ಆರಾಧನಾ ಸ್ಥಳಗಳ ಕಾಯಿದೆ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸುವಂತೆ ಕೋರಿ ಸುಪ್ರೀಂ ಕದ ತಟ್ಟಿದ ಜಮೀಯತ್ ಉಲಮ

Update: 2022-06-07 09:42 GMT

ಹೊಸದಿಲ್ಲಿ: ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ಇದರ ಸಿಂಧುತ್ವವನ್ನು ಪ್ರಶ್ನಿಸಿ  ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸಬೇಕೆಂದು ಕೋರಿ ಜಮೀಯತ್ ಉಲಮ-ಇ-ಹಿಂದ್ ಸುಪ್ರೀಂ ಕೋರ್ಟಿನ ಕದ ತಟ್ಟಿದೆ. ಈ ಕಾನೂನು ಯಾವುದೇ ಆರಾಧನಾ ಸ್ಥಳದ ಪರಿವರ್ತನೆಯನ್ನು ನಿಷೇಧಿಸುತ್ತದೆ.

ಬಿಜೆಪಿ ನಾಯಕ ಹಾಗೂ ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಕಾನೂನನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದರೆ ದೇಶದಲ್ಲಿರುವ ಅಸಂಖ್ಯಾತ ಮಸೀದಿಗಳ ವಿರುದ್ಧ  ಕಾನೂನು ಹೋರಾಟಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಬಿಜೆಪಿ ನಾಯಕನ ಅರ್ಜಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲಿನಲ್ಲಿ ವಿವರಿಸಲಾಗಿದೆ.

``ಹಿಂದು ದೇವಸ್ಥಾನಗಳನ್ನು ಕೆಡವಿ ಹಿಂದೆ ಮಸೀದಿಗಳನ್ನು ನಿರ್ಮಿಸಲಾಗಿತ್ತು ಎಂದು ಆರೋಪಿಸಿ ಹಲವು ಮಸೀದಿಗಳಿಗೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಿರುವಾಗ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಗಣಿಸಿದರೆ ದೇಶದಲ್ಲಿ ಧಾರ್ಮಿಕ ಕಂದರ ಇನ್ನಷ್ಟು ಹೆಚ್ಚಾಗಬಹುದು,'' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಯಾವುದೇ ವ್ಯಕ್ತಿ ಅಥವಾ ಧಾರ್ಮಿಕ ಗುಂಪು ಒಂದು ಆರಾಧನಾ ಸ್ಥಳದ ಮೇಲೆ ಹಕ್ಕು ಸ್ಥಾಪಿಸಲು ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ನೀಡದೇ ಇರುವ ಕಾಯಿದೆಯ ಸೆಕ್ಷನ್ 2,3, 4 ಅನ್ನು ಬದಿಗೆ ಸರಿಸಬೇಕು ಎಂದು ಅಶ್ವಿನಿ ಉಪಾಧ್ಯಾಯ ಈ ಹಿಂದೆ ಸಲ್ಲಿಸಿದ ಅರ್ಜಿಯನ್ನಾಧರಿಸಿ ನ್ಯಾಯಾಲಯವು ಮಾರ್ಚ್ 2021 ರಲ್ಲಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

ಈ ಕಾನೂನಿನಡಿ ಅಯ್ಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿಚಾರಕ್ಕೆ ಮಾತ್ರ ವಿನಾಯಿತಿ ದೊರೆತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News