ಸಿಡಿಎಸ್ ಆಯ್ಕೆ ನಿಯಮ ಬದಲು; ನಿವೃತ್ತ, ಹಾಲಿ 3 ಸ್ಟಾರ್ ಅಧಿಕಾರಿಗಳಿಗೂ ಅವಕಾಶ

Update: 2022-06-08 02:40 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತೀಯ ಸೇನೆಯ ಭೂಪಡೆ, ವಾಯುಪಡೆ ಮತ್ತು ನೌಕಾಪಡೆಯ 4- ಸ್ಟಾರ್ ಅಧಿಕಾರಿಗಳನ್ನು ಮಾತ್ರವಲ್ಲದೇ ಹಾಲಿ ಸೇವೆಯಲ್ಲಿರುವ ಅಥವಾ ನಿವೃತ್ತ 3-ಸ್ಟಾರ್ ಅಧಿಕಾರಿಗಳನ್ನು ಕೂಡಾ ಸಿಡಿಎಸ್ ಹುದ್ದೆಗೆ ಪರಿಗಣಿಸುವ ಸಂಬಂಧ ಸಿಡಿಎಸ್ ಆಯ್ಕೆಯ ನಿಯಮವನ್ನು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಳೆದ ಡಿಸೆಂಬರ್ 8ರಂದು ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮೃತಪಟ್ಟ ಬಳಿಕ ಈ ಹುದ್ದೆ ಖಾಲಿ ಇದೆ. "ಆಯ್ಕೆ ಲಭ್ಯತೆ"ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ನಿಯಮಾವಳಿಯನ್ನು ಮಾರ್ಪಡಿಸಿದೆ.

ಹೊಸ ನಿಯಮಾವಳಿಯ ಪ್ರಕಾರ, ನಿವೃತ್ತ ಲೆಫ್ಟಿನೆಂಟ್ ಜನರಲ್‍ಗಳು, ಏರ್ ಮಾರ್ಷಲ್‍ಗಳು ಮತ್ತು ವೈಸ್ ಅಡ್ಮಿರಲ್‍ಗಳನ್ನು ಕೂಡಾ 62 ವರ್ಷಕ್ಕಿಂತ ಕಿರಿಯ ವಯಸ್ಸಿನವರಾಗಿದ್ದರೆ ಈ ಹುದ್ದೆಗೆ ಪರಿಗಣಿಸಬಹುದಾಗಿದೆ.

ಜೂನ್ 6ರಂದು ನಿಯಮಾವಳಿಗೆ ತಿದ್ದುಪಡಿ ತರಲಾಗಿದ್ದು, ವಯೋಮಿತಿಯನ್ನು 62 ವರ್ಷಕ್ಕೆ ನಿಗದಿಪಡಿಸಿರುವುದರಿಂದ ಇತ್ತೀಚೆಗೆ ನಿವೃತ್ತರಾದ ಜನರಲ್ ಎಂ.ಎಂ.ನರವಣೆ, ಅಡ್ಮಿರಲ್ ಕೆ.ಬಿ.ಸಿಂಗ್ ಮತ್ತು ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್.ಭಡಾರಿಯಾ ಸಿಡಿಎಸ್ ಹುದ್ದೆಗೆ ಅರ್ಹತೆ ಹೊಂದಿರುವುದಿಲ್ಲ. ಮೂವರು ಉಖ್ಯಸ್ಥರು 62 ನೇ ವರ್ಷದ ವರೆಗೆ ಅಥವಾ ಮೂರು ವರ್ಷಗಳ ಅಧಿಕಾರಾವಧಿಗೆ ಸೇವೆಯಲ್ಲಿ ಇರಬಹುದಾಗಿದೆ. ಸಿಡಿಎಸ್ ಮಾತ್ರ 65ನೇ ವರ್ಷ ವರೆಗೆ ಅಧಿಕಾರದಲ್ಲಿ ಇರುತ್ತಾರೆ.

ಈ ನಿಯಮಾವಳಿ ಬದಲಾವಣೆಯಿಂದಾಗಿ ಸರ್ಕಾರ, ಆರು ತಿಂಗಳ ವಿಳಂಬದ ಬಳಿಕ ಈ ಹುದ್ದೆಗೆ ನೇಮಕ ಮಾಡಲು ಮುಂದಾಗುತ್ತಿದೆ ಎನ್ನುವುದರ ಸೂಚಕವಾಗಿದೆ. ಜನರಲ್ ಮನೋಜ್ ಪಾಂಡೆ, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ಅಡ್ಮಿರಲ್ ಆರ್.ಹರಿಕುಮಾರ್ ಅವರು ಈ ಹುದ್ದೆಯ ರೇಸ್‍ನಲ್ಲಿರುವ ಪ್ರಮುಖರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News