ಪ್ರವಾದಿ ವಿರುದ್ಧ ಅವಹೇಳನಕಾರಿ ಟ್ವೀಟ್; ಬಿಜೆಪಿ ಮುಖಂಡ ಹರ್ಷಿತ್ ಶ್ರೀವಾಸ್ತವ ಬಂಧನ

Update: 2022-06-08 02:53 GMT
(ಫೋಟೊ ಕೃಪೆ -ndtv.com)

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಾಲ್ಕು ದಿನಗಳ ಬಳಿಕ, ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಆರೋಪದಲ್ಲಿ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಯುವ ಘಟಕದ ಪದಾಧಿಕಾರಿಯಾಗಿದ್ದ ಹರ್ಷಿತ್ ಶ್ರೀವಾಸ್ತವ ಬಂಧಿಸಲ್ಪಟ್ಟ ಆರೋಪಿ.

ಆಕ್ಷೇಪಾರ್ಹ ಪೋಸ್ಟ್ ಗಳ ಮೂಲಕ ಸೌಹಾರ್ದ ವಾತಾವರಣವನ್ನು ಕೆಡಿಸಲು ಯತ್ನಿಸಿದ ಆರೋಪದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.‌

"ಧಾರ್ಮಿಕ ಭಾವನೆಗಳ ಜತೆ ಆಟವಾಡಲು ಹೊರಟರೆ ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳುತ್ತೇವೆ" ಎಂದು ಕಾನ್ಪುರ ಪೊಲೀಸ್ ಆಯುಕ್ತ ವಿಜಯ್ ಮೀನಾ ಟ್ವೀಟ್ ಮಾಡಿದ್ದಾರೆ. ಆರೋಪಿಯ ಟ್ವೀಟ್ ಅನ್ನು ಆ ಬಳಿಕ ಡಿಲೀಟ್ ಮಾಡಲಾಗಿದೆ.

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಜ್ಞಾನವಾಪಿ ಮಸೀದಿ ವಿವಾದ ಸಂಬಂಧದ ಟಿವಿ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಕಾನ್ಪುರದಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಬಿಜೆಪಿ ನಾಯಕಿ ಹೇಳಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಮಾರುಕಟ್ಟೆ ಮುಚ್ಚಲಾಗಿತ್ತು.

ವಿವಾದದ ಸಂಬಂಧ ಬಿಜೆಪಿ ರವಿವಾರ ನೂಪುರ್ ಶರ್ಮಾ ಹಾಗೂ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಅಮಾನತು ಮಾಡಿತ್ತು. 16 ದೇಶಗಳು ಪ್ರವಾದಿ ವಿರುದ್ಧದ ಹೇಳಿಕೆಯನ್ನು ಬಲವಾಗಿ ಖಂಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News