರ್ ಮತ್ತು ಕುವೈತ್ ಅನ್ನು ಅನುಸರಿಸಿದ ಇರಾನ್ , ಭಾರತದ ರಾಯಭಾರಿಯನ್ನು ಕರೆಸಿಕೊಂಡು ಸರಕಾರ ಮತ್ತು ಜನರ ಹೆಸರಿನಲ್ಲಿ ಪ್ರತಿಭಟನೆ ಸಲ್ಲಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಇರ್ನಾ ರವಿವಾರ ವರದಿ ಮಾಡಿದೆ. ಈ ಹೇಳಿಕೆ ನಿಜವಾದ ಭಯೋತ್ಪಾದನೆಯಾಗಿದೆ ಮತ್ತು ಇಡೀ ವಿಶ್ವವನ್ನು ಮಾರಣಾಂತಿಕ ಬಿಕ್ಕಟ್ಟು ಮತ್ತು ಯುದ್ಧದಲ್ಲಿ ಮುಳುಗಿಸಬಹುದು ಎಂದು ಇಸ್ಲಾಂನ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಅಲ್ ಅಝರ್ ವಿವಿ ಹೇಳಿಕೆ ನೀಡಿದೆ. 

ಇಂತಹ ಹೇಳಿಕೆಗಳು ದ್ವೇಷವನ್ನು ಪ್ರಚೋದಿಸಬಹುದು ಎಂದು ಸೌದಿ ಮೂಲದ ಮುಸ್ಲಿಮ್ ಜಾಗತಿಕ ಒಕ್ಕೂಟ ಖಂಡಿಸಿದೆ. ಈ ಹೇಳಿಕೆ ಖಂಡನಾರ್ಹ ಮತ್ತು ತಿರಸ್ಕಾರಯೋಗ್ಯ ಎಂದು ಗಲ್ಫ್ ಸಹಕಾರ ಮಂಡಳಿ ಪ್ರತಿಕ್ರಿಯಿಸಿದೆ. ಮುಸ್ಲಿಮರ ಭಾವನೆಗಳಿಗೆ ಪ್ರಚೋದನೆ ಮತ್ತು ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ನೂಪುರ್ ಶರ್ಮರನ್ನು ಅಮಾನತುಗೊಳಿಸಿರುವ ಬಿಜೆಪಿ ಕ್ರಮವನ್ನು ಸ್ವಾಗತಿಸುವುದಾಗಿ ಬಹ್ರೇನ್ ಹೇಳಿದೆ.

ಸಾಗರೋತ್ತರ ದೇಶಗಳಿಗೆ ತೆರಳುವ ಭಾರತೀಯ ಉದ್ಯೋಗಿಗಳ ಪ್ರಮುಖ ಗಮ್ಯಸ್ಥಾನವಾಗಿರುವ ಗಲ್ಫ್ ದೇಶಗಳಲ್ಲಿ 8.7 ಮಿಲಿಯನ್ ಭಾರತೀಯ ಕೆಲಸಗಾರರಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆಯ ಅಂಕಿಅಂಶ ತಿಳಿಸಿದೆ. ಕುವೈಟ್ ದೇಶಕ್ಕೆ ಆಮದಾಗುವ ಆಹಾರ ವಸ್ತುಗಳಲ್ಲಿ 95% ಭಾರತದಿಂದ ಆಮದಾಗುತ್ತದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News