ಮೋದಿ ಸರಕಾರದ 8 ವರ್ಷ; ನಿರುದ್ಯೋಗಿ ಯುವಜನರಿಗೆ ನರಕ ವಾಸ

Update: 2022-06-08 04:36 GMT

ಭಾಗ-1

ಜಗತ್ತಿನಲ್ಲಿಯೇ ಸಶಕ್ತ ದೇಶವನ್ನು ನಿರ್ಮಿಸುವ ಅವಕಾಶವನ್ನು ಮೋದಿಯವರು ಕೈಯಾರೆ ಹೊಸಕಿ ಹಾಕಿದರು. ಇಂದು ದೇಶದ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್‌ಡಿ ಮಾಡಿದವರು ಕೋಟ್ಯಾನುಕೋಟಿ ಯುವಕರು ಹಳ್ಳಿಗಳಲ್ಲಿ ಅವಮಾನ ಅನುಭವಿಸುತ್ತಾ ಇದ್ದಾರೆ. ನಗರಗಳಲ್ಲಿ ಸೆಕ್ಯುರಿಟಿ ಗಾರ್ಡುಗಳಾಗಿ, ಕಣ್ಣಿಗೆ ನಿದ್ದೆ ಇಲ್ಲದೆ ಓಲಾ, ಉಬರ್ ಟ್ಯಾಕ್ಸಿಗಳನ್ನು ಓಡಿಸಿಕೊಂಡು, ಸ್ವಿಗ್ಗಿ, ರೊಮ್ಯಾಟೊ ಮುಂತಾದ ಕಡೆ ಸೇಲ್ ಮಾಡುವವರಾಗಿ, ಗಾರ್ಮೆಂಟುಗಳಲ್ಲಿ ಕಾರ್ಮಿಕರಾಗಿ 8-10 ಸಾವಿರಕ್ಕೆ ದುಡಿಯುತ್ತಿದ್ದಾರೆ.

