ಮೊಬೈಲ್ ಗೇಮ್ ಆಡಲು ಅಡ್ಡಿ ಪಡಿಸಿದ ತಾಯಿಯನ್ನೇ ಗುಂಡಿಕ್ಕಿ ಸಾಯಿಸಿದ 16ರ ಬಾಲಕ
ಲಕ್ನೋ: ಮೊಬೈಲ್ ಗೇಮ್ ಆಡಲು ತಾಯಿ ಬಿಟ್ಟಿಲ್ಲ ಎಂಬ ಸಿಟ್ಟಿನಿಂದ 16 ವರ್ಷದ ಬಾಲಕನೊಬ್ಬ ತನ್ನ ತಂದೆಯ ಲೈಸನ್ಸ್ ಹೊಂದಿದ ರಿವಾಲ್ವರ್ ಬಳಸಿ ಆಕೆಯನ್ನು ಗುಂಡಿಕ್ಕಿ ಸಾಯಿಸಿದ್ದೇ ಅಲ್ಲದೆ ಲಕ್ನೋದಲ್ಲಿನ ಮನೆಯಲ್ಲಿ ತಾಯಿಯ ಮೃತದೇಹವನ್ನು ಎರಡು ದಿನ ಅಡಗಿಸಿಟ್ಟ ಘಟನೆ ವರದಿಯಾಗಿದೆ.
ರವಿವಾರ ಬೆಳಿಗ್ಗೆ ಈ ಘಟನೆ ನಡೆದಿದೆಯೆನ್ನಲಾಗಿದೆ. ಮೊಬೈಲ್ ಗೇಮ್ ಆಡುವ ಚಟ ಹೊಂದಿದ್ದ ಬಾಲಕ ಈ ವಿಚಾರದಲ್ಲಿ ತಾಯಿಯೊಂದಿಗೆ ಜಗಳಕ್ಕಿಳಿದು ನಂತರ ಆಕೆಯ ತಲೆಗೆ ಗುಂಡಿಕ್ಕಿದ್ದು ಆಕೆ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾಳೆ.
ನಂತರ ತನ್ನ ಒಂಬತ್ತು ವರ್ಷದ ಸೋದರಿಯ ಜೊತೆಗೆ ಎರಡು ದಿನ ಅದೇ ಮನೆಯಲ್ಲಿ ಕಳೆದಿದ್ದ ಬಾಲಕ ಅಡಗಿಸಿಟ್ಟ ಮೃತದೇಹದಿಂದ ವಾಸನೆ ಬರದೇ ಇರಲೆಂದು ರೂಂ ಫ್ರೆಶನರ್ ಬಳಸಿದ್ದ. ಈ ಕೊಲೆ ಬಗ್ಗೆ ಬಾಯ್ಬಿಟ್ಟರೆ ನಿನ್ನನ್ನೂ ಸಾಯಿಸುವುದಾಗಿ ಆತ ಬೆದರಿಕೆಯೊಡ್ಡಿದ್ದಾಗಿ ಆರೋಪಿಯ ಸೋದರಿ ತಿಳಿಸಿದ್ದಾಳೆ.
ಮನೆಗೆ ಯಾವುದೋ ಕೆಲಸಕ್ಕೆಂದು ಬಂದಿದ್ದ ಇಲೆಕ್ಟ್ರಿಶಿಯನ್ ತಾಯಿಗೆ ಗುಂಡಿಕ್ಕಿದ್ದ ಎಂದು ಬಾಲಕ ನಂತರ ತಂದೆಯ ಬಳಿ ಸುಳ್ಳು ಹೇಳಿದ್ದ. ಸೇನೆಯಲ್ಲಿ ಉದ್ಯೋಗದಲ್ಲಿರುವ ಆರೋಪಿ ಬಾಲಕನ ತಂದೆ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯದಲ್ಲಿದ್ದಾರೆ.
ಪೊಲೀಸರೊಂದಿಗೂ ಅದೇ ಕಟ್ಟುಕಥೆಯನ್ನು ಬಿಚ್ಚಿಟ್ಟಿದ್ದ ಬಾಲಕನನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.