ರಕ್ತ ಹೆಪ್ಪುಗಟ್ಟುವಿಕೆ ಕುರಿತು ಸಂಶೋಧನೆ: ಜಾಮಿಯಾ ಮಿಲ್ಲಿಯಾ ಪ್ರೊಫೆಸರ್ ಗೆ ವಿಸಿಟರ್ಸ್ ಆವಾರ್ಡ್
ಹೊಸದಿಲ್ಲಿ,ಜೂ.7: ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆ (ಹೈಪೊಕ್ಸಿಯಾ)ಗೆ ಒಡ್ಡಿಕೊಂಡಾಗ ರಕ್ತ ಹೆಪ್ಪುಗಟ್ಟುವ ನಿಗೂಢತೆಯನ್ನು ಬಗೆಹರಿಸುವ ಕುರಿತು ತನ್ನ ಪ್ರವರ್ತಕ ಸಂಶೋಧನೆಗಾಗಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ)ದ ಪ್ರೊಫೆಸರ್ ಝಾಹಿದ್ ಅಶ್ರಫ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರತಿಷ್ಠಿತ ವಿಸಿಟರ್ಸ್ ಆವಾರ್ಡ್ ಸ್ವೀಕರಿಸಿದರು. ಪ್ರಶಸ್ತಿಯು ಪ್ರಶಂಸಾಪತ್ರ ಮತ್ತು 2,50,000 ರೂ.ನಗದು ಬಹುಮಾನವನ್ನು ಒಳಗೊಂಡಿದೆ.
ಗರಿಷ್ಠ (29) ಪ್ರವೇಶಗಳನ್ನು ಸ್ವೀಕರಿಸಲಾಗಿದ್ದ ಜೀವಶಾಸ್ತ್ರೀಯ ವಿಜ್ಞಾನಗಳ ವಿಭಾಗದಲ್ಲಿ ಅಶ್ರಫ್ ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ ಎಂದು ಜೆಎಂಐ ತಿಳಿಸಿದೆ. ಕೇಂದ್ರೀಯ ವಿವಿಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ವಿಶ್ವಾದ್ಯಂತದ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು 2014ರಲ್ಲಿ ವಿಸಿಟರ್ಸ್ ಆವಾರ್ಡ್ಗಳನ್ನು ಸ್ಥಾಪಿಸಲಾಗಿತ್ತು. ಕೇಂದ್ರಿಯ ವಿವಿಗಳ ‘ವಿಸಿಟರ್’ ಆಗಿರುವ ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನಿಸುತ್ತಾರೆ.
ಅಶ್ರಫ್ ಅವರ ಸಂಶೋಧನೆಯ ಫಲಿತಾಂಶವು ಪರ್ವತಾರೋಹಣ, ಕ್ರೀಡೆಗಳು,ಪ್ರತಿಕೂಲ ಹವಾಮಾನಗಳಲ್ಲಿ ಯಾತ್ರೆ ಮತ್ತು ಯೋಧರ ಕಾರ್ಯ ನಿರ್ವಹಣೆ ಸಂದರ್ಭ ರಕ್ತ ಹೆಪ್ಪುಗಟ್ಟುವ ಬಗ್ಗೆ ನಮ್ಮ ತಿಳುವಳಿಕೆಗೆ ಒಳನೋಟಗಳನ್ನು ನೀಡಿದೆ. ಹೈಪೊಕ್ಸಿಯಾ ಮತ್ತು ಹೃದಯರಕ್ತನಾಳ ರೋಗಗಳನ್ನು ಉಂಟು ಮಾಡುವಲ್ಲಿ ಅದರ ನಿರ್ಣಾಯಕ ಪಾತ್ರದ ಕುರಿತು ಅಶ್ರಫ್ ಅವರ ಗಣನೀಯ ಕೊಡುಗೆಗಾಗಿ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಜೆಎಂಐ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆಎಂಐ ಕುಲಪತಿ ನಜ್ಮಾ ಅಖ್ತರ್ ಉಪಸ್ಥಿತರಿದ್ದರು.ಇದು ಜೆಎಂಐಗೆ ಸಿಕ್ಕಿರುವ ಎರಡನೇ ವಿಸಿಟರ್ಸ್ ಆವಾರ್ಡ್ ಆಗಿದೆ. 2015ರಲ್ಲಿ ಪ್ರೊ.ಸಾಮಿ ನೇತೃತ್ವದ ಕಾಸ್ಮಾಲಜಿ ಮತ್ತು ಆ್ಯಸ್ಟ್ರೋಫಿಜಿಕ್ಸ್ ಸಂಶೋಧನಾ ತಂಡವು ಪ್ರಶಸ್ತಿಗೆ ಪಾತ್ರವಾಗಿತ್ತು.