  ಯಾವುದೇ ದೇಶದ ಆರ್ಥಿಕತೆಗೆ ವೇಗ ಬರುವುದು ಅಲ್ಲಿನ ಯುವ ಜನರು ದುಡಿಮೆಯಲ್ಲಿ ತೊಡಗಿಕೊಂಡಾಗ ಮಾತ್ರ. ಯಾವುದೇ ನಾಗರಿಕವೆನ್ನಿಸಿಕೊಂಡ ರಾಷ್ಟ್ರದಲ್ಲಿ ಜನರ ತಿಳುವಳಿಕೆ, ಜ್ಞಾನ ಕೌಶಲಗಳಿಗೆ ಅನುಗುಣವಾದ ದುಡಿಮೆಗಳು ದೊರೆತರೆ ಮಾತ್ರ ಆ ಸಮಾಜ ಪ್ರಗತಿಯಲ್ಲಿದೆ ಎಂದು ಅರ್ಥ. ಜನರು ಖರ್ಚು ಮಾಡುತ್ತಿದ್ದರೆ ದೇಶದ ಆರ್ಥಿಕತೆಯ ಬೆಳವಣಿಗೆ ಸಮರ್ಪಕವಾಗಿರುತ್ತದೆ, ಇದು ಅರ್ಥಶಾಸ್ತ್ರದ ಸಾಮಾನ್ಯ ಜ್ಞಾನ. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತವರಿಗೆ ಇಷ್ಟು ಜ್ಞಾನವಿಲ್ಲದೆ ಹೋದರೆ ಅಂಥ ದೇಶ ಅರಾಜಕತೆಯತ್ತ ಸಾಗಿ ಅಧೋಗತಿಗೆ ಇಳಿಯುತ್ತದೆ. ಯುವ ಜನತೆ ಕೆಲಸ ಕೇಳಿದರೆ ಮೋದಿಯವರು ಪಕೋಡ ಮಾರಿ ಎನ್ನುತ್ತಾರೆ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ಯುವಕರು ಪಕೋಡ ಮಾರಲು ಹೋದರೆ, ಪಕೋಡ ಮಾರುವವರು ಎಲ್ಲಿಗೆ ಹೋಗಬೇಕು? ಇಷ್ಟಕ್ಕೂ ಒಬ್ಬ ಇಂಜಿನಿಯರ್ ಅನ್ನು ಸಿದ್ಧಪಡಿಸಲು ನಾಗರಿಕ ಸಮಾಜದ ದೊಡ್ಡ ಮೊತ್ತದ ತೆರಿಗೆ ಹಣವನ್ನು ಆತನ ಮೇಲೆ ವಿನಿಯೋಗಿಸಲಾಗಿರುತ್ತದೆ. ಜಗತ್ತಿನಲ್ಲಿಯೇ ಸಶಕ್ತ ದೇಶವನ್ನು ನಿರ್ಮಿಸುವ ಅವಕಾಶವನ್ನು ಮೋದಿಯವರು ಕೈಯಾರೆ ಹೊಸಕಿ ಹಾಕಿದರು. ಇಂದು ದೇಶದ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್‌ಡಿ ಮಾಡಿದವರು ಕೋಟ್ಯಾನುಕೋಟಿ ಯುವಕರು ಹಳ್ಳಿಗಳಲ್ಲಿ ಅವಮಾನ ಅನುಭವಿಸುತ್ತಾ ಇದ್ದಾರೆ. ನಗರಗಳಲ್ಲಿ ಸೆಕ್ಯುರಿಟಿ ಗಾರ್ಡುಗಳಾಗಿ, ಕಣ್ಣಿಗೆ ನಿದ್ದೆ ಇಲ್ಲದೆ ಓಲಾ, ಉಬರ್ ಟ್ಯಾಕ್ಸಿಗಳನ್ನು ಓಡಿಸಿಕೊಂಡು, ಸ್ವಿಗ್ಗಿ, ರೊಮ್ಯಾಟೊ ಮುಂತಾದ ಕಡೆ ಸೇಲ್ ಮಾಡುವವರಾಗಿ, ಗಾರ್ಮೆಂಟುಗಳಲ್ಲಿ ಕಾರ್ಮಿಕರಾಗಿ 8-10 ಸಾವಿರಕ್ಕೆ ದುಡಿಯುತ್ತಿದ್ದಾರೆ. ಬಿಜೆಪಿಯು ಒಂದು ಕಾಲದಲ್ಲಿ ಪದೇಪದೇ ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುತ್ತಿತ್ತು. ಆದರೆ 2014ರಿಂದ 2021ರ ವೇಳೆಗೆ 7 ವರ್ಷಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಜನ ಭಾರತದ ನಾಗರಿಕತ್ವವನ್ನೇ ಬಿಟ್ಟು ಹೊರ ದೇಶಗಳಿಗೆ ಹೋಗಿ ನೆಲೆಸಿದ್ದಾರೆ. ವಿಜ್ಞಾನ, ಅರ್ಥಶಾಸ್ತ್ರ, ಇಂಜಿನಿಯರಿಂಗ್, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿನ ಬುದ್ಧಿವಂತ ಯುವಕರು ದೇಶ ಬಿಟ್ಟು ಹೊರ ಹೋಗುತ್ತಿದ್ದಾರೆ. ಪ್ರತಿಭಾವಂತ ಯುವಕರು ದೇಶದಲ್ಲಿ ನೆಲೆಸಲು ಇಷ್ಟಪಡುತ್ತಿಲ್ಲ. ದಿನ ನಿತ್ಯವೂ ಹಿಂಸೆ, ಗೊಂದಲ, ಆರ್ಥಿಕ ಕುಸಿತ, ಜ್ಞಾನ-ವಿಜ್ಞಾನಗಳಿಗೆ ಇಲ್ಲದ ಆದ್ಯತೆ, ಕೋಮು ಸಂಘರ್ಷ, ಅಭಿವೃದ್ಧಿ ಶೂನ್ಯತೆ, ಸೃಷ್ಟಿಯಾಗದ ಉದ್ಯೋಗಗಳು ಇನ್ನಿತರ ಕಾರಣಗಳಿಗಾಗಿ ಜನರು ನಾಗರಿಕತ್ವ ತೊರೆಯುತ್ತಿದ್ದಾರೆ.

    ಉದ್ಯೋಗದ ವಿಚಾರದಲ್ಲಿ, ಯುವಜನರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಮೋದಿಯವರು ಈ 8 ವರ್ಷಗಳಲ್ಲಿ ಬಹಳ ದೊಡ್ಡ ಅನ್ಯಾಯ ಮಾಡಿದ್ದಾರೆ. ದೇಶದ ಯುವಶಕ್ತಿಯನ್ನು ಬಳಸಿಕೊಂಡು ದೇಶದ ಕೀರ್ತಿಯನ್ನು ಜಗತ್ತಿನ ಬಲಾಢ್ಯ ದೇಶಗಳ ಮಟ್ಟಕ್ಕೆ ಏರಿಸಬಹುದಾಗಿತ್ತು. ಆದರೆ ಯುವಕರ ಕನಸುಗಳೆಲ್ಲವೂ ಹುಣಸೆ ಹಣ್ಣನ್ನು ಹೊಳೆ ನೀರಿನಲ್ಲಿ ತೊಳೆದಂತೆ ತೊಳೆದು ಬಿಟ್ಟಿದ್ದಾರೆ. ದೇಶದ ಇಂದಿನ ಸರಾಸರಿ ವಯಸ್ಸು 28.3 ವರ್ಷ. ಭಾರತವು ಯುವಕರಿಂದ ತುಂಬಿರುವ ದೇಶ. ಸರಾಸರಿ ವಯಸ್ಸಿನಲ್ಲಿ ಜಗತ್ತಿನಲ್ಲೇ ಅತ್ಯಂತ ಕಿರಿಯ ದೇಶ ನಮ್ಮದು. 35 ವರ್ಷದ ಒಳಗಿರುವ ಯುವಕರ ಸಂಖ್ಯೆ ಶೇ.65ರಷ್ಟಿದೆ. ರಾಷ್ಟ್ರವೊಂದರ ಇತಿಹಾಸದಲ್ಲಿ ಬಹಳ ಅಪರೂಪಕ್ಕೆ ಈ ರೀತಿಯ ಅವಕಾಶಗಳು ದೊರೆಯುತ್ತವೆ. 25 ವರ್ಷದೊಳಗಿನ ವಯಸ್ಸಿನವರ ಸಂಖ್ಯೆ ಶೇ.50ರಷ್ಟಿದೆ. 2014ರಲ್ಲಿ 25 ವರ್ಷದವರಿದ್ದ ಯುವಕರು 2024 ಕ್ಕೆ 35 ವರ್ಷದವರಾಗುತ್ತಾರೆ. 20 ವರ್ಷದವರು 30 ವರ್ಷದವರಾಗುತ್ತಾರೆ. ಅಲ್ಲಿಗೆ ದೇಶದ ಕತೆ ಮುಗಿಯಿತು. 35 ವರ್ಷದ ಯುವಕರು ಬದುಕು ಕಟ್ಟಿಕೊಳ್ಳುವ ಅವಕಾಶ ಶೇ.75ರಷ್ಟು ಕುಸಿದು ಹೋಗುತ್ತದೆ. ಈ ಯುವಕರು ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ಇದು ಪ್ರಧಾನಿಯೊಬ್ಬರು ಹೇಳುವ ಮಾತೆ? ಇದಕ್ಕಿಂತ ವೇದನೆಯ ಸಂಗತಿ ಬೇರೆ ಇಲ್ಲ.

ಎಲ್ಲ ಸಂಪನ್ಮೂಲಗಳಿಗಿಂತ ಮಾನವ ಸಂಪನ್ಮೂಲ ಬಹಳ ದೊಡ್ಡದು ಎಂಬುದನ್ನು ಅಮೆರಿಕ, ಚೀನಾ ದೇಶಗಳು ಸಾಧಿಸಿ ತೋರಿಸಿವೆ. ಚೀನಾ ಇಂದು ಜಗತ್ತಿನ ಶ್ರೀಮಂತ ದೇಶ ಎಂದು ಕೆಲವೇ ದಿನಗಳ ಹಿಂದಷ್ಟೆ ಮಾಧ್ಯಮಗಳು ವರದಿ ಮಾಡಿದವು. ಆ ದೇಶದಲ್ಲಿ 140 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇದೆ. ಜನರು 3 ಜನ ಮಕ್ಕಳನ್ನು ಹೊಂದುವ ಅವಕಾಶ ನೀಡಿದೆ. ಇರುವ ಜನರಿಗೆ ಸಮರ್ಪಕ ಉದ್ಯೋಗವನ್ನೂ ನೀಡುತ್ತಿದೆ.

 ಜನಸಂಖ್ಯೆಯನ್ನು ಸಮಸ್ಯೆ ಎಂದು ಕೊಳ್ಳದೆ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಅಭಿವೃದ್ಧಿ ಹೊಂದುತ್ತಿರುವ ಚೀನಾದ ಕತೆ ಇದು. 1988ರಲ್ಲಿ ಚೀನಾವು 100 ಕೋಟಿ ಜನಸಂಖ್ಯೆಯನ್ನು ದಾಟಿತು. ಭಾರತ 2000ದ ಆಸುಪಾಸಿನಲ್ಲಿ 100 ಕೋಟಿ ಜನಸಂಖ್ಯೆಯ ಗಡಿ ದಾಟಿತು. 1988ರಲ್ಲಿ ಚೀನಾದ ಜನರ ತಲಾವಾರು ಜಿಡಿಪಿ 353 ಡಾಲರುಗಳಷ್ಟಿತ್ತು. ಭಾರತದ ಜನರ ತಲಾವಾರು ಜಿಡಿಪಿ 390 ಡಾಲರುಗಳಷ್ಟಿತ್ತು. ಚೀನಾ ತನ್ನ ಮಾನವ ಸಂಪನ್ಮೂಲ, ವೈಜ್ಞಾನಿಕ ಯೋಜನೆಗಳು, ಸಂಶೋಧನೆಗಳು ಮುಂತಾದವುಗಳ ಮೂಲಕ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸಿತು. ಈಗ ಚೀನಿಯನ್ನರ ತಲಾವಾರು ಜಿಡಿಪಿ 12,000 ಡಾಲರುಗಳಷ್ಟಿದೆ. ಭಾರತೀಯರ ತಲಾವಾರು ಆದಾಯದ ಜಿಡಿಪಿ 2020ರಲ್ಲಿ 1,877 ಡಾಲರುಗಳಷ್ಟಾಗಿದೆ. 2014ರಲ್ಲಿ 1,040 ಡಾಲರುಗಳಷ್ಟಿದ್ದ ಬಾಂಗ್ಲಾ ಜನರ ತಲಾವಾರು ಜಿಡಿಪಿ ಪ್ರಮಾಣ ಈಗ ಭಾರತಕ್ಕಿಂತಲೂ ಮೇಲೆ ಹೋಗಿ 1888 ಡಾಲರುಗಳಾಗಿದೆ. ಚೀನಾ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿತು. ಮೋದಿಯವರು ಪಕೋಡ ಮಾರಿ ಎಂದರು. ಹಾಗಾಗಿ ಮೋದಿಯವರು ಮತ್ತು ಅವರ ಸುತ್ತ ಮುತ್ತ ಇರುವ ಜನರಿಗೆ ದೇಶದ ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ಯಾವ ದೃಷ್ಟಿಕೋನವೂ ಇಲ್ಲ.

Writer - ಸಿದ್ದರಾಮಯ್ಯ

contributor

Editor - ಸಿದ್ದರಾಮಯ್ಯ

contributor

Similar News