ಕರ್ನಾಟಕದ ಬೌದ್ಧಿಕ ವಲಯ ಬೆಳೆಸಿಕೊಂಡ ನಿಷ್ಕ್ರಿಯತೆಯೂ..ಹೆಚ್ಚುತ್ತಿರುವ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳ ದಾಳಿಗಳೂ

Update: 2022-06-07 06:21 GMT

ಕರ್ನಾಟಕದ ಬುದ್ಧಿಜೀವಿ ವಲಯದ ಹಲವರು ತಮ್ಮ ಕಾರ್ಯಶೀಲತೆಯನ್ನು ಕಳೆದುಕೊಂಡು ಬಹಳ ಕಾಲವಾಗಿದೆ. ಕೇವಲ ವ್ಯಕ್ತಿನಿಷ್ಠ ಚಟುವಟಿಕೆಗಳಿಗೆ ಆಸಕ್ತಿಯನ್ನು ಉಳಿಸಿಕೊಂಡುಬಂದಿದ್ದಾರೆ. ಸಾಮೂಹಿಕವಾಗಿ ನಿಂತು ಸಮಕಾಲೀನ ಸಂದರ್ಭಗಳಿಗೆ ಸ್ಪಂದಿಸಬೇಕೆನ್ನುವ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಿಲ್ಲ. ವಿಷಯಾಧಾರಿತವಾಗಿ ಒಗ್ಗೂಡುವುದು ಕಾಲ, ಸಂದರ್ಭಕ್ಕೆ ಅನುಗುಣವಾಗಿ ವೈಚಾರಿಕವಾಗಿ ಸಂಘರ್ಷಿಸುವುದು ಪ್ರಜಾತಾಂತ್ರಿಕತೆ ಹಾಗೂ ಒಗ್ಗೂಡುವಿಕೆಗೆ ಅಗತ್ಯವೆಂಬ ಸತ್ಯವನ್ನು ಅಳವಡಿಸಿಕೊಳ್ಳುವಲ್ಲಿ ಬಹಳ ಹಿಂದಿದ್ದಾರೆ ಎನ್ನಲು ಹೇರಳ ಉದಾಹರಣೆಗಳಿವೆ.


 ಅದೊಂದು ಸಮಾವೇಶ. ಅದು ಇಂಡಿಯಾದ ಇಂದಿನ ಬಿಕ್ಕಟ್ಟಿನ ಕುರಿತು ಬ್ರಿಟಿಷರ ನಂತರ ಇಂಡಿಯಾವನ್ನು ಆಳಿಕೊಂಡು ಬಂದ ಶಕ್ತಿಗಳು ಇಂದು ತಂದಿಟ್ಟಿರುವ ಇಕ್ಕಟ್ಟುಗಳ ಕುರಿತು ವಿಚಾರ ವಿನಿಮಯ, ಚಿಂತನ, ಮಂಥನ ನಡೆಸುವ ವೇದಿಕೆಯಾಗಿತ್ತು. ಅಲ್ಲಿ ದಲಿತ, ದಮನಿತ, ಮಹಿಳಾ, ಹಿಂದುಳಿದ, ಅಲ್ಪಸಂಖ್ಯಾತ ಸಮೂಹದ ನೂರಾರು ಜನರಿದ್ದರು. ಕೃಷಿ ತಜ್ಞರೆಂದು ಪ್ರಚಲಿತರಾಗಿರುವ ವ್ಯಕ್ತಿಯೊಬ್ಬರು ರೈತರ ಬಿಕ್ಕಟ್ಟುಗಳ ಕುರಿತು ವೇದಿಕೆಯಿಂದ ಮಾತನಾಡುತ್ತಿದ್ದರು. ಅವರು ತಮ್ಮ ಮಾತಿನಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳು, ಸಾಲ ಬಿಕ್ಕಟ್ಟು, ರೈತರ ಆದಾಯ ಖೋತಾ ವಿಚಾರಗಳನ್ನು ಬಲವಾಗಿ ಪ್ರಸ್ತಾಪಿಸುತ್ತಾ ಅವುಗಳ ಅಂಕಿ-ಅಂಶಗಳು, ವಿವರಣೆಗಳನ್ನು ಸಾಕಷ್ಟು ನೀಡತೊಡಗಿದರು. ಅದಕ್ಕೂ ಮುನ್ನ ನಾವೀಗ ಇವುಗಳ ಹಿಂದಿನ ಕಾರಣಗಳು ಮತ್ತು ಪರಿಹಾರಗಳ ಕುರಿತು ಚಿಂತಿಸಿ ಮಾತನಾಡಬೇಕಿದೆ ಎಂದೆಲ್ಲಾ ಪೀಠಿಕೆಯನ್ನೂ ಹಾಕಿದ್ದರು. ಸುಮಾರು ಅರ್ಧ ಗಂಟೆಯಷ್ಟು ಸಮಯವನ್ನು ತೆಗೆದುಕೊಂಡ ಅವರು ಪರಿಹಾರದ ಭಾಗವಾಗಿ ಮಾತನಾಡಿದ್ದು ಸುಮಾರು ಒಂದು ನಿಮಿಷವಿರಬಹುದು. ಅದೂ ರೈತರು ಬಹುಬೆಳೆಗಳನ್ನು ಬೆಳೆಯುವುದು ಮತ್ತು ಹಲವಾರು ಕಡೆಗಳಲ್ಲಿ ಸಾಲ ಮಾಡದೆ ಯಾವುದಾದರೂ ಒಂದು ಬ್ಯಾಂಕಿನಿಂದ ಸಾಲ ಪಡೆಯುವುದನ್ನು ಮಾಡಿದರೆ ರೈತರು ಆತ್ಮಹತ್ಯೆಗಳಿಗೆ ಇಳಿಯುವ ಪರಿಸ್ಥಿತಿ ಬರುವುದಿಲ್ಲ ಎಂದು ತಮ್ಮ ಪರಿಹಾರ ತಿಳಿಸಿ ತಮ್ಮ ಮಾತುಗಳನ್ನು ಮುಗಿಸಿದರು. ಅವರ ಮಾತುಗಳ ಕುರಿತು ಸಂವಾದ ನಡೆಯದೆ ಹೋಗಿದ್ದರಿಂದ ಪ್ರಶ್ನೆಗಳನ್ನು ಯಾರೂ ಕೇಳಲಿಲ್ಲ. ಹಾಗಾಗಿ ಚರ್ಚೆಗಳೂ ನಡೆಯಲಿಲ್ಲ ಬಿಡಿ.

 ರೈತರ ಆತ್ಮಹತ್ಯೆಗಳಿಗೆ ನವವಸಾಹತುಶಾಹಿ ಶೋಷಣೆ ಹಾಗೂ ಅದಕ್ಕೆ ಪೂರಕವಾಗಿ ಜಾರಿಮಾಡುತ್ತಾ ಬಂದಿರುವ ಸರಕಾರಗಳ ನೀತಿಗಳು, ಕೃಷಿ ಕ್ಷೇತ್ರವನ್ನು ಭಾರೀ ಕಾರ್ಪೊರೇಟ್‌ಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಿಡಿದಿಟ್ಟುಕೊಂಡು ನಿಯಂತ್ರಿಸುತ್ತಾ ಬರುತ್ತಿರುವುದು, ಅದರ ಮುಂದುವರಿಕೆಯಾಗಿ ಯೂನಿಯನ್ ಸರಕಾರ ಹಾಗೂ ಹಲವಾರು ರಾಜ್ಯ ಸರಕಾರಗಳು ಫ್ಯಾಶಿಸ್ಟ್ ರೂಪದಲ್ಲಿ ಜಾರಿಗೊಳಿಸುತ್ತಿರುವ ಕೃಷಿ ತಿದ್ದುಪಡಿಗಳು, ಮಸೂದೆಗಳ ಪ್ರಸ್ತಾಪಗಳನ್ನೇ ಮಾಡಲಿಲ್ಲ. ಇವೆಲ್ಲಾ ಅವರು ಮಾಡಿದ ಅತೀ ಬುದ್ಧಿವಂತಿಕೆಯ ಜಾಣ ನಡೆಗಳಾಗಿದ್ದವು. ಅವರು ಈ ಹಿಂದೆ ಸರಕಾರದ ಭಾಗವಾಗಿ ರೈತರ ಪರವೆಂದು ಬಿಂಬಿಸಿ ರೂಪಿಸಿದ ಹುದ್ದೆ ಏರಿ ಏನನ್ನೂ ಕಾರ್ಯದಲ್ಲಿ ಮಾಡದೇ ಕೆಳಗಿಳಿದ ವ್ಯಕ್ತಿಯಾಗಿದ್ದರು.
ಮತ್ತೊಬ್ಬರು ಯುವಕ ಅದೇ ವೇದಿಕೆಯಿಂದ ಏರಿದ ದನಿಯಲ್ಲಿ ಮಾತನಾಡುತ್ತಿದ್ದರು. ಯುವಕರು ಹೇಗೆಲ್ಲಾ ಯೋಚಿಸಬೇಕು ಎಂದೆಲ್ಲಾ ಆವೇಶಭರಿತರಾಗಿ ಮಾತನಾಡಿದರು. ದಲಿತ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಸಂವಿಧಾನದ ಕುರಿತು, ಹಕ್ಕುಗಳ ಕುರಿತು ಮಾತನಾಡಿದರು. ಎಲ್ಲರೂ ಒಗ್ಗೂಡಿ ನಿಲ್ಲಬೇಕು ಎಂದರು. ಅವರ ಮಾತಿನ ಧಾಟಿ ಹೇಗಿತ್ತು ಎಂದರೆ ನೀವೆಲ್ಲಾ ಹೀಗೆ ಯೋಚಿಸಬೇಕು ಹಾಗೇನೇ ಮಾಡಬೇಕು ಎನ್ನುತ್ತಿದ್ದರು. ಎಲ್ಲದಕ್ಕೂ ತಾನು ಹೇಳುತ್ತಿರುವುದೇ ಪರಿಹಾರ, ಅದೊಂದೇ ದಿವ್ಯೌಷಧವೆಂಬ ಪ್ರತಿಪಾದನೆಗಳಿದ್ದವು. ಇವರು ಅಂಬೇಡ್ಕರ್‌ವಾದಿ, ದಲಿತಪರ ಎಂದೆಲ್ಲಾ ಬಿಂಬಿಸಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಬಲವಾಗಿ ಬೆಂಬಲಿಸುತ್ತಾ ಬಂದಿದ್ದರು. ಅವರು ನಂತರ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಕೋಮುವಾದಿ ಪಕ್ಷದಲ್ಲಿ ಗುರುತಿಸಿಕೊಂಡರು. ದಲಿತ ದಮನಿತ ವಲಯದ ಬಹಳಷ್ಟು ಅನುಕೂಲಿತರು ನವಬ್ರಾಹ್ಮಣಶಾಹಿಯಾಗಿ ಫ್ಯಾಶಿಸ್ಟ್ ಶಕ್ತಿಗಳೊಂದಿಗೆ ಸೇರಿಕೊಂಡು ಜನಸಾಮಾನ್ಯರ ಮೇಲಿನ ದಾಳಿಗಳ ಭಾಗವಾಗುತ್ತಿದ್ದಾರೆ ಎಂಬುದರ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಈ ಅಪಾಯ ಕಾರಿ ಬೆಳವಣಿಗೆಗಳ ಬಗ್ಗೆ ತುಟಿಬಿಚ್ಚದೆ ತಮ್ಮ ಮಾತುಗಳನ್ನು ಕೊನೆಗೊಳಿಸಿದರು.

ಇವರು ಬ್ರಿಟಿಷರ ನಂತರದ ಈ ಎಪ್ಪತ್ತೈದು ವರ್ಷಗಳ ನಮ್ಮ ದೇಶದ ಆಡಳಿತ ವ್ಯವಸ್ಥೆ ಶೇ.90ಕ್ಕೂ ಹೆಚ್ಚಿರುವ ದಲಿತ ದಮನಿತ, ಆದಿವಾಸಿ, ಮಹಿಳಾ, ಅಲ್ಪಸಂಖ್ಯಾತ, ಹಿಂದುಳಿದ ಜನಸಮೂಹಗಳಿಗೆ ಸಂವಿಧಾನಾತ್ಮಕ ಪ್ರಯೋಜನಗಳಾಗಲೀ, ಕಾನೂನಾತ್ಮಕ ಪ್ರಯೋಜನಗಳಾಗಲೀ ಎಷ್ಟು ದಕ್ಕಿದೆ, ಯಾಕೆ ಬಹುಸಂಖ್ಯಾತ ಜನಸಮುದಾಯಗಳಿಗೆ ಇವೆಲ್ಲಾ ದಕ್ಕದೆ ಹೋಗಿವೆ, ಒಂದಷ್ಟು ಉಪಯೋಗ ಪಡೆದವರು ಅನುಕೂಲಸ್ಥರಾಗಿ ಅವರಲ್ಲಿನ ಹಲವರು ನವಬ್ರಾಹ್ಮಣವಾದಿಗಳಾಗಿ, ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳ ಜೊತೆಗೆ ನೇರವಾಗಿ ಮತ್ತು ಅಪ್ರತ್ಯಕ್ಷವಾಗಿ ನಿಂತುಬಿಟ್ಟಿದ್ದಾರೆ, ಅಷ್ಟೇ ಅಲ್ಲದೆ ಇದ್ದಬದ್ದ ಒಂದಷ್ಟು ಜನರಿಗೆ ಅನುಕೂಲ ಕಲ್ಪಿಸಿದ್ದ ಮೀಸಲಾತಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಂತಹವುಗಳನ್ನು ಹೇಗೆಲ್ಲಾ ಬಲಹೀನಗೊಳಿಸಲಾಗುತ್ತಿದೆ, ಖಾಸಗೀಕರಣದ ತೀವ್ರತೆಯಿಂದಾಗಿ ಎಲ್ಲಾ ಕ್ಷೇತ್ರಗಳನ್ನು ಭಾರೀ ಕಾರ್ಪೊರೇಟ್‌ಗಳ ಕೈಗೆ ಒಪ್ಪಿಸುವ ಧೂರ್ತ ನಡೆಗಳ ಬಗ್ಗೆಯಾಗಲೀ ಹೀಗೆ ಮೂಲಭೂತವಾಗಿ ನಮ್ಮ ಬಹುಸಂಖ್ಯಾತ ಜನಸಮುದಾಯಗಳನ್ನು ಮತ್ತು ದೇಶವನ್ನು ಹುರಿದು ಮುಕ್ಕುತ್ತಿರುವ ಹಲವಾರು ವಿಚಾರಗಳ ಬಗ್ಗೆ ಕನಿಷ್ಠ ಮಟ್ಟದಲ್ಲಾದರೂ ಗಮನಿಸಿ ಗ್ರಹಿಸಿ ತಮ್ಮ ವಿಚಾರಗಳನ್ನು ಮಂಡಿಸುವ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ.

ಇದೇ ವೇದಿಕೆಯಲ್ಲಿ ಕೆಲವರು ಜನಪರ ಕಾನೂನುಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದವರು ಯಾಕೆ ಈಗಾಗಲೇ ಜನಪರವೆಂದು ಬಿಂಬಿಸಿ ರೂಪಿಸಿರುವ ಕಾನೂನುಗಳು ದೇಶದ ಬಹುಸಂಖ್ಯಾತರ ಬಳಿ ತಲುಪಿಲ್ಲ ಎಂಬ ಬಗ್ಗೆ ಗಮನ ಹರಿಸದೆ ಮಾತನಾಡಿದರು. ನ್ಯಾಯಾಂಗವೇ ಎಲ್ಲದಕ್ಕೂ ಪರಿಹಾರ ಎಂಬಂತೆ ಮಾತನಾಡಿದವರು ಕೂಡ ದೇಶ ಇಂದಿನ ಈ ಮಟ್ಟದ ದುರಂತ ಸ್ಥಿತಿಗೆ ಹೋಗದಂತೆ ತಡೆಯಲು ನ್ಯಾಯಾಂಗ ಯಾಕೆ ವಿಫಲವಾಗಿ ಕುಳಿತಿದೆ ಎಂಬ ಬಗ್ಗೆ ಗಮನಹರಿಸಿ ನೋಡಲಿಲ್ಲ. ಹೀಗೆ ಹತ್ತಾರು ಜನರು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು. ಬಹುತೇಕರು ಇಂದಿನ ಬಿಕ್ಕಟ್ಟುಗಳನ್ನು ಕೆಲವು ಘಟನೆಗಳು ಹಾಗೂ ಕೆಲವು ಅಂಕಿ-ಅಂಶಗಳನ್ನಿಟ್ಟು ವಿವರಿಸಲೇ ಪ್ರಾಮುಖ್ಯತೆ ನೀಡಿದರೆನ್ನಬಹುದು. ಆದರೆ ಸಂದರ್ಭದ ಗಂಭೀರ ಬಿಕ್ಕಟ್ಟುಗಳಿಂದ ಹೊರಬರುವ ಪರಿಹಾರಗಳತ್ತ ಹೊರಳಿ ನೋಡಿ ಮಾತನಾಡಿದವರು ಇಲ್ಲವೆನ್ನುವಷ್ಟು ಕಡಿಮೆಯೆನ್ನಬಹುದು. ಒಂದಿಬ್ಬರು ಮಾತನಾಡಿದ್ದರೂ ಅದು ಗಂಭೀರತೆಯ ಕೊರತೆ ಹಾಗೂ ಅಪಕ್ವತೆಯಿಂದ ಕೂಡಿದ್ದವು ಹಾಗೂ ಆಚರಣಾಯೋಗ್ಯವಾಗಿರಲಿಲ್ಲ. ಕಂಠಪಾಠದ ಮಟ್ಟದಲ್ಲಿ ಕಾಟಾಚಾರದ ಪರಿಹಾರಗಳ ಬಗ್ಗೆ ಮಾತನಾಡಿದವರಿದ್ದರು. ಆದರೆ ಅಲ್ಲಿ ನೆರೆದಿರುವವರಲ್ಲಿ ಬಹುತೇಕರಿಗೆ ವೇದಿಕೆಯ ಮೇಲಿನವರು ಮಾತನಾಡಿದ ಸಂಗತಿಗಳು ಗೊತ್ತಿರುವಂತಹವೇ ಆಗಿದ್ದವು. ಹಲವರಿಗೆ ಅದಕ್ಕಿಂತಲೂ ಹೆಚ್ಚು ವಿವರಗಳು ಗೊತ್ತಿದ್ದವು.

ವೇದಿಕೆಯಲ್ಲಿನ ಇವರು ಯಾರೂ ಕಾಲಘಟ್ಟದ ನೈಜಪರಿಸ್ಥಿತಿಯನ್ನು ಗ್ರಹಿಸಿ, ಆಕ್ರಮಣಕಾರಿಯಾಗಿ ಎಲ್ಲರ ಮೇಲೂ ಎರಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳ ಹುನ್ನಾರ ಮತ್ತು ಅಪಾಯವನ್ನು ಎದುರಿಸಿ ಹಿಮ್ಮೆಟ್ಟಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಜಾಗತಿಕ ಕಾರ್ಪೊರೇಟ್ ವ್ಯವಸ್ಥೆ ಹೇಗೆ ಇದನ್ನು ಬಳಸಿಕೊಂಡು ತನ್ನ ದಾಳಿಗಳನ್ನು ಮಾಡುತ್ತಾ ಬರುತ್ತಿದೆ ಎನ್ನುವ ಕಡೆ ತಮ್ಮ ದೃಷ್ಟಿಯನ್ನು ಹರಿಸಿ ಮಾತನಾಡದೇ ಹೋದರು. ಕೆಲವರಿಗೆ ಅದು ಗ್ರಹಿಕೆಗೆ ಬಾರದೇ ಹೋಗಿರಬಹುದು ಹಲವರಿಗೆ ಅದು ಜಾಣತನದ ನಡೆಯಾಗಿರಬಹುದು. ಹೀಗೆಲ್ಲಾ ಮಾತನಾಡಿದವರಲ್ಲಿ ಬಹುತೇಕರು ನೈಜ ಸಾಮಾಜಿಕ ಕಾಳಜಿಯವರೇ ಆಗಿದ್ದರು. ಅವರಲ್ಲಿ ಇಂದಿನ ಪರಿಸ್ಥಿತಿಗಳ ಅರಿವು ಹಾಗೂ ಅವುಗಳಿಂದ ಹೊರಬರುವ ತವಕಗಳಿದ್ದವು ಕೂಡ. ಸಾಮಾಜಿಕ ವಾಸ್ತವಗಳನ್ನು ಗಂಭೀರತೆಯಿಂದಲೇ ಗ್ರಹಿಸುವವರು ಹಾಗೂ ಚಿಂತಿಸಿ ಸ್ಪಂದಿಸುವವರೇ ಆಗಿದ್ದರು. ಕೆಲವರು ಚಳವಳಿಗಳನ್ನು ಸಂಘಟಿಸಿದವರಾಗಿದ್ದರು.

 ಆದರೆ ಪರಿಹಾರದ ಭಾಗವಾಗಬೇಕಾದ ಸಿದ್ಧತೆ ಹಾಗೂ ಚಿಂತನೆಗಳನ್ನು ಬೆಳೆಸಿಕೊಳ್ಳುವಲ್ಲಿ ಬಹಳ ಹಿಂದಿದ್ದರು ಎನ್ನಬಹುದು. ಈ ಕಾಲಘಟ್ಟದ ಸವಾಲುಗಳನ್ನು ಹಳೇ ಕಾಲಘಟ್ಟದ ಸಂದರ್ಭದಲ್ಲಿ ನಿಂತು ಗ್ರಹಿಸಿ ಮಾತನಾಡುವ ರೂಢಿಗಳಲ್ಲಿ ಮುಂದುವರಿದವರೆನ್ನಬಹುದು. ವಿಚಾರ ಹಾಗೂ ಕಾಲಘಟ್ಟದ ವಾಸ್ತವಗಳ ಆಳ ಹಾಗೂ ವಿಸ್ತಾರಕ್ಕೆ ಇಳಿದು ಗ್ರಹಿಸಿ ಚಿಂತಿಸುವಲ್ಲಿನ ಗಂಭೀರ ಕೊರತೆಗಳನ್ನು ಹೊಂದಿದ್ದರು. ಬುದ್ಧಿಜೀವಿಗಳ ಮಾಮೂಲಿ ವರಸೆಯಾದ ಅಡ್ಡಗೋಡೆಯ ಮೇಲೆ ದೀಪವಿಡುವಂತಹ ವೇದಿಕೆಗಾಗಿನ ಮಾತುಗಳಿಗೆ ಸೀಮಿತರಾಗಿದ್ದರು. ಜೊತೆಗೆ ಪ್ರಚಾರದ ಹುಂಬತನಗಳು ಹಾಗೂ ಮಿತಿಗಳನ್ನು ತಮ್ಮಿಳಗೆ ಸೇರಿಸಿಕೊಂಡವರಾಗಿದ್ದರು. ವ್ಯಕ್ತಿನಿಷ್ಠತೆಯ ಕಂದಕದೊಳಗಿನಿಂದ ಹೊರಬಂದು ಸಾಮೂಹಿಕತೆ ಹಾಗೂ ಪ್ರಜಾತಾಂತ್ರಿಕತೆಯ ವಿಶಾಲತೆ, ಗಹನತೆ, ವೈವಿಧ್ಯತೆಗಳು, ಪ್ರಗತಿಶೀಲತೆಗಳನ್ನು ತಲುಪುವ ಸಾಧ್ಯತೆಗಳನ್ನು ಮುಚ್ಚಿಕೊಂಡವರಾಗಿದ್ದರು. ತಮ್ಮ ಚಿಂತನೆಗಳನ್ನು ಸಾಮಾಜಿಕ ವಾಸ್ತವತೆಗೆ ಅಳವಡಿಸಿ ಬೆಳೆಸಿಕೊಳ್ಳುವಲ್ಲಿ ಅಗತ್ಯವಿದ್ದಷ್ಟು ಒತ್ತು ಇಲ್ಲವೇ ಪ್ರಾಮಾಣಿಕ ಪ್ರಯತ್ನಗಳ ಕೊರತೆಗಳನ್ನು ಹೊಂದಿದ್ದರು. ಹಲವರು ಈಗಿರುವ ವ್ಯವಸ್ಥೆಯು ಹೇರಿರುವ ಮಿತಿಗಳ ಚೌಕಟ್ಟಿನಲ್ಲಿಯೇ ಪರಿಹಾರವನ್ನು ಕಾಣಬೇಕೆನ್ನುವ ನಿಲುವಿಗೆ ಅಂಟಿಕೊಂಡವರಾಗಿದ್ದರು. ಕರ್ನಾಟಕದ ಬುದ್ಧಿಜೀವಿ ವಲಯದ ಹಲವರು ತಮ್ಮ ಕಾರ್ಯಶೀಲತೆಯನ್ನು ಕಳೆದುಕೊಂಡು ಬಹಳ ಕಾಲವಾಗಿದೆ. ಕೇವಲ ವ್ಯಕ್ತಿನಿಷ್ಠ ಚಟುವಟಿಕೆಗಳಿಗೆ ಆಸಕ್ತಿಯನ್ನು ಉಳಿಸಿಕೊಂಡುಬಂದಿದ್ದಾರೆ. ಸಾಮೂಹಿಕವಾಗಿ ನಿಂತು ಸಮಕಾಲೀನ ಸಂದರ್ಭಗಳಿಗೆ ಸ್ಪಂದಿಸಬೇಕೆನ್ನುವ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಿಲ್ಲ. ವಿಷಯಾಧಾರಿತವಾಗಿ ಒಗ್ಗೂಡುವುದು ಕಾಲ, ಸಂದರ್ಭಕ್ಕೆ ಅನುಗುಣವಾಗಿ ವೈಚಾರಿಕವಾಗಿ ಸಂಘರ್ಷಿಸುವುದು ಪ್ರಜಾತಾಂತ್ರಿಕತೆ ಹಾಗೂ ಒಗ್ಗೂಡುವಿಕೆಗೆ ಅಗತ್ಯವೆಂಬ ಸತ್ಯವನ್ನು ಅಳವಡಿಸಿಕೊಳ್ಳುವಲ್ಲಿ ಬಹಳ ಹಿಂದಿದ್ದಾರೆ ಎನ್ನಲು ಹೇರಳ ಉದಾಹರಣೆಗಳಿವೆ. ವೈಚಾರಿಕ ಸಂಘರ್ಷ ಇಲ್ಲವೇ ವಿಮರ್ಶೆಗಳನ್ನೂ ಇಟ್ಟುಕೊಳ್ಳುತ್ತಲೇ ವೈಯಕ್ತಿಕ ಸ್ನೇಹ ಮತ್ತು ಬಾಂಧವ್ಯಕ್ಕೆ ಧಕ್ಕೆಯಾಗದಂತಿರಬೇಕಾದ ಅಗತ್ಯವನ್ನು ಕೂಡ ಆಚರಣಾತ್ಮಕವಾಗಿ ಗ್ರಹಿಸಲಾರದೆ ಹೋಗಿರುವವರೇ ಬಹಳ ಜನರಿದ್ದಾರೆ. ಪ್ರತಿಗಾಮಿ ಇಲ್ಲವೇ ಫ್ಯಾಶಿಸ್ಟರಿಗೆ ಈ ಪ್ರಜಾತಾಂತ್ರಿಕ ನಿಯಮ ಅನ್ವಯಿಸುವುದಿಲ್ಲ ಎಂಬ ಗ್ರಹಿಕೆಯೂ ಅಗತ್ಯ. ಹಾಗಾಗಿಯೇ ಈ ವಲಯದ ಹಲವರು ಅಗತ್ಯಕ್ಕೆ ತಕ್ಕ ಕಾರ್ಯಶೀಲತೆಯನ್ನು ಕಳೆದುಕೊಂಡಿದ್ದಾರೆನ್ನಬಹುದು.

ಕರ್ನಾಟಕದ ಬಹುತೇಕ ಬುದ್ಧಿಜೀವಿ ಬರಹಗಾರ ಸಮೂಹವು ಜನಸಾಮಾನ್ಯರೊಂದಿಗೆ ಸಾವಯವ ಬೆರೆಯುವಿಕೆಯನ್ನು ರೂಢಿಸಿಕೊಳ್ಳುವಲ್ಲಿ ಬಹಳ ಹಿಂದಿದೆ. ಜನಸಮೂಹಕ್ಕಿಂತ ತಾವು ಭಿನ್ನ, ಜನಸಮೂಹಕ್ಕಿಂತ ತಾವು ಮೇಲು, ತಾವು ಹೇಳಿದ್ದನ್ನು ಇಲ್ಲವೇ ಬರೆದದ್ದನ್ನು ಉಳಿದವರು ಕೇಳಬೇಕು, ಓದಬೇಕು, ಪ್ರಶ್ನೆ, ಚರ್ಚೆಗಳು, ಟೀಕೆ, ವಿಮರ್ಶೆಗಳು ಹೆಚ್ಚು ಬರಬಾರದು, ಬಂದರೂ ಅದು ನಾಮ ಮಾತ್ರದಲ್ಲಿರಬೇಕು, ಹೊಗಳಿಕೆ ಮೆಚ್ಚುಗೆಗಳು ಪ್ರಧಾನವಾಗಬೇಕು ಎಂದು ಬಯಸುವವರೇ ಹೆಚ್ಚಿದ್ದಾರೆ. ಯಾಕೆಂದರೆ ಜನಸಮೂಹದೊಂದಿಗೆ ಸಾವಯವ ಸಂಬಂಧ ರೂಢಿಸಿಕೊಳ್ಳಬೇಕಾದರೆ ಆ ಮಟ್ಟದ ಪ್ರಜಾತಾಂತ್ರಿಕ ಪ್ರಜ್ಞೆಯ ಹಾಗೂ ಅದರ ಅಳವಡಿಕೆಯ ಅವಶ್ಯಕತೆಯಿರುತ್ತದೆ. ಆ ರೀತಿ ಪ್ರಜಾತಾಂತ್ರಿಕ ರೂಢಿ ಇವರಲ್ಲಿ ಹಲವರು ಬೆಳೆಸಿಕೊಂಡಿಲ್ಲ. ಇದಕ್ಕೆ ಬೇಕಾದಷ್ಟು ಉದಾಹರಣೆಗಳು ಈಗಲೂ ಸಿಗುತ್ತವೆ. ಯಾವುದಾದರೂ ಸಾಮೂಹಿಕ ವಿಚಾರಗಳಿಗೆ, ತಾವು ಅದರ ನೇರ ಭಾಗೀದಾರರಾದರೂ ಕೂಡ ಅಂತಹ ವಿಚಾರಗಳಲ್ಲಿ ಸಮಾನ ಮನಸ್ಕರನ್ನೂ ಒಳಗೊಳಿಸಿಕೊಂಡು ಇಲ್ಲವೇ ಅಂತಹ ಮನಸ್ಸುಗಳೊಂದಿಗೆ ತಾವೇ ಒಳಗೊಳ್ಳುವ ಮನಸ್ಥಿತಿಗಳನ್ನು ಹೊಂದಿಲ್ಲದಿರುವುದು ಎದ್ದುಕಾಣುತ್ತದೆ. ಏನೇ ಬಂದರೂ ತಮ್ಮನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ನೋಡುತ್ತಾರೆ. ತಾವೊಬ್ಬರೇ ಹೇಳಿಕೆ ನೀಡುವ, ಆ ವಿಚಾರದ ಕುರಿತು ಸಂದರ್ಶನ ನೀಡುವ ತಮ್ಮ ಮಾತುಗಳಿಗೇ ಪ್ರಚಾರ ಸಿಗಬೇಕೆಂಬ ಮನೋಭಾವ ಹೀಗೆ ಆ ರೀತಿ ಕೇಂದ್ರೀಯ ಪ್ರಾಮುಖ್ಯತೆ ತಮಗೆ ಸಿಗುವ ಖಾತರಿ ಯಿದ್ದಾಗ ಮಾತ್ರ ಬರುತ್ತಾರೆ.

ಅದರಲ್ಲೂ ವ್ಯಕ್ತಿ ದ್ವೇಷಗಳ ಮೂಲಕ ನೋಡುತ್ತಾರೆ. ಅವರನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವ ವಿಷಯಾಧಾರಿತ ಸಮಾನ ಮನಸ್ಕರನ್ನು ಕೂಡ ದೂರವಿಡುತ್ತಾರೆ, ಇಲ್ಲವೇ ತಾವೇ ದೂರವುಳಿಯುತ್ತಾರೆ. ಇಂತಹ ಹಲವಾರು ಬಹಳ ಸಂಕುಚಿತ ಮತ್ತು ವ್ಯಕ್ತಿ ಕೇಂದ್ರಿತ ಧೋರಣೆಗಳು ಹಾಗೂ ವರ್ತನೆಗಳಿಂದ ಕರ್ನಾಟಕದ ಬುದ್ಧಿಜೀವಿ, ಪ್ರಗತಿಪರ ಮತ್ತು ವೈಚಾರಿಕ ವಲಯ ನರಳಲು ತೊಡಗಿ ಬಹಳ ಕಾಲವಾಗಿರುವುದರಿಂದ ಈಗ ಬಹಳ ಬಲಹೀನ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿಯೇ ಫ್ಯಾಶಿಸ್ಟ್ ಶಕ್ತಿಗಳಿಗೆ ಅನುಕೂಲವಾಗಿದೆ. ಇಂತಹ ನಿಷ್ಕ್ರಿಯತೆಗಳು ಹಾಗೂ ಫ್ಯಾಶಿಸ್ಟ್ ಶಕ್ತಿಗಳೊಂದಿಗಿನ ಪ್ರತ್ಯಕ್ಷ ಇಲ್ಲವೇ ಪರೋಕ್ಷ ರಾಜಿಗಳು ಕರ್ನಾಟಕದ ಸಾಮಾಜಿಕ ಬಿಕ್ಕಟ್ಟುಗಳನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿವೆ. ಅದರಿಂದಾಗಿಯೇ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳು ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ತಮ್ಮ ಪ್ರಯೋಗ ಹಾಗೂ ಹೇರಿಕೆಗಳನ್ನು ಮಾಡಲು ದಾರಿ ಸುಗಮ ಮಾಡಿಕೊಡುತ್ತಿದೆ. ಯಾಕೆಂದರೆ ಕರ್ನಾಟಕದಲ್ಲಿ ಅವರ ವಿರುದ್ಧ ಸಂಘಟಿತ ಪ್ರತಿರೋಧ ಕಡಿಮೆಯಿದೆ. ಈ ಧೋರಣೆಗಳು ಈಗ ಇಂತಹ ಬುದ್ಧಿಜೀವಿಗಳ ಮೂಲಕ್ಕೇ ಸಂಚಕಾರ ತಂದಿಟ್ಟಿದೆ. ಅವರ ಈ ಮಟ್ಟದ ಬಲಹೀನತೆ ಫ್ಯಾಶಿಸ್ಟ್ ಶಕ್ತಿಗಳಿಗೆ ಬೌದ್ಧಿಕ ವಲಯದಲ್ಲಿ ತಮ್ಮ ಕಾರ್ಯಗಳನ್ನು ಸುಗಮವಾಗಿ ಜಾರಿಗೊಳಿಸಲು ಬಹಳ ಅನುಕೂಲತೆ ಮಾಡಿಕೊಟ್ಟಿದೆ. ಬೌದ್ಧಿಕ ವಲಯವನ್ನು ತಮ್ಮ ಪರವಾಗಿರುವಂತೆ ಇಲ್ಲವೇ ಪ್ರತಿಕ್ರಿಯಿಸದಂತೆ, ದನಿಯೆತ್ತದಂತೆ ಮಾಡಿಡಲು ಬಹಳ ಅನುಕೂಲ ಮಾಡಿಕೊಟ್ಟಿದೆ. ಇವುಗಳು ಹಲವಾರು ದಲಿತ ದಮನಿತ ನಾಯಕರೆಂದು ಬಿಂಬಿಸಿಕೊಂಡಿರುವವರಿಗೂ ಹಾಗೆಯೇ ಜಾತಿ ಸಂಘಟನೆಗಳಿಗೂ ಅನ್ವಯಿಸುತ್ತವೆ.

ಈಗಿನ ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಫ್ಯಾಶಿಸ್ಟ್ ಚಿಂತನೆಗಳನ್ನು ಬೆಳೆಯುವ ಮಕ್ಕಳಲ್ಲೇ ಬಿತ್ತಿ ಬೆಳೆಸುವ ಶಕ್ತಿಗಳ ಪ್ರಯತ್ನಗಳ ವಿಚಾರದಲ್ಲೂ ಇದು ಎದ್ದು ಕಾಣುತ್ತಿದೆ. ಇದಕ್ಕೂ ಮೊದಲು ಪ್ರಜಾತಾಂತ್ರಿಕತೆ, ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಮೇಲಿನ ಫ್ಯಾಶಿಸ್ಟ್ ದಾಳಿಗಳು, ವೈಚಾರಿಕ ಬರಹಗಾರರು ಹಾಗೂ ಚಿಂತಕರ ಮೇಲಿನ ದೈಹಿಕ ದಾಳಿಗಳು, ಜನಸಾಮಾನ್ಯರ ಮೇಲಿನ ಕೋಮುವಾದಿ ದಾಳಿಗಳು ಇತ್ಯಾದಿ ವಿಚಾರಗಳಲ್ಲಿ ಕರ್ನಾಟಕದ ಬೌದ್ಧಿಕ ವಲಯ ಪ್ರತಿಕ್ರಿಯಿಸುತ್ತಾ ಬಂದಿರುವ ರೀತಿಗಳು ಹಾಗೂ ನಡೆಸಿರುವ ನಡೆಗಳಲ್ಲಿಯೂ ನಾವು ನೋಡಬಹುದು. ಈ ವಲಯ ಸಂಘಟಿತವಾಗಿ ನಿಂತು ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಎದುರಿಸಿ ನಿಲ್ಲದಿರುವುದು ಎದ್ದು ಕಾಣುತ್ತದೆ. ವಿರೋಧಿಸಿದವರು ಕೂಡ ಸಂಕುಚಿತವಾಗಿ, ಇಲ್ಲವೇ ಅಪ್ರಬುದ್ಧತೆಯಿಂದ, ಇಲ್ಲವೇ ಆಂಶಿಕವಾಗಿ, ಇಲ್ಲವೇ ತಮ್ಮ ಆಯ್ಕೆಯ ಘಟನೆಗಳಿಗೆ ಮಾತ್ರ ನಾಮಮಾತ್ರದ ಪ್ರತಿಭಟನೆ ದಾಖಲಿಸಿರುವುದೇ ಪ್ರಮುಖವಾಗಿ ಕಾಣುತ್ತವೆ. ಒಟ್ಟಾರೆಯಾಗಿ ನೋಡಿದಾಗ ಅನುಕೂಲಿತ ಪ್ರತಿಭಟನೆ, ತಮ್ಮ ಆಯ್ಕೆಯ, ನಾಮಮಾತ್ರದ ವಿರೋಧಗಳು ಉಳಿದಂತೆ ಮೌನವೇ ಪ್ರತಿಭಟನೆಯೇನೋ ಎಂಬಂತೆ ವರ್ತಿಸುವುದು ಕರ್ನಾಟಕದ ಬೌದ್ಧಿಕ ವಲಯದ ಹಲವರ ಪ್ರಮುಖ ಧೋರಣೆ ಎಂಬಂತಾಗಿದೆ.

ಈ ಗಂಭೀರ ಸತ್ಯವನ್ನು ಗ್ರಹಿಸಿ ಪರಿಹಾರದತ್ತ ಮುನ್ನಡೆಯುವ ಅಗತ್ಯ ಬಹಳವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ವಲಯದ ಎಲ್ಲರೂ ಒಂದಲ್ಲಾ ಒಂದು ನೆಪದಲ್ಲಿ ದಾಳಿಗಳಿಗೆ ಒಳಗಾಗುವ, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಅದರ ಲಕ್ಷಣಗಳು ಈಗಾಗಲೇ ಕಾಣತೊಡಗಿವೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News