ನಿರ್ದಿಷ್ಟ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ: ಪೂಜಾ ಶಕುನ್ ಪಾಂಡೆ ವಿರುದ್ಧ ಪ್ರಕರಣ ದಾಖಲು
ಅಲಿಗಢ: ನಿರ್ದಿಷ್ಟ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಲಪಂಥೀಯ ನಾಯಕಿಯೊಬ್ಬರ ವಿರುದ್ಧ ಉತ್ತರ ಪ್ರದೇಶದ ಅಲಿಗಢದಲ್ಲಿ ಪ್ರಕರಣ ದಾಖಲಾಗಿದೆ ಎಂದು NDTV ವರದಿ ಮಾಡಿದೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಂದು ಹೇಳಿಕೊಂಡಿರುವ ಸಾಧ್ವಿ ಅನ್ನಪೂರ್ಣ ಅಲಿಯಾಸ್ ಪೂಜಾ ಶಕುನ್ ಪಾಂಡೆ ವಿರುದ್ಧ ಅಲಿಗಢ ಪೊಲೀಸರು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಮಾಝ್ ನಿಷೇಧಿಸಬೇಕೆಂದು ಪೂಜಾ ಶಕುನ್ ಪಾಂಡೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ವಿವಾದಾತ್ಮಕ ಕೃತ್ಯಗಳು ಹಾಗೂ ಹೇಳಿಕೆಗಳಿಗಾಗಿ ಪಾಂಡೆಯನ್ನು ಕಳೆದ ಎರಡು ವರ್ಷಗಳಲ್ಲಿ ಅಲಿಗಢ ಪೊಲೀಸರು ಎರಡು ಬಾರಿ ಬಂಧಿಸಿದ್ದಾರೆ. ಆದರೆ ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ.
ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪೂಜಾ ಶಕುನ್ ಪಾಂಡೆ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ. ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 153ಎ/153ಬಿ/295ಎ/298/505 ಅಡಿಯಲ್ಲಿ ಪೊಲೀಸ್ ಠಾಣೆ ಗಾಂಧಿಪಾರ್ಕ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ'' ಎಂದು ಅಲಿಗಢ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ತಿಳಿಸಿದ್ದಾರೆ.
ಕಳೆದ ವರ್ಷ ಹರಿದ್ವಾರ "ಧರ್ಮ ಸಂಸದ್" (ಧಾರ್ಮಿಕ ಸಭೆ) ನಲ್ಲಿ ದ್ವೇಷಪೂರಿತ ಭಾಷಣಕ್ಕಾಗಿ ಪಾಂಡೆ ಮತ್ತು ಇತರ ಕೆಲವು ಹಿಂದೂ ಧಾರ್ಮಿಕ ಮುಖಂಡರ ವಿರುದ್ಧ ಉತ್ತರಾಖಂಡದ ಪೊಲೀಸರು ಕೇಸು ದಾಖಲಿಸಿದ್ದರು.