ಪಿಎನ್ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಪತ್ನಿ, ಇತರರ ವಿರುದ್ಧ ಇ.ಡಿ.ಯಿಂದ ಆರೋಪ ಪಟ್ಟಿ ಸಲ್ಲಿಕೆ
ಮುಂಬೈ, ಜೂ. 7: ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 13,000 ಕೋಟಿ ರೂಪಾಯಿಗೂ ಅಧಿಕ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ, ಅವರ ಪತ್ನಿ ಪ್ರೀತಿ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ ಅಡಿಯಲ್ಲಿ ಹೊಸ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇದು ಚೋಕ್ಸಿ ಪತ್ನಿ ಪ್ರೀತಿ ಪ್ರದ್ಯೋತ್ ಕುಮಾರ್ ಕೊಠಾರಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸುತ್ತಿರುವ ಮೊದಲನೆ ಆರೋಪ ಪಟ್ಟಿ. ಅಪರಾಧ ಎಸಗುವಲ್ಲಿ ಪತಿಗೆ ಪ್ರೀತಿ ನೆರವು ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯ ಅಪರಾಧ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಇ.ಡಿ. ಮುಂಬೈಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ದಂಪತಿಯ ಹೊರತಾಗಿ ಚೋಕ್ಸಿಯ ಮೂರು ಕಂಪೆನಿಗಳಾದ ಗೀತಾಂಜಲಿ ಜೆಮ್ಸ್ ಲಿಮಿಟೆಡ್, ಗಿಲಿ ಇಂಡಿಯಾ ಲಿಮಿಟೆಡ್ ಹಾಗೂ ನಕ್ಷತ್ರ ಬ್ರಾಂಡ್ ಲಿಮಿಟೆಡ್ ಹಾಗೂ ಪಿಎನ್ಬಿಯ ನಿವೃತ್ತ ಡೆಪ್ಯುಟಿ ಮ್ಯಾನೇಜರ್ (ಬ್ರಾಡಿ ಹೌಸ್ ಶಾಖೆ, ಮುಂಬೈ) ಗೋಕುಲ್ನಾಥ್ ಶೆಟ್ಟಿ ಅವರ ಹೆಸರನ್ನು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. 2018 ಹಾಗೂ 2020ರಲ್ಲಿ ಮೊದಲ ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಿದ ಬಳಿಕ ಜಾರಿ ನಿರ್ದೇಶನಾಲಯ ಸಲ್ಲಿಸುತ್ತಿರುವ ಮೂರನೇ ಆರೋಪ ಪಟ್ಟಿ ಇದಾಗಿದೆ